Archive for the ‘ಶಬ್ದಚಿತ್ರ’ Category

ಲೈಬ್ರೆರಿಯ ಕಪಾಟಿನಲ್ಲಿ ಜೋಡಿಸಲ್ಪಟ್ಟಿರುವ ಪುಸ್ತಕಕ್ಕೆ ತನ್ನದೇ ಅಪ್ಯಾಯವಾದ ವಲಯವೊಂದಿದೆ. ಅದು ತನ್ನದೇ ಆದ ವಿಶಿಷ್ಟ ಪ್ರಪಂಚ ಹೊಂದಿದೆ. ಯಾರಾದರೂ ಒಮ್ಮೆ ಅದರೆಡೆಗೆ ಹೋಗಿ ಇಸ್ಪೀಟೆಲೆಯೊಂದನ್ನು ಎತ್ತುವಂತೆ ಪುಸ್ತಕವೊಂದನ್ನು ತೆರೆದರೆ ಸಾಕು, ಆತನನ್ನು ತನ್ನ ಪ್ರಪಂಚಕ್ಕೆ ಕೈ ಹಿಡಿದು ಎಳೆದೊಯ್ಯುತ್ತದೆ. ಪುಸ್ತಕದ ಮುಖಪುಟದಲ್ಲಿರುವ ಹೆಸರಿನ ಜೊತೆಗೆ, ಅದರ ಅಕ್ಷರದ ವಿನ್ಯಾಸ ಕೂಡ ಆ ಪ್ರಪಂಚದ ಬಾಗಿಲಿನ ಕೀಲಿಕೈ. ಒಳಪುಟಗಳ ಕಲೆ, ಚಿತ್ರಗಳು ಆ ಪ್ರಪಂಚದ ಕಿಟಕಿಯಾದೀತು. ಮತ್ತು ಅಲ್ಲಿಂದ ಒಳಬರುವ ಬೆಳಕಲ್ಲಿ ಓದುಗನ ಪ್ರಪಂಚ ಇನ್ನಷ್ಟು ಸ್ಪಷ್ಟ, ಇಷ್ಟವಾದೀತು.

ಪುಟ ತೆರೆದಾಗ ಅಲ್ಲಿ ಅರಳುವ ಗಂಧ ಬೇರೆಲ್ಲಿಯೂ ಸಿಗದು, ಆ ಪರಿಮಳಕ್ಕಾಗಿ ನೀವು ಲೈಬ್ರೆರಿಯ ತೋಟಕ್ಕೇ ಹೋಗಬೇಕಾಗುತ್ತದೆ. ಈ ವಿಶಿಷ್ಟ ಪರಿಮಳದ ಜೊತೆಗೆ ಯಾವುದಾದರೂ ಪುಸ್ತಕ ಓದಿ ಅದರ ಭಾವಗಳನ್ನು ಮನಸ್ಸಿಗೆ ಉದ್ದೀಪ್ತಗೊಳಿಸಿದರೋ ಅದೊಂದು ಮುದ್ರೆಯಂತೆ ಮನಸ್ಸಿನಲ್ಲೇ ಉಳಿದುಬಿಡುತ್ತದೆ. ಮೆದುಳ ಪದರದೊಳಗೆ ಪರಿಮಳದ ಜೊತೆಗೆ ಓದಿದ ಭಾವವೂ ಲಾಕ್ ಆಗಿರುತ್ತದೆ. ಎಷ್ಟೋ ವರ್ಷಗಳ ನಂತರ ನೀವು ಆ ಪುಸ್ತಕ ಓದಬೇಕಿಲ್ಲ, ಸುಮ್ಮನೆ ಆ ಪರಿಮಳವನ್ನು ಮತ್ತೆ ಹಾಯ್ದರೂ ಸಾಕು, ಫಕ್ಕನೆ ಮಾಯಾದೀವಿಗೆಯಿಂದ ಹೊರಬಂದ ಜೀನಿಯಂತೆ ಯಾವತ್ತೋ ಓದಿದ ಭಾವ ಎದುರು ಬಂದು ನಿಲ್ಲುತ್ತದೆ. ಭಾವನೆಗೂ ಸುಗಂಧಕ್ಕೂ ಸಂಬಂಧವಿರುವುದು ಅರಿವಾಗುವುದು ನವಿರು ಪುಟವನ್ನು ಬೆರಳು ಪ್ರೀತಿಯಿಂದ ಸವರಿದಾಗಲೇ.

ಲೈಬ್ರೆರಿಯ ಮೌನದಲ್ಲಿ ಜ್ಞಾನದ ಅಲೆಗಳು ಓಡಾಡುತ್ತಿರುತ್ತದೆ. ಅಲ್ಲಿನ ಮೌನಕ್ಕೆ ದೇವಸ್ಥಾನದ ಭಕ್ತಿಯ ಲೇಪವಿದೆ. ಅದಕ್ಕೆ ಅದರದ್ದೇ ಆದ ಆಲಾಪವಿದೆ. ಕಿಟಕಿಯಾಚೆ ಹೆಸರಿಲ್ಲದ ಹಕ್ಕಿಯೊಂದು ಎಸೆದು ಹೋದ ಶಬ್ದಕೆ ಲೈಬ್ರೆರಿಯ ಮೌನ ವಿಚಲಿತವಾಗುವುದಿಲ್ಲ. ಒಂದು ವೇಳೆ ಈ ಲೋಕದ ಮೌನದ ಫ್ಲವರ್ ವಾಸ್ ಫಳ್ಳಂತ ಒಡೆಯುವುದು ನೋಡಲೇಬೇಕಾದರೆ ನಿರ್ವಾಹಕನನ್ನು ಗಮನಿಸಬೇಕಾಗುತ್ತದೆ. ಮೆತ್ತನೆ ಹತ್ತಿಯಂಥ ಧ್ವನಿಯಲ್ಲಿ ಮಾತಾಡಿಸಿದರೂ ಆತ ಮಾತ್ರ ತನ್ನ ಉತ್ತರವನ್ನು ಎತ್ತರದ ದನಿಯ ಗತ್ತಿನಲ್ಲೇ ನೀಡುತ್ತಾನೆ. ಸದ್ದಿಲ್ಲದ ಲೋಕದಲ್ಲಿ ಮುಳುಗಿದ ಓದುಗರು ಒಮ್ಮೆ ತಲೆಯೆತ್ತಿ ತನ್ನ ನೋಡುವರು ಅನ್ನುವ ಹೆಮ್ಮೆಯೊಂದು ಆತನ ಓರೆನೋಟದ ಎಡೆಯಲ್ಲಿರುತ್ತದೆ. ಇನ್ನು ರಸ್ತೆಯ ವಾಹನಗಳ ಹಾರ್ನಿನ ಸದ್ದು, ಕಾಲೇಜು ಯುವಕನ ಗಾಡಿಯ ಹೈ ವೀಲಿಂಗ್ ನ ಸದ್ದು, ಪಕ್ಕದಲ್ಲಿರುವ ಮೈದಾನದ ಕ್ರಿಕೆಟ್ಟಿನಲ್ಲಿ ವಿಕೆಟ್ಟು ಬಿದ್ದುದಕ್ಕೆ ಮೂಡುವ ಉದ್ಘೋಷದ ಸದ್ದುಗಳೆಲ್ಲವು ಲೈಬ್ರೆಯ ಸರಹದ್ದಿನಲ್ಲಿರುವ ಲಕ್ಷ್ಮಣ ರೇಖೆ ದಾಟಿಬಂದರೂ ಅದು ಮಹತ್ವವಿಲ್ಲದೇ ಹೋಗುವ ಮಾಯಾಲೋಕ ಇಲ್ಲಿ ಸೃಷ್ಟಿಯಾಗಿರುತ್ತದೆ. ಇನ್ನು, ಎಲ್ಲೋ ಲೇಖಕನ ಪೆನ್ ಡ್ರಾಪ್ ಸೈಲೆನ್ಸ್ ನಿಂದ ಮೂಡಿದ ಅರ್ಥದ ಸದ್ದು, ಇಲ್ಲಿನ ಪಿನ್ ಡ್ರಾಪ್ ಸಿಲೆನ್ಸಿನಲ್ಲಿ ಸ್ಪಷ್ಟವಾಗಿ ಕೇಳಬಹುದು. ಲೈಬ್ರೆರಿಯ ನಿರ್ವಾಹಕ, ಸೈಲೆನ್ಸ್ ಪ್ಲೀಸ್ ಎಂದು ಬರೆದು ಹಾಕಿದ ಬೋರ್ಡು ಗಾಳಿಗೆ ಅಲುಗಿ ಮಾಡುವ ಸದ್ದು ಸಹಿಸಿದರೂ, ಪುಟ್ಟ ಪಿಸುಗುಟ್ಟುವಿಕೆಗೆ ಭುಸುಗುಟ್ಟಬಲ್ಲ.

ಬಹುತೇಕ ಎಲ್ಲಾ ಲೈಬ್ರೆರಿಯ ಓದುಗರಲ್ಲೂ ಒಬ್ಬ ಒಂದು ಸಾಲಿನ ವಿಮರ್ಶಕ ಇದ್ದೇ ಇರುತ್ತಾನೆ. ಅವನು ಯಾವುದೋ ಗಲ್ಲಿಯ, ಯಾವುದೋ ಮನೆಯ, ಯಾವುದೋ ಕೋಣೆಯಲ್ಲಿ ಕುಳಿತೇ ಇಲ್ಲಿ ಲೈಬ್ರೆರಿಯ ಪುಸ್ತಕಗಳ ಕಪಾಟಿನ ಸಾಲುಗಳ ಮಧ್ಯೆ ಕಳೆದುಹೋದ, ಕನ್ ಫ್ಯೂಸ್ ಆದ ವ್ಯಕ್ತಿಗೆ ದಾರಿ ತೋರಬಲ್ಲ. ಇಷ್ಟಕ್ಕೂ ಅವನು ಮಾಡುವುದಿಷ್ಟೇ; ಓದಿದ ಪುಸ್ತಕಗಳಲ್ಲಿ this is a very good book ಅಂತ ಕುತ್ತಿಗೆ ಒತ್ತಿ ಬರೆಸಿರುವಂತಿರುವ ಕೈಬರಹದಲ್ಲಿ ಬರೆಯುತ್ತಾನೆ. ಹೀಗೆ ಯಾವ ಪುಸ್ತಕ ಆರಿಸಲಿ ಅಂತ ಲೈಬ್ರೆರಿಯ ಕಪಾಟಿನ ಸಾಲುಗಳ ಮಧ್ಯೆ ಕಳೆದುಹೋದ ಅಭಿಮನ್ಯುವಿಗೆ ದಾರಿ ತೋರಿಸಬಲ್ಲ.

ಇನ್ನೂ ಪುಸ್ತಕದ ಒಳದಾರಿಗಳಲ್ಲಿ ಹೋಗಿ ಇಂಥ ಒನ್ ಲೈನ್ ವಿಮರ್ಶೆಯನ್ನು ಓದುವ ವ್ಯವಧಾನವಿಲ್ಲದವರು ಮತ್ತೊಂದು ಮಾರ್ಗೋಪಾಯ ಕಂಡು ಹಿಡಿದಿದ್ದಾರೆ. ಅದು ಪುಸ್ತಕದ ಹಿಂಭಾಗದಲ್ಲಿ ಅಂಟಿಸಿರುವ ಚೀಟಿಯನ್ನು ಗಮನಿಸುವುದು. ಕೊನೆಯ ದಿನಾಂಕಗಳಿಂದಲೇ ಅರಳಿರುವ ಕೊನೆಯ ಪುಟವದು. ಒಂದು ಪುಸ್ತಕ ಊರಿನ ಒಂದು ಮೂಲೆಯ ಮನೆಯಲ್ಲಿನ ಕೋಣೆಯಿಂದ ಮುಕ್ತಿ ಪಡೆವ, ಮತ್ತೊಂದ್ಯಾವುದೋ ಕೋಣೆಯೊಳಗೆ ಹೋಗಲು ಅವಕಾಶಕ್ಕೆ ಅನುಮತಿ ಸಿಗುವ ದಿನಾಂಕಗಳವು. ಅವೇ ಪುಸ್ತಕದ ಪಾಲಿನ ಸ್ವಾತಂತ್ರ್ಯದಿನಗಳು. ಆ ಪುಟ ಪೂರ್ತಿ ದಿನಾಂಕಗಳೇ ತುಂಬಿದ್ದರೆ ಅಂಥ ಪುಸ್ತಕವನ್ನು ಹೆಚ್ಚು ಓದುಗರು ಕೊಂಡೊಯ್ದಿದ್ದಾರೆ ಹಾಗಿದ್ದಾಗ ಇದು ಬಹುಶಃ ಚೆನ್ನಾಗಿರುವ ಪುಸ್ತಕ ಅಂತಲೇ ಆತ ಭಾವಿಸುತ್ತಾನೆ. ಕೋಟ್ಯಾಧಿಪತಿಯಲ್ಲಿನ ಆಡಿಯೆನ್ಸ್ ವೋಟಿಂಗ್ ಮಾದರಿಯಲ್ಲಿ ಆ ಪುಸ್ತಕವನ್ನೇ ಆರಿಸಿ ಒಯ್ಯುತ್ತಾನೆ.ಇಂಥದ್ದೊಂದು ಉಪಾಯವನ್ನು ಕಂಡುಹಿಡಿದ ಅಂಥ ಓದುಗರನ್ನು ಲೈಬ್ರೆರಿಯೆಂಬ ಭೋಧನ ವೃಕ್ಷದ ಕೆಳಗೆ ಜ್ಞಾನೋದಯಗೊಂಡ ಬುದ್ಧರೆನ್ನಬಹುದು.

ಯಾವುದೋ ಒಂದು ಬೆಡ್ರೂಮಿನಲ್ಲಿ ಓದುತ್ತಾ ಓದುತ್ತಾ ಓದುಗ ಇನ್ನೇನು ಪುಸ್ತಕದ ಮೇಲೆಯೇ ಬಿದ್ದು ಬಿಡುತ್ತಾನೆ ಅನ್ನುವಾಗ ಪುಸ್ತಕಗಳಲ್ಲಿನ ಅಂಡರ್ ಲೈನ್ ಆಗಿರುವ ಸಾಲುಗಳು ಎಚ್ಚರಿಸುತ್ತದೆ. ಓದುತ್ತಿದ್ದೇನೆಂಬ ಭಾವದಲ್ಲಿದ್ದುಕೊಂಡು ಓದುವ ಭರದಲ್ಲಿ ಅರ್ಥದ ಹಳಿತಪ್ಪಿ ಸಾಗುವ ಓದುಗನನ್ನೂ ಇಂಥ ಅಡಿಗೆರೆಗಳು ಎಬ್ಬಿಸುತ್ತಿರುತ್ತದೆ. ಮತ್ತೆ ರಸದ ಹಳಿ ಮೇಲೆ ಯಾರದೋ ಅನುಭವವು ನಮ್ಮ ಅನುಭೂತಿಯಾಗಬಲ್ಲಂಥ ಗಮ್ಯದೆಡೆಗೆ ಸಾಗುವ ಉಮೇದು ಕೊಡುತ್ತದೆ.

ಹಾಗೇನೆ ಕೊನೆ ಪುಟದಲ್ಲಿನ ಸಸ್ಪೆನ್ಸ್ ಒಂದನ್ನು ಮೊದಲನೇ ಪುಟದಲ್ಲೇ ಬರೆವ ಚಾಳಿಗೂ ಓದುಗ ಸಿಲುಕಬೇಕಾಗುತ್ತದೆ. ಸಸ್ಪೆನ್ಸ್ ಸಿಕ್ಕಿದ ಸಿಟ್ಟಿನಲ್ಲೂ (ಏನಾದರೂ ಸಿಕ್ಕಿದರೂ ಸಿಟ್ಟಾಗುವ ಸಂಗತಿ ಬಹುಶಃ ಇದು ಒಂದರಲ್ಲೇ ಇರಬೇಕು!) ಓದುಗನಿಗೆ ಒಳಸುಳಿಯಲ್ಲಿ ಗಮ್ಯಕ್ಕಿಂತ ಗಮ್ಯದೆಡೆಗೆ ಸಾಗುವ ದಾರಿ ಕೂಡ ಮಹತ್ವದ್ದು ಎಂಬ ಪಾಠವೂ ಸಿಗುತ್ತದೆ. ಚೋಮನ ದುಡಿ, ಮಲೆಗಳಲ್ಲಿ ಮದುಮಗಳು ಪುಸ್ತಕದಲ್ಲಿ ಎಂಥ ಸಸ್ಪೆನ್ಸ್ ಇರುತ್ತದೆ, ಆದರೂ ಮತ್ತೆ ಮತ್ತೆ ಓದಿಸಿಕೊಳ್ಳಲು ಕಾರಣ ಅದು ಸೃಷ್ಟಿಸಿದ ಮಾಯಾಲೋಕ ಮತ್ತು ಅದು ವಿವರಿಸುವ ಜೀವನಕ್ರಮ, ನಿರೂಪಣೆಯ ವಿನ್ಯಾಸದಲ್ಲೇ ಇದೆ.

ಪುಸ್ತಕ ಸೃಷ್ಟಿಸಿದ ಮಾಯಾಲೋಕದೊಳಗೆ ಸಿಕ್ಕಿ ದಾರಿತಪ್ಪಿದವರ ಮತ್ತೆ ಕೆಲವುಸಲ ಓದಿನ ಹಾದಿಯಲ್ಲಿ ಸುಸ್ತಾದವರ ತಂಪಿನ ನೆಳಲಿನ ನೆನಪಿಗೆಂದೆ ಕೆಲವು ಪುಸ್ತಕಗಳಲ್ಲಿ ಕಿವಿಹಿಂಡಿದ ಪುಟಗಳಿರುತ್ತದೆ. ಆ ಪುಟಗಳು ಓದುಗರ ಪಾಲಿನ ಇಂಟರ್ ವಲ್. ಕೆಲವರು ಹತ್ತಿರದಲ್ಲಿ ಪೆನ್ಸಿಲ್ ಇಟ್ಟುಕೊಂಡಿರದ ತಮ್ಮ ತಪ್ಪಿಗೆ ಚಂದದ ಕೊಟೇಶನ್ ಇರುವ ಪುಟದದ ಕಿವಿ ಹಿಂಡಿ ಬಿಟ್ಟಿರುತ್ತಾರೆ.

ಹೊಸಾ ಲೇಖಕನೊಬ್ಬ ವಿಶಾಲ ಲೈಬ್ರೆರಿಯ ಕಪಾಟಿನ ಮಧ್ಯೆಯಲ್ಲಿ ತನ್ನ ಪುಸ್ತಕವೊಂದನ್ನು ತುಂಬು ಸಂಕೋಚದಿಂದ ಹಿಡಿದು, ಎಸ್ಸೆಲ್ಸಿ ಹುಡುಗನೊಬ್ಬ ರಿಸಲ್ಟ್ ನೋಡುವಾಗಿನಂಥಹ ಹಿಂಜರಿಕೆಯಿಂದ ಕೊನೆಭಾಗದಲ್ಲಿರುವ ಕೊನೆದಿನಾಂಕಗಳ ಪಟ್ಟಿ ಮೇಲೆ ಕಣ್ಣಾಡಿಸುವಾಗ ಆತನ ಕಣ್ಣುಗಳು ಖುಷಿಯಿಂದ ಪ್ರದೀಪ್ತವಾಗಲಿ. ಮನದ ನಾಲಿಗೆಗೆ ಓದಿನ (ಅಭಿ)ರುಚಿ ಹತ್ತಿಸಿದ ಅಡುಗೆಭಟ್ಟನ ಖುಷಿ ಅವನದಾಗಲಿ. ಸಾಲು ಕಪಾಟಿನಲ್ಲಿರುವ ಯಾವುದೇ ಲೇಖಕನ ಯಾವುದೇ ಪುಸ್ತಕಗಳಿಗೆ ಓದಿಲ್ಲದ ಗುರುತಿನಂತಹ ಧೂಳು ಅಂಟದಿರಲಿ.

ಯಾಕೆಂದರೆ,

ಮುಂಬೈನ ಬಾಂದ್ರಾದಲ್ಲೋ, ಮಂಗಳೂರಿನ ಬಂದರಲ್ಲೋ, ಮನೆಮೂಲೆಯ ಟೇಬಲಿನಲ್ಲೋ ಕುಳಿತು ಬರೆವ ಲೇಖಕನ ಹೊಳಹು, ಭಾವವಿನ್ಯಾಸ, ಜೀವನದ್ರವ್ಯವೊಂದು ಇನ್ಯಾವುದೋ ಹಳ್ಳಿಯಲ್ಲಿ, ವಿಶಾಲ ಹಜಾರದಲ್ಲಿ, ಟೀವಿಯ ಸೆಳೆತವನ್ನೂ ಹತ್ತಿಕ್ಕಿ, ಪಕ್ಕಕ್ಕಿರಿಸಿ, ತನ್ನೊಳಗಿನ ಮೌನದಲ್ಲಿ ಕುಳಿತು ಓದುವ ಓದುಗನ ಮನದಲ್ಲಿ ಮೂಡಿಸುವ ಬೆಳಕಿದೆಯಲ್ಲ, ಅದು ವಿಶಿಷ್ಟ ಮತ್ತು ವಿಶೇಷವಾದ್ದು.

 

(‘ಸಖಿ’ ಪಾಕ್ಷಿಕದಲ್ಲಿ ಪ್ರಕಟವಾಗಿದೆ.)

ನದೀ ತಟದಲ್ಲಿ
ಕುರಿ ಹುಲ್ಲು ಮೇಯುತ್ತಿತ್ತು
ನೀ
ರಲ್ಲಿ
ಮೀನ ಮೇಷ
ಎಣಿಸುತಿತ್ತು.

******

ಗಾಳ ಹಾಕಿ
ಕಾಯುತ್ತಾ ಕುಳಿ
ತಿದ್ದೆ.
ಕೊನೆಗೂ ಒಂದು
ಮೀನಿಗೆ ಸಿಕ್ಕಿಹಾಕಿಕೊಂಡೆ.

*******

ಕಣ್ಣು ಮೀನಿದ್ದು
ಆಗಿರಬಹುದು
ಆದರೆ ಕಣ್ಣೀರು
ಮೊಸಳೆದ್ದು ಆಗಿರಬಾರ್ದು ಕಣ್ರೀ!

ಮೊನ್ನೆ ಪಟ್ಟು ಹಿಡಿದು ಕೂತು

ನಿಯತ್ತಾಗಿ, ಎಡಗೈ ಎದೆ ಮೇಲೆ ಹಿಡಿದು

ನನ್ನ ಬಗ್ಗೆ

ಇನ್ನೊಬ್ಬನ ಬಗ್ಗೆ

ಇತ್ತೀಚೆಗೆ ನಾ ನೋಡಿದ ಘಟನೆ ಬಗ್ಗೆ

ಮತ್ತು ನಾ ಓದಿದ ವಿಷಯದ ಬಗ್ಗೆ

ಬರೆದೆ,

ಮತ್ತು

ಇವತ್ತು ಅದನ್ನು ಓದಿ

ನನ್ನ ನಿಲುಕಿಗೆ ಸಿಕ್ಕ ಸತ್ಯ ಪರಿಶೀಲಿಸಿದೆ.

 

ಇಡೀ ಇತಿಹಾಸದ ಮೇಲಿನ

ನಂಬಿಕೆಯೆಲ್ಲಾ

ಉಡುಗಿಹೋಯ್ತು.

ಬರವಣಿಗೆ : ತನ್ನೊಳಗಿನ ಭಾವಗಳಿಗೆ ನ್ಯಾಯ ದೊರಕಿಸಿಕೊಡಲು ಬರಹಗಾರ ಮಾಡುವ ಪದಯಾತ್ರೆ.

ನೀಲಾಂಜನ : ಅಮ್ಮ ಹಚ್ಚಿಟ್ಟ ನೀಲಾಂಜನಕ್ಕೆ ರಾತ್ರಿ ಅಲ್ಲಾಡುತ್ತಿದೆ!

ಸಾವು :  ಕರೆಯದೇ ಬಂದವರು, ಕರೆದೊಡನೆ ಹೊರಡುವರು

ಲಾಂದ್ರ : ಪವರ್ ಕಟ್ ಸಮಯದಲ್ಲಿ ಮನೆಯಾಗಸದ ಚಂದ್ರ.

ಚಿಗುರು : ಸತ್ತು ಬಡಗಿಯ ಕೈಯಲ್ಲಿ ಭರ್ಜರಿ ಸರ್ಜರಿ ಮಾಡಿಸಿಕೊಂಡ ಕೊಳಲು ತನ್ನೆಲ್ಲಾ ತೂತುಗಾಯದ ಮಧ್ಯೆಯೂ ಎಲ್ಲರ ಎದೆಯೊಳಗೆ ರಾಗವಾಗಿ ಚಿಗುರೊಡೆದಿದೆ.

1126_OrangeMaples

 

ವಾಸ್ತವ :  ರಾತ್ರಿ ಮೆಲ್ಲ ಬಂದು ಕನಸು ಕದಿಯದಿರಲಿ ಎಂದು ರೆಪ್ಪೆಯ ಲಾಕರಿನೊಳಗಿಟ್ಟಿದ್ದೆ; ಮುಂಜಾವು ಕಣ್ಣೆದುರೇ ಎಲ್ಲಾ ಲೂಟಿಗೈದಿತು.

ಮಿನುಗು : ಚಂದಿರನಿಲ್ಲದ ರಾತ್ರಿಗೆ ಕತ್ತಲ ಆಗಸದಂಗಳದಲ್ಲಿ ಭಯದಿಂದ ನಡುತಿದೆ ನಕ್ಷತ್ರಗಳು.

ಚಿಗುರು : ನೀರ ಹನಿ ಬೇರಿಗಿತ್ತ ಮುತ್ತಿಗೆ ಕೊರಡು ಕೊಂಬೆಗೆ ಮೂಡಿದ ರೋಮಾಂಚ!

ಚಕ್ರ : ಅವನಿಗೆ ಬಿದ್ದ ಕನಸಲ್ಲಿ, ಹಗಲಾಗಿ ಕೆಲಸಕ್ಕೆ ಹೋಗಿ ಸಂಜೆ ಸುಸ್ತಾಗಿ ಬಂದು ನಿದಿರೆಯಲಿ ಮುಳುಗಿ ಕನಸು ಕಾಣತೊಡಗಿದ.

 

(ಚಿತ್ರಕೃಪೆ : ಇಲ್ಲಿಂದ )

೧. ಇಬ್ಬನಿ : ಹೂವ ಮೊಗ್ಗು ಪರಿಮಳ ಹೆರುವಾಗ ಸುರಿದ ದಳದಳ ಬೆವರು!

೨. ಚಂದಿರ : ತಂಟೆಪುಟ್ಟ ತರಲೆಯಿಲ್ಲದೇ ಕೈತುತ್ತು ತಿನ್ನುವಂತೆ ಮಾಡಲು ಅವ್ವ ಬಳಸುವ ಅಮೂಲ್ಯ ಆಟದ ಸಾಮಾನು.

೩. ಮಳೆ : ಭೂತಾಯಿ ಬರೆದ ಅದ್ಭುತ ಹಸಿರು ಕವಿತೆಗೆ ಆಗಸ ಸುರಿಸಿದ ಚಪ್ಪಾಳೆ ಪುಷ್ಪವೃಷ್ಟಿ!

೪. ರಾಗ : ಕೊಳಲಿಗೆ ಕಿವಿಗೊಟ್ಟೆ, ಕಿವಿಯೆಲ್ಲಾ ಕಾವ್ಯ!

೫. ವಿಪರೀತ : ನಡುಗುವ ಚಳಿಯೆಂದು ಕಂಬಳಿ ಹೊದ್ದರೆ ಒಳಗೆ ಉರಿಉರಿ ಸೆಕೆ!

೬. ಕಿಟಕಿ : ನೀನು ಸಿಗದೇ ಇದ್ದ ದಿನಗಳಲಿ ಕೊಂಚ ಸಿಟ್ಟಿನಲಿ, ಕೊಂಚ ಬೇಸರದಲಿ ಇಡೀ ಜಗತ್ತನ್ನು ಕಿಟಕಿಯ ಕಂಬಿಗಳಾಚೆಗಿನ ಜೈಲಿನಲಿ ಕೋಳ ತೊಡಿಸಿಡುತ್ತೇನೆ.

೭. ಸಾಗರ : ನನಸಾದ ಸಾವಿರಾರು ತೊರೆಗಳ ಕನಸು.

೮. ಬೇರು : ನೀರ ಮೇಲಿನ ಪ್ರೀತಿಗೆ ಭೂಮಿ ಬಗೆವ ಶಕ್ತಿ.

 

(ಇದು ವಿ.ಕ. ದ ಸಿಂಪ್ಲಿಸಿಟಿ ಪೇಜಿನಲ್ಲಿ ಪ್ರಕಟವಾಗಿದೆ)

ಬೆಳಗು : ಕೆಲಸವಿಲ್ಲದವನ ಪಾಲಿನ ಮುಸ್ಸಂಜೆ.

ಪ್ರೀತಿ : ಬದುಕಿನ ಸಾಲ ಪಡೆದಿದ್ದಕ್ಕೆ ಸಲ್ಲಿಸಬೇಕಾದ ಇ.ಎಮ್. ಐ.

ನೆನಪು : ಕರೆಂಟು ಹೋದಾಗಿನ ಮೊಂಬತ್ತಿ.

ಭಗ್ನಪ್ರೇಮಿ : ಮುಳುಗಿಹೋಗುವಷ್ಟು ನಷ್ಟದಲ್ಲಿದ್ದರೂ ಕಾಂಟ್ರಾಕ್ಟಿನ ಪ್ರಕಾರ ಕೆಲಸ ಮುಗಿಸಿಕೊಡಬೇಕಾದ ಅನಿವಾರ್ಯತೆ ಇರುವವ.

ವೃದ್ಧಾಪ್ಯ : ಹೂದಳದ ಅಂಚಿನಲ್ಲಿರುವ ಇಬ್ಬನಿ.

leaf

ರಾತ್ರಿ : ಬದುಕಿನ ದಾರಿಗೆ ಬೇಕಾಗುವ, ಕನಸಿನ ಇಂಧನ ತುಂಬಿಸಿಕೊಳ್ಳಲೋಸುಗ ಇರುವ ನಿಲ್ದಾಣ.

ಗೆಲುವು : ಗಮ್ಯವಿಲ್ಲದ, ವ್ಯಾಖ್ಯೆಗೆ ಸಿಗದ ಅರಸುವಿಕೆ.

ಕನಸು : ಬೇಕಾದ್ದನ್ನು ಜೀವಿಸಲು, ನೆಮ್ಮದಿಯಾಗಿರಲು ಉಚಿತ ಪ್ರವೇಶವಿರುವ ಉಪವನ.

ಜೀವ : ಅವಳು ದೂರಾದರೆ ಎರಡು, ಸೇರಿದರೆ ಒಂದು.. ಒಟ್ಟಾರೆ ಲೆಕ್ಕತಪ್ಪಿಸುವ ಗುಂಗು!

ಬೆಳಗು : ಎದ್ದಾಕ್ಷಣ ಕಂಡ ಅಮ್ಮನ ನಗುಮೊಗ.

ಬೆಳಗು : ಎಷ್ಟು ಸಲ ಓದಿದರೂ ಮತ್ತೆ ಮತ್ತೆ ಓದಬೇಕನ್ನಿಸುವ ಕವಿತೆ.

 

(ಏನಾದರೂ ಹೊಸದು ಬರೆಯಬೇಕಲ್ಲ ಅಂತ ತುಡಿಯುತ್ತಿದ್ದೆ. ಹೊಸದಾದ ಬರಹವಿಧಾನ ಬೇಕಿತ್ತು. ಹೀಗೆ ಶಬ್ದಚಿತ್ರ ಬಿಡಿಸುವ ಐಡಿಯಾ ಸಿಕ್ಕಿದ್ದು ನನ್ನ ಪ್ರೀತಿಯ ಲೇಖಕ ಜಯಂತ ಕಾಯ್ಕಿಣಿಯವರ “ಅಡಿಟಿಪ್ಪಣಿ” ಎಂಬ “ಒಂದು ಜಿಲೇಬಿ” ಸಂಕಲನದಲ್ಲಿನ ಕವಿತೆ. ಈ ಬರಹದ ಅಡಿಗೆ ಅವರ ಅಡಿಟಿಪ್ಪಣಿಗೆ ಒಂದು ನಮ್ರ ಥ್ಯಾಂಕ್ಸ್.

 

ಅಂದಹಾಗೆ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಹಳೆಯ ದುಃಖಗಳನ್ನೆಲ್ಲಾ ಕೊಡವಿಕೊಂಡು ಮತ್ತೆ ಚಿಗುರಲಿ ಬದುಕು. ಮುಂದುವರೆಯುತ್ತಿರಲಿ ಕನಸುಗಳು ವರುಷದುದ್ದಕ್ಕೂ. ನಿಮ್ಮ ಮನೆಯ ಒಬ್ಬಟ್ಟು ಪ್ಯಾಕೇಟು ನಮ್ಮ ಮನೆಗೂ ಪಾರ್ಸೆಲು ಬರಲಿ..;-) )