Archive for the ‘ಹನಿಗಳು…’ Category

ನೀನು ನಡೆದಾಡೋ ಬೆಳದಿಂಗಳು…
ಪದಗಳೇ ಸಾಲದು ನಿನ್ನ ಕೊಂಡಾಡಲು..

ಜೈಲಿಗೆ ಹಾಕಬೇಕು ನನ್ನನೂ ಚಂದ್ರನನ್ನೂ

ಅವನನ್ನು – ನಿನ್ನ ಕಂಗಳ ಬೆಳಕ ಕದ್ದ ತಪ್ಪಿಗೆ
ನನ್ನನು – ನಿನ್ನ ಲಜ್ಜೆಯಿಂದ ಈ ಕವಿತೆಯ ಬಸಿದ ತಪ್ಪಿಗೆ!

ನಿಂಗೆ ಬೇಸರ ಆದಾಗ..
ಬದುಕು ನಿಸ್ಸಾರ ಅನಿಸಿದಾಗ..
ಸಹಿಸಲಾಗದ ದುಃಖ ಆವರಿಸಿದಾಗ…

ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು..
ಅಲ್ಲಿ ನಿಂಗೊಬ್ಬಳು ರಾಜಕುಮಾರಿ ಕಾಣಿಸುತ್ತಾಳೆ!

ನನ್ನ ದಿಂಬಿಗೆ ನಿನ್ನದೇ ಹೆಸರಿಟ್ಟಿರುವೆ..
ಚಳಿಯನು ಕಿಟಕಿಯಾಚೆ ಅಟ್ಟಿರುವೆ..
ಸ್ವಪ್ನದಲಿ ದಾರಿಯೊಂದ ಮಾಡಿರುವೆ…
ನೀ ಅಲ್ಲಿ ಹಾದುಹೋಗುವಾಗ
ಕದ್ದು ನೋಡಲೆಂದೇ ಕಾದಿರುವೆ…

ಬದುಕು ಕಾಲಿನ ರೀತಿ.
ಕನಸು ಕಣ್ಣಿನ ತರಹ.

ಕಣ್ಣು ಕ್ಷಣಕಾಲದಲ್ಲಿ ಮೈಲಿ ದೂರ ಸಾಗುತ್ತದೆ.

ಕಾಲಿಗೆ ಕ್ಷಣದಲ್ಲಿ ಒಂದು ಹೆಜ್ಜೆ ಇಡುವ ಅವಕಾಶ ಮಾತ್ರ.

capture

ಅಂಗಾಲಿಟ್ಟು ಎದೆಯ ಮೆಲೆ ನೀ ಕೊಟ್ಟು
ಹೋದ ಬಹುಮಾನ ಈ ವಿದಾಯ /
ಈಗಂತೂ ಎದೆಯ ಒಳಗೆ ಸದಾ ಹಸಿ
ಹಸಿರು ಗಾಯ//

ಕನಸ ಗೋಪುರದ ತುತ್ತ ತುದಿಯೇ
ನೋವಿನ ಕಳಶ /
ಇಂಥ ಅಪೂರ್ಣ ಕವಿತೆಯ ಕೊನೆಯ
ಸಾಲುಗಳೇ ನೀನು ಬಹುಶಃ//

ಹೃದಯವ ಒದ್ದೇ ಹೊರಹೋಗಿದ್ದಳು
ಕೊಟ್ಟ ಕಾರಣಗಳ ಹೊರೆ ತಾಳಲಾಗದೇ
ಒದ್ದಾಡಿದ್ದು ಖರೆಯೇ.
ಆ ದುಃಖದ ಪ್ರಮಾಣವನ್ನು ದಿಂಬಿನ ಬಳಿ ಕೇಳಬಹುದು

ಭಾವನೆಗಳನ್ನಿಟ್ಟು ಆಡಿದ್ದು ಹೌದಾದರೂ
ನನ್ನ ಪುಣ್ಯ, ನೆನಪುಗಳ ಚೀಲ ಕದ್ದು

ಓಡಲಿಲ್ಲ ಆಕೆ

ಈಗ ನೆನಪುಗಳ ಜೋಳಿಗೆಯಿಂದ
ಸ್ವಾನುಕಂಪದ ಅಮೃತ ಬಸಿದು ಕುಡಿದು
ಜೀವಂತವಿದ್ದೇನೆ.

ನಿನ್ನುಸಿರಿನ ಪಿಸುಮಾತು
ನನ್ನೊಳಗೆ ಪ್ರತಿಧ್ವನಿ

ನಿನ್ನ ತುಸುಸ್ಪರ್ಶ
ಮೈತುಂಬ ಇಬ್ಬನಿ

ನಿನ್ನ ಅಂಗಾಲಿನ ಹೆಜ್ಜೆ ಗುರುತು
ಅಕ್ಷಯವಾಗಿ
ಅಕ್ಷರವಾಗಿ
ಎದೆಯೊಳಗೆ ಕವಿತೆಯಾಗಿದೆ

ದಯವಿಟ್ಟು ನನ್ನನ್ನು

ಅದ್ಭುತ ಕಾದಂಬರಿಯಾಗಿ ಕಾಡು..
ಒಳ್ಳೆಯ ಸಿನೆಮಾ ಆಗಿ ಆವರಿಸು..
ಚಂದದ ಕಥೆಯೊಳಗಿನ ಗುಂಗಾಗಿ ಆವಹಿಸು..
ಇದು ಕಚಗುಳಿ…ಒಂದು ಹನಿಗವಿತೆಯಾಗಿ..
ಲಾಲಿತ್ಯದ ಪ್ರಬಂಧ ಆಗಿ ನೇವರಿಸು..

ಕೊನೆ ಪಕ್ಷ ಗಾಢ
ಕವಿತೆಯಾಗಿ ಆದರೂ ಸಂತೈಸು..

ಇಂದಿಗೂ ದೊಡ್ಡ ಶಹರುಗಳಲ್ಲಿ

ಬದುಕಿನ ಸಂಜೆಹೊತ್ತಲ್ಲಿರುವವರ

ನಿಟ್ಟುಸಿರ ಭಾರದಲ್ಲಿರುವುದು

ಮಂತ್ರಾಲಯ

ಗುರುರಾಯರ ಕರೆ

ಮತ್ತು

ಗುರುವಾಯನಕೆರೆ

*****

Mute Swan at Sunset

ಗುರುವಾಯನಕೆರೆಯಲಿ

ಮಳೆಹೊತ್ತು ಮೂಡುವ

ಅಸಂಖ್ಯ ಅಲೆಗಳಲ್ಲಿ

ದಡ ಸೇರುವ

ಮುಖ್ಯ ಹೆಸರು

ಆಧ್ಯಾತ್ಮ

*****

ಗುರುವಾಯನಕೆರೆಯಲಿ

ಮಿಂದೆದ್ದು ಬಂದಾಗ

ಎದೆಯೊಳಗೇ ಉಳಿದ

ಹನಿಯೊಂದರ ನೆನೆದು

ಗೀಚಿದ ಬರಹವನ್ನು ಕವಿತೆಯೆಂದು

ಸಾರಿದರು, ಖರೆ

ಕ್ರೆಡಿಟ್ಟು ಕೆರೆಗೇ ಸೇರಬೇಕು

ಯಾವುದಕ್ಕೂ ಖುದ್ದು

ಇನ್ನೊಮ್ಮೆ ಹೋದಾಗ

ಬೊಗಸೆ ನೀರು ಕದ್ದು ಬರಬೇಕು.

*****

Ziedi ūdenī (Flowers in the water, Latvia)

ಮರೆತೇ ಅಂದುಕೊಂಡು

ಖುಷಿಯಿಂದಿದ್ದ ನನ್ನನ್ನು

ಕೆರೆಯಲ್ಲಿ ಬಿದ್ದ ಹನಿಮೂಡಿಸಿದ

ಅಲೆಯಂತೆ ಅಲುಗಾಡಿಸಿದ್ದು

ಗುರುವಾಯನಕೆರೆ

ಕವಿತೆಗಳು

ಇನ್ನಂತೂ ಖಚಿತ

ಕೆರೆಯಲ್ಲೆ ಮುದ್ದಾಗಿ

ಕೂತಿದ್ದ ಚಂದಿರ

ನಂತಹ ಬದುಕು

ಪ್ರೀತಿಯ ಅಲೆಗೆ ಅಪ್ಪಳಿಸಿ

ಚೂರಾಗಲಿವೆ

*****

ಪಟ್ಟಣಗಳ ಎಡೆಯಲ್ಲಿ

ಬದುಕನ್ನು

ತಲ್ಲಣಗಳ

ಅಲ್ಲೋಲಕಲ್ಲೋಲ

ಸಾಗರವಾಗಿಸುವ

ಬದಲು

ಗುರುವಾಯನಕೆರೆಯ

ಬುದ್ಧ ಶಾಂತ

ಹನಿಯಾಗುವುದೇ ಲೇಸು

****

 

ಸೂಚನೆ: ಇದು ಜೋಗಿ ಸರ್ ಹಾಕಿಕೊಟ್ಟ ಹಾದಿಯಲ್ಲಿ ನಾನೂ ಒಂದು ಧೂಳಕಣವಾಗುವ ಪ್ರಯತ್ನ.

ಚಿತ್ರಗಳು : ಮೈಕ್ರೋಸಾಫ್ಟ್ ಡೆಸ್ಕ್ ಟಾಪ್ ಹಿನ್ನೆಲೆಚಿತ್ರಗಳ ಕೃಪೆ

ಬಿರುಬಿಸಿಲಲ್ಲಿ ಹನಿಗಾಗಿ

ಧ್ಯಾನ ಮಾಡುವುದು

ಮುಸಲಧಾರೆಯೊಳಗೂ

ಹೊಂಬಿಸಿಲ ಕನಸು ಕಾಣುವುದು

ನಿನ್ನನಿಷ್ಟಪಡುವಷ್ಟು

ವಿಚಿತ್ರವೇನಲ್ಲ.

****

zen

ತನ್ನ ಕಣ್ಣೊಳಗೇ ಇರುವ ಕವಿತೆಯ ಬಿಟ್ಟು

ಸೀರೆಯ ನೆರಿಗೆಯ

ಲಯದಲ್ಲಿ ಕಾವ್ಯ ಹುಡುಕುವ

ತರುಣರ ಕಂಡರೆ

ಅವಳಿಗೆ

ರೇಜಿಗೆ.

*****

ಮನಬೀದಿಯೊಳಗೆ

ಕಾಮಣ್ಣರು ನಿನ್ನ

ಛೇಡಿಸುತಿರುವಾಗೆಲ್ಲ

ನಾನು ನಿನ್ನ

ಪ್ರೀತಿಸಲು

ಅಯೋಗ್ಯ ಅಂತ ಆಗಾಗ್ಗೆ

ಅನಿಸುತಿರುತ್ತೆ.

 

****

 

ಚಿತ್ರ: ಇಂಟರ್ನೆಟ್ ಕೃಪೆ

ಸಿಕ್ಕಿದ್ದಕ್ಕೆಲ್ಲಾ ಕಾರಣವಿತ್ತು
ಒಮ್ಮೆ ಸಿಗು ಗೆಳೆಯಾ
ಹಾಗೆ ಸುಮ್ಮನೆ

*****

ಹೂವು ಸತ್ತು
ತುಂಬಾ ಹೊತ್ತಾಯ್ತು
ಪರಿಮಳವಿನ್ನೂ ಅರಳುತ್ತಿದೆ..

******

ಅವಳೂ ಅಂದಳು
ನಾನೂ ಅನ್ನುತ್ತಿದ್ದೆ
ಮೌನ ಇನ್ನಷ್ಟು ಆಳವಾಗುತ್ತಿತ್ತು..

*****

ಗೋಡೆ, ಮಾಡಿನಿಂದ
ಆಗದಿದ್ದ ಮನೆ, ಕಿಟಕಿ-ಬಾಗಿಲು
ಗಳಿಂದ ಆಯಿತು.

******

ಮೀಟರುಗಟ್ಟಲೆ ಚಿಗುರಿಸಿದ
ಮಳೆಯನ್ನು
ಸೆಂಟಿಮೀಟರುಗಳಿಂದ ಅಳೆದರು.

****

ಕಡಲಿಗೆ ಬಿದ್ದ ಆಗಸ
ನೀಲಿ ನೀಲಿಯಾಗಿಬಿಡ್ತು
ಪುಟ್ಟಿಯ ಕಣ್ಣಲ್ಲಿ

****

water2

ಭೇಟಿಯಾಗದಿರು ನನ್ನ
ಕನಸಲ್ಲಿ ಸಾಲ
ಇಸ್ಕೊಂಡವನ ಥರ…

****
ಸಿಮೆಂಟು, ಇಟ್ಟಿಗೆ
ಗೋಡೆ ಮಾಡು ಎಲ್ಲ ಗಟ್ಟಿ
ಒಳಗಿನ ಮೌನವೊಂದೇ ದ್ರವ
****

ನದೀ ತಟದಲ್ಲಿ
ಕುರಿ ಹುಲ್ಲು ಮೇಯುತ್ತಿತ್ತು
ನೀ
ರಲ್ಲಿ
ಮೀನ ಮೇಷ
ಎಣಿಸುತಿತ್ತು.

******

ಗಾಳ ಹಾಕಿ
ಕಾಯುತ್ತಾ ಕುಳಿ
ತಿದ್ದೆ.
ಕೊನೆಗೂ ಒಂದು
ಮೀನಿಗೆ ಸಿಕ್ಕಿಹಾಕಿಕೊಂಡೆ.

*******

ಕಣ್ಣು ಮೀನಿದ್ದು
ಆಗಿರಬಹುದು
ಆದರೆ ಕಣ್ಣೀರು
ಮೊಸಳೆದ್ದು ಆಗಿರಬಾರ್ದು ಕಣ್ರೀ!

ಬದುಕು, ಮಿಂಚುಹುಳು

ಅಗೋ ಹೊತ್ತಿತು

ಇಗೋ ನಂದಿತು

******

ನನ್ನದೂ ಅಲ್ಲ

ಅವನದೂ

ಬೇಲಿಯೇ ಮೇಲೇ ಅರಳಿದೆ ಹೂವು

*****

ಅವಳಿಂದ ಹುಟ್ಟಿದ ಕವಿತೆ

ಅಡಿಗೆ ಷರಾ ಬರೆದು ನನ್ನದಾಗಿಸುವ

ವ್ಯರ್ಥ ಪ್ರಯತ್ನ ಜಾರಿಯಲ್ಲಿದೆ

******

ನೆಲಾ ನೀರು

ನೀರು ನೆಲಾ..

ಬೇರ ತೇರು ಸಧ್ಯದಲ್ಲೇ ಜಾಹೀರು

******

ನಿನ್ನೆ ಬ್ಯೂಸಿ, ಇಂದು ಆಗಲ್ಲ

ಸಾಧ್ಯವಾದರೆ ನಾಳೆ ಸಿಗಬೇಕು

ನನಗೆ ನಾನು.

******

ಯಾರದೋ ನೋವ ಸಿಗರೇಟು

ನನ್ನ ಪದಕಿಡಿ

ಕ್ಷಣದಲ್ಲೇ ಆಗಲಿದೆ ಎಲ್ಲ ಧೂಮ.

********

ಮೈದಾನದಂತಿದ್ದ ಕೊಳ

ಕಪ್ಪೆ ಹಾರಿದ್ದೇ ತಡ

ನೀರು ನೀರಾಯ್ತು.

********

ಚಿತ್ರಕೃಪೆ : ಇಲ್ಲಿಂದ

ಹಾರೆಯಿಂದ ಭುವಿಯ
ಎದೆ ಬಗೆದದ್ದು ನಿಜ
ಅದಕ್ಕೆ ಈ ಹಸಿರು.

******

ವಸಂತ, ಚಿಗುರು
ಹಾಗೇನೆ ನಾನು
ನನ್ನ ಮಗು

*****

ಅವಳ ನೋಟ
ನನ್ನ ಅಸ್ತಿತ್ವವನೇ
ಅಲುಗಾಡಿಸಿತು

****



ಮಾತು ಎಂದ ಕ್ಷಣ ಮಾತು 
ಉಂಟು ಮೌನ ಎಂದಾಕ್ಷಣ ಮೌನ
ಇಲ್ಲ

*****

ಟೀಚರ್ ಕೋಲಿಂದ ಪೆಟ್ಟು ಕೊಟ್ಟರು
ಕಲಿಯಲಿಲ್ಲ
ಬದುಕು ಕೋಲನ್ನು ಊರುಗೋಲಾಗಿಸಿತು
ಕಲಿತೆ

******

ಹುಲ್ಲ ಮೇಲೆ ಹರಿಹಾಯ್ವ ಗಾಳಿ
ಕಟ್ಟಡವೊಂದಕ್ಕೆ ಡೀ ಕೊಟ್ಟು
ಅಸುನೀಗಿತು

*****

ಮರಳ ರಾಶಿ
ಅಲೆಬಂದು ಅಳಿಸುವವರೆಗಷ್ಟೇ
ಏಡಿಯ ಹೆಜ್ಜೆಗುರುತು, ಮನೆ.

*****

ಅವಳು ಬಿಟ್ಟುಹೋದ ಕ್ಷಣ
ಮೌನ ಅವನ
ಕತ್ತುಹಿಸುಕಿತು.

*****

ಭರಪೂರ ಹಸಿವು
ಕವಿತೆಯ ಪುಟ
ತಣ್ಣಗಾಗಿಸಲಿಲ್ಲ

******

ಒಳಗಿನದೇ ಪರಿಣಾಮ
ಕೊಡೆ ಬೇಡ ಅನ್ನಿಸುವಂಥ
ಮಳೆ ಹೊರಗೆ.

ಏಕಾಂತ

ನೆನಪಿನಾಳ

ಕ್ಕೆ

ಹಾಕಿ ಗಾಳ

ಹಳೆಯ ಮನದ ಗೀರೊಂದು

ಕೊಟ್ಟ ನೋವನ್ನು

ಮಧುರವಾಗಿ

ಹೀರುತ್ತಾ ಕೂರುವುದು.

******

ಕಾವ್ಯ

ಮೌನ, ರೇಷಿಮೆ ನಯ

ನೆನಪೋ ಸೂಜಿಮೊನೆ

ಘನ ಮನ

ಕಾದು ಕುಂತು

ನೇಯ್ದದ್ದು

ಕಾವ್ಯಕಸೂತಿ.

***

p8_albania050916

ಹನಿ

ಹಕ್ಕಿಯಂತೆ

ಹತ್ತಿಯಂತೆ ಹಾರಾಡಿ

ಬಾನಬಯಲಲಿ ತೇಲಾಡಿ

ಹುಡುಕಿ ಹುಡುಕಿ

ಅವಳ ನೆತ್ತಿಯ ಮೇಲುದುರಿ

ಜಾರುಬಂಡಿಯಾಡುವ

ಆಸೆ ಹೊತ್ತ

ಹನಿ

ಬಲು ಕಿಲಾಡಿ.

****

ಆಟ

ಕನಸಕೆರೆಗೆ

ಕಲ್ಲನೆಸೆದು

ನಿನಗೋ ಆಟವಾಡುವ ಲಹರಿ

ದಡದಮೂಲೆಯಲಿ

ಏಡಿಮನೆಮಾಡಿದ ಮನವಿರುವ

ನನಗೋ

ತೆರೆತೆರೆಯೂ ಸುನಾಮಿಯ ಪರಿ.

*****

 

(ಚಿತ್ರಕೃಪೆ)

ಪಶ್ಚಾತ್ತಾಪವೊಂದು ಹೀಗೆ

ನನ್ನ ಬಿಡದೇ ಬೆಂಬತ್ತಿದುದರಿಂದ

ನಾನು ತಪ್ಪು ಮಾಡಿದ್ದೇ ಹೌದು

ಅಂತ ನಂಬಿಕೆ ಆಗುತ್ತಿದೆ

*******

38-abstract-art-feng-shui-painting-2

ಆ ಸಂಜೆ ರೂಮಿಗೆ ಬಂದಾಗ

ಅಲ್ಲಿ ಕತ್ತಲು ಧಗಧಗನೆ

ಹೊತ್ತಿ ಉರಿಯುತಿತ್ತು

ಮೊಂಬತ್ತಿ ಹತ್ತಿಸಿ

ಎಲ್ಲಾ ನಂದಿಸಿದೆ.

*********

ಬದುಕಿನ ಈ ಘಟ್ಟದಲ್ಲಿ

ನಿಂತು ಹಿಂತಿರುಗಿ ನೋಡಿದರೆ

ಬೇಡ

ಬೇಕಾದ ಅದೆಷ್ಟೋ

ಕ್ಷಮೆಗಳ ಸಾಲವಿದೆ

*******

441

ಆಕೆ ನನ್ನ ಬಿಟ್ಟುಹೋದ ದಿನ

ಅವಳಮ್ಮ ಸಂಜೆ ತಿಂಡಿಗೆ

ಕಟ್ಲೇಟು ಮಾಡಿದ್ದರಂತೆ

ಆಕೆ ಅದರ

ಹೃದಯದಾಕಾರಕ್ಕೆ

ಬೆಚ್ಚಿಬಿದ್ದು ತಿನ್ನಲಿಲ್ಲ,

*******

ಭಾವಗಳ ಮೋಡ ಮನಸಿನಾಗಸ ತುಂಬಾ ಆವರಿಸಿದೆ….

ದೊರಕುತಿದೆ ಪ್ರೀತಿಯ ಜಡಿಮಳೆಯಾಗುವ ಮುನ್ಸೂಚನೆ..

ಕವಿತೆಗಳಾಗುವ ಪದಗಳು ಎದೆಯ ಬಾಗಿಲಲ್ಲೇ ತಡವರಿಸಿದೆ..

ಇದು ಯಾವ ವೈದ್ಯನಿಗೂ ಅರ್ಥವಾಗದ ಸುಮಧುರ ಯಾತನೆ!

 

****

ಇದು “ನೀಲಿ ಹೂವು”  ಬ್ಲಾಗಿನ ನೂರೈವತ್ತನೇ ಪೋಸ್ಟು!

******

photo (painting) from this and  this website

 

xml-haiku-28oct2005-w

ಅತೀ ದೊಡ್ಡ ಕವಿತೆ ಬರೆದು

ಸಾಕಾಗಿ ಎಲ್ಲಾ ಸಾಲು ಅಳಿಸಿದೆ

ಮೊದಲ ಮೂರು ಬಿಟ್ಟು.

 

 

***

ಚಿತ್ರದ ಕ್ರೆಡಿಟ್ಟು : ಇಲ್ಲಿಂದ