Archive for the ‘ಹೈಕು’ Category

ಬಿರುಬಿಸಿಲಲ್ಲಿ ಹನಿಗಾಗಿ

ಧ್ಯಾನ ಮಾಡುವುದು

ಮುಸಲಧಾರೆಯೊಳಗೂ

ಹೊಂಬಿಸಿಲ ಕನಸು ಕಾಣುವುದು

ನಿನ್ನನಿಷ್ಟಪಡುವಷ್ಟು

ವಿಚಿತ್ರವೇನಲ್ಲ.

****

zen

ತನ್ನ ಕಣ್ಣೊಳಗೇ ಇರುವ ಕವಿತೆಯ ಬಿಟ್ಟು

ಸೀರೆಯ ನೆರಿಗೆಯ

ಲಯದಲ್ಲಿ ಕಾವ್ಯ ಹುಡುಕುವ

ತರುಣರ ಕಂಡರೆ

ಅವಳಿಗೆ

ರೇಜಿಗೆ.

*****

ಮನಬೀದಿಯೊಳಗೆ

ಕಾಮಣ್ಣರು ನಿನ್ನ

ಛೇಡಿಸುತಿರುವಾಗೆಲ್ಲ

ನಾನು ನಿನ್ನ

ಪ್ರೀತಿಸಲು

ಅಯೋಗ್ಯ ಅಂತ ಆಗಾಗ್ಗೆ

ಅನಿಸುತಿರುತ್ತೆ.

 

****

 

ಚಿತ್ರ: ಇಂಟರ್ನೆಟ್ ಕೃಪೆ

ಸಿಕ್ಕಿದ್ದಕ್ಕೆಲ್ಲಾ ಕಾರಣವಿತ್ತು
ಒಮ್ಮೆ ಸಿಗು ಗೆಳೆಯಾ
ಹಾಗೆ ಸುಮ್ಮನೆ

*****

ಹೂವು ಸತ್ತು
ತುಂಬಾ ಹೊತ್ತಾಯ್ತು
ಪರಿಮಳವಿನ್ನೂ ಅರಳುತ್ತಿದೆ..

******

ಅವಳೂ ಅಂದಳು
ನಾನೂ ಅನ್ನುತ್ತಿದ್ದೆ
ಮೌನ ಇನ್ನಷ್ಟು ಆಳವಾಗುತ್ತಿತ್ತು..

*****

ಗೋಡೆ, ಮಾಡಿನಿಂದ
ಆಗದಿದ್ದ ಮನೆ, ಕಿಟಕಿ-ಬಾಗಿಲು
ಗಳಿಂದ ಆಯಿತು.

******

ಮೀಟರುಗಟ್ಟಲೆ ಚಿಗುರಿಸಿದ
ಮಳೆಯನ್ನು
ಸೆಂಟಿಮೀಟರುಗಳಿಂದ ಅಳೆದರು.

****

ಕಡಲಿಗೆ ಬಿದ್ದ ಆಗಸ
ನೀಲಿ ನೀಲಿಯಾಗಿಬಿಡ್ತು
ಪುಟ್ಟಿಯ ಕಣ್ಣಲ್ಲಿ

****

water2

ಭೇಟಿಯಾಗದಿರು ನನ್ನ
ಕನಸಲ್ಲಿ ಸಾಲ
ಇಸ್ಕೊಂಡವನ ಥರ…

****
ಸಿಮೆಂಟು, ಇಟ್ಟಿಗೆ
ಗೋಡೆ ಮಾಡು ಎಲ್ಲ ಗಟ್ಟಿ
ಒಳಗಿನ ಮೌನವೊಂದೇ ದ್ರವ
****

ಬದುಕು, ಮಿಂಚುಹುಳು

ಅಗೋ ಹೊತ್ತಿತು

ಇಗೋ ನಂದಿತು

******

ನನ್ನದೂ ಅಲ್ಲ

ಅವನದೂ

ಬೇಲಿಯೇ ಮೇಲೇ ಅರಳಿದೆ ಹೂವು

*****

ಅವಳಿಂದ ಹುಟ್ಟಿದ ಕವಿತೆ

ಅಡಿಗೆ ಷರಾ ಬರೆದು ನನ್ನದಾಗಿಸುವ

ವ್ಯರ್ಥ ಪ್ರಯತ್ನ ಜಾರಿಯಲ್ಲಿದೆ

******

ನೆಲಾ ನೀರು

ನೀರು ನೆಲಾ..

ಬೇರ ತೇರು ಸಧ್ಯದಲ್ಲೇ ಜಾಹೀರು

******

ನಿನ್ನೆ ಬ್ಯೂಸಿ, ಇಂದು ಆಗಲ್ಲ

ಸಾಧ್ಯವಾದರೆ ನಾಳೆ ಸಿಗಬೇಕು

ನನಗೆ ನಾನು.

******

ಯಾರದೋ ನೋವ ಸಿಗರೇಟು

ನನ್ನ ಪದಕಿಡಿ

ಕ್ಷಣದಲ್ಲೇ ಆಗಲಿದೆ ಎಲ್ಲ ಧೂಮ.

********

ಮೈದಾನದಂತಿದ್ದ ಕೊಳ

ಕಪ್ಪೆ ಹಾರಿದ್ದೇ ತಡ

ನೀರು ನೀರಾಯ್ತು.

********

ಚಿತ್ರಕೃಪೆ : ಇಲ್ಲಿಂದ

ಹಾರೆಯಿಂದ ಭುವಿಯ
ಎದೆ ಬಗೆದದ್ದು ನಿಜ
ಅದಕ್ಕೆ ಈ ಹಸಿರು.

******

ವಸಂತ, ಚಿಗುರು
ಹಾಗೇನೆ ನಾನು
ನನ್ನ ಮಗು

*****

ಅವಳ ನೋಟ
ನನ್ನ ಅಸ್ತಿತ್ವವನೇ
ಅಲುಗಾಡಿಸಿತು

****ಮಾತು ಎಂದ ಕ್ಷಣ ಮಾತು 
ಉಂಟು ಮೌನ ಎಂದಾಕ್ಷಣ ಮೌನ
ಇಲ್ಲ

*****

ಟೀಚರ್ ಕೋಲಿಂದ ಪೆಟ್ಟು ಕೊಟ್ಟರು
ಕಲಿಯಲಿಲ್ಲ
ಬದುಕು ಕೋಲನ್ನು ಊರುಗೋಲಾಗಿಸಿತು
ಕಲಿತೆ

******

ಹುಲ್ಲ ಮೇಲೆ ಹರಿಹಾಯ್ವ ಗಾಳಿ
ಕಟ್ಟಡವೊಂದಕ್ಕೆ ಡೀ ಕೊಟ್ಟು
ಅಸುನೀಗಿತು

*****

ಮರಳ ರಾಶಿ
ಅಲೆಬಂದು ಅಳಿಸುವವರೆಗಷ್ಟೇ
ಏಡಿಯ ಹೆಜ್ಜೆಗುರುತು, ಮನೆ.

*****

ಅವಳು ಬಿಟ್ಟುಹೋದ ಕ್ಷಣ
ಮೌನ ಅವನ
ಕತ್ತುಹಿಸುಕಿತು.

*****

ಭರಪೂರ ಹಸಿವು
ಕವಿತೆಯ ಪುಟ
ತಣ್ಣಗಾಗಿಸಲಿಲ್ಲ

******

ಒಳಗಿನದೇ ಪರಿಣಾಮ
ಕೊಡೆ ಬೇಡ ಅನ್ನಿಸುವಂಥ
ಮಳೆ ಹೊರಗೆ.