ಇತ್ತೀಚೆಗೆ ಓದಿದ ಪುಸ್ತಕಗಳಲ್ಲಿ ನನ್ನನ್ನು ತುಂಬಾ ಬದಲಾಯಿಸಿದ ಪುಸ್ತಕದ ಕುರಿತು ಹೇಳಬೇಕನ್ನಿಸುತ್ತಿದೆ. ರುಜುತಾ ದಿವೇಕರ್ ಬರೆದಿರುವ ಡೋಂಟ್ ಲೂಸ್ ಯುವರ್ ಮೈಂಡ್, ಲೂಸ್ ಯುವರ್ ವೆಯ್ಟ್ – ಅನ್ನುವುದು ಆ ಪುಸ್ತಕದ ಹೆಸರು. ಕಮರ್ಷಿಯಲ್ ದೃಷ್ಟಿಯಿಂದ ಪುಸ್ತಕದ ಶೀರ್ಷಿಕೆ ತೂಕ ಇಳಿಸುವ ಬಗ್ಗೆ ಇದ್ದರೂ, ಪುಸ್ತಕದ ಒಳಗೆ ಆರೋಗ್ಯಕರವಾದ ಬದುಕನ್ನು ಕಟ್ಟಿಕೊಳ್ಳುವ ವಿಚಾರವನ್ನು ಬಹಳ ಸರಳವಾಗಿ, ತರ್ಕಬದ್ಧವಾಗಿ ಮಂಡಿಸುತ್ತಾರೆ ರುಜುತಾ. ಕರೀನಾ ಕಪೂರ್ ಗೆ ಡಯಟಿಷಿಯನ್ ಆಗಿ, ಆಕೆಯ ಜೀರೋ ಸೈಜ್ ಗೆ ಕಾರಣೀಭೂತರಾಗಿದ್ದುದರಿಂದ ಒಮ್ಮಿಂದೊಮ್ಮಲೆ ಪ್ರಸಿದ್ಧಿ ದೊರಕಿದರೂ, ಆಕೆಯ ಥಿಯರಿಗಳು ತುಂಬಾ ಸುಲಭ ಸಾಧ್ಯವಾದುದು. ಎಲ್ಲ ವರ್ಗದ ಜನರೂ ಆರಾಮಾಗಿ ಪಾಲಿಸಬಲ್ಲಂಥದ್ದು.

ಪುಸ್ತಕ ಓದಿ ಅಂತ ಹೇಳುತ್ತಲೇ ಆಕೆಯ ಕೆಲ ಮುಖ್ಯ ಥಿಯರಿಯನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ. ಇನ್ನಷ್ಟು ವಿವರಗಳಿಗೆ ಕಾಪಿ ರೈಟ್ ಸಮಸ್ಯೆಯ ಕಾರಣ ನೀವು ಪುಸ್ತಕದ ಮೊರೆ ಹೋಗಬೇಕಾಗುತ್ತದೆ.

don-t-lose-your-mind-lose-your-weight-400x400-imadaryhavfhdnfv

೧. ಬೆಳಿಗ್ಗೆ ಎದ್ದ ಹತ್ತು ಹದಿನೈದು ನಿಮಿಷದಲ್ಲಿ ಹಣ್ಣು, ಡ್ರೈ ಫ್ರೂಟ್ಸ್ ಇಂತದ್ದೇನಾದರೂ ತಿನ್ನಬೇಕು. ಎದ್ದ ಕೂಡಲೇ ಕಾಫಿ ಮತ್ತು ಟೀ ಮಾತ್ರ ಯಾವ ಕಾರಣಕ್ಕೂ ಸಲ್ಲದು. ಕಾಫಿ ಇಲ್ಲದೇ ಬಾಳಲಾಗದವರು, ಎರಡನೇ ಉಪಹಾರದ ನಂತರ ಕಾಫಿ ಸೇವಿಸಬಹುದು.
೨. ದಿನವಿಡೀ ೨ ಅಥವಾ ಮೂರು ಘಂಟೆಗೊಮ್ಮೆ ಸ್ವಲ್ಪ ಆಹಾರ ಸೇವಿಸಬೇಕು. ಅಂದರೆ ಬೆಳಿಗ್ಗೆ ಉಪಹಾರಕ್ಕೆ ಏನು ತಿನ್ನುತ್ತೀರೋ ಅದರ ಅರ್ಧದಷ್ಟನ್ನು ಎರಡು ಬಾರಿ ಎರಡು ಗಂಟೆ ಗ್ಯಾಪ್ ನಲ್ಲಿ ತಿನ್ನುವುದು. ದಿನವಿಡೀ ಕಡಿಮೆ ಆಹಾರವನ್ನು, ಸಮಯದ ಗ್ಯಾಪ್ ಇಟ್ಟು, ಹೆಚ್ಚು ಬಾರಿ ಸೇವಿಸಬೇಕು.
೩. ದಿನದಲ್ಲಿ ನೀವು ಹೆಚ್ಚು ಆಕ್ಟಿವ್ ಆಗಿರುವಂಥ ಸಮಯದಲ್ಲಿ ಹೆಚ್ಚು ತಿನ್ನುವುದು, ಕಡಿಮೆ ಆಕ್ಟಿವಿಟಿ ಇರುವಾಗ ಕಮ್ಮಿ ತಿನ್ನುವುದು.
೪. ರಾತ್ರಿ ಮಲಗುವ ಎರಡು ಅಥವಾ ಮೂರು ಗಂಟೆ ಮುಂಚಿತವಾಗಿ ರಾತ್ರಿಯೂಟವನ್ನು ಮಾಡುವುದು.

ಇಷ್ಟೇ ಸಿಂಪಲ್ ಆದ ಪಾಯಿಂಟ್ಸ್ ಗಳು ಈ ಪುಸ್ತಕದ ಜೀವಾಳ. ಇದನ್ನು ಯಾಕೆ ಮಾಡಬೇಕು, ಮಾಡುವುದರಿಂದ ಪ್ರಯೋಜನವೇನು ಎಂಬುದನ್ನು ರುಜುತಾ ವಿವರಿಸಿದ್ದಾರೆ. ಜೊತೆಗೆ ಎಂಥೆಂಥ ಆಹಾರವನ್ನು ಸೇವಿಸಬಹುದು, ಸೇವಿಸಬಾರದು ಎಂಬದರ ಬಗ್ಗೆ ಕೂಲಂಕಷ ವಿವರಣೆ ಸಿಗುತ್ತದೆ. ಆಹಾರದ ಜೊತೆಗೆ ವಾರಕ್ಕೆ ಕಡಿಮೆ ಅಂದರೆ ಮೂರು ಗಂಟೆಗಳ ಕಾಲ ವ್ಯಾಯಾಮ ಅಗತ್ಯ. ಇದಕ್ಕೆ ಮಾತ್ರ ಯಾವ ಶಾರ್ಟ್ ಕಟ್ ಇಲ್ಲ ಅಂತ ಖಡಾಖಂಡಿತವಾಗಿ ಹೇಳುವ ರುಜುತಾರ ಮತ್ತೊಂದು ಪುಸ್ತಕ ವ್ಯಾಯಾಮದ ಬಗ್ಗೆಯೇ ಇದೆ.

*****

ಮೊನ್ನೆ ಸುಚಿತ್ರಾ ಫಿಲಂ ಸೊಸೈಟಿ ಅಂಗಳದಲ್ಲಿ ಯೋಗರಾಜ್ ಭಟ್ ರ ಜೊತೆ ಸಂವಾದವಿತ್ತು. ಈ ಸಂವಾದಕ್ಕೂ ಮೊದಲು ಅವರ ಉಢಾಫೆ ಪ್ರವೃತ್ತಿಯಿಂದಾಗಿ ಅವರ ಬಗ್ಗೆಯೇ ನನ್ನೊಳಗೆ ಒಂದು ಉಢಾಫೆ ಮನೆಮಾಡಿತ್ತು. ಅವರ ಆ ಎರಡು ಗಂಟೆಯ ಸಂವಾದದ ಬಳಿಕ ಅವರ ಬಗ್ಗೆ ಇದ್ದ ಪೂರ್ವಗ್ರಹ ಹೊರಟು ಹೋಯಿತು. ಯೋಗರಾಜ್ ಭಟ್ ಯಾವುದೇ ಪ್ಲಾನ್ ಇಟ್ಟುಕೊಂಡು ಮಾತಾಡುವುದಿಲ್ಲ. ಆ ಕ್ಷಣ ಅನ್ನಿಸಿದ್ದನ್ನು, ಒಂಚೂರು ತನ್ನ ಮೇಲೆ ತಾನೇ ವ್ಯಂಗ್ಯವಿಟ್ಟುಕೊಂಡು, ತೆಳು ಹಾಸ್ಯದ ಲೇಪದ ಮೂಲಕ ನಿಶ್ಕಲ್ಮಷವಾಗಿ ಹೇಳಿಬಿಡುತ್ತಾರೆ. ಇನ್ನೊಂದು ಅರಿವಾದ ವಿಚಾರವೆಂದರೆ ಅವರ ಓದಿನ ಹರವು ವಿಸ್ತಾರವಾಗಿದೆ. ಬಹುಶಃ ಇದುವರೆಗೂ ಚಿತ್ರರಂಗದಲ್ಲಿ ಗಟ್ಟಿಯಾಗಿ ತಮ್ಮ ಛಾಪನ್ನು ಉಳಿಸಿಕೊಳ್ಳಲು ಅವರ ಸಾಹಿತ್ಯಾಭಿರುಚಿಯೇ ಕಾರಣವಿರಬೇಕು. ಚಿತ್ರಗೀತೆ ಬರೆಯುವಾಗ ಎಂಥ ಎಬುಡ ತಬುಡ ಪ್ರಯೋಗಗಳ ಮಾಡಲು, ಕಾರಣ ಕನ್ನಡ ವ್ಯಾಕರಣದ ಜ್ಞಾನ, ಬೇರೆ ಬೇರೆ ಧಾಟಿಯ ಕನ್ನಡದ ಮೇಲಿನ ಹಿಡಿತ, ಸಾಹಿತ್ಯ ಬಲ್ಲ ಆತ್ಮವಿಶ್ವಾಸವೇ ಅನ್ನುವುದು ಅರಿವಾಗ್ತದೆ.

ಅವರು ಆ ದಿನ, ಈ ಮುಖ್ಯವಾದ ವಿಚಾರಗಳ ಕುರಿತು ಮಾತಾಡಿದರು (ಅವರು ಹೇಳೋ ಶೈಲಿ ಬೇರೆ, ಅದರ ಸಾರ ಮಾತ್ರ ಇಲ್ಲಿದೆ) :-
~ ಸಿನಿಮಾ ಅಂದರೆ ನನಗೆ ಯಾವಾಗಲೂ ಎರಡು ಘಟನೆಗಳು ಕಾಡುತ್ತದೆ. ಒಮ್ಮೆ ಒಂದು ಸಾಹಿತ್ಯ ಸಭೆಯಲ್ಲಿ ಲೇಖಕರೊಬ್ಬರು ಸಾಹಿತ್ಯದ ಕುರಿತು ಭೀಷಣವಾಗಿ ಭಾಷಣ ಮಾಡುತ್ತಿದ್ದರು. ಬಹುಶಃ ಭಾಷಣದ ಓಘದಲ್ಲಿ ಮೈಮರೆತು ಸಾಹಿತ್ಯವನ್ನು ಓದಿಕೊಳ್ಳದವನು ಮನುಷ್ಯನೇ ಅಲ್ಲ ಎಂದು ಬಿಟ್ಟರು. ಅಲ್ಲಿ ಕೂತಿದ್ದ ಮುದುಕನಿಗೆ ಅದು ನೋವುಂಟು ಮಾಡಿರಬೇಕು, ಸರ…ಒಂದ್ನಿಮಿಷರೀ..ಅಂದ. ಸಭೆ ಅವರತ್ತ ತಿರುಗಿತು. ಅವರು ಎದ್ದು ನಿಂತು ಅಲ್ಲಾ.. ಈ ಸಾಹಿತ್ಯ ಪಾಹಿತ್ಯ, ಕಥೀ ಪಥೀ ಓದ್ಲಿಲ್ಲಾ ಅಂದ್ರೆ ಮನುಷ್ಯಾನೇ ಅಲ್ಲ ಅಂತೀರಲ್ರೀ.. ನಾನಾಗ್ಲೀ, ನಮ್ಮಪ್ಪನಾಗ್ಲೀ, ನಮ್ಮ ದೊಡ್ಡಪ್ಪ, ನಾವು ಏಳು ಜನ ಅಣ್ಣತಮ್ಮಂದಿರಿದೀವು.. ಯಾರೂ ಇದುವರೆಗೂ ಒಂದ್ ಪೇಜೂ ಓದಿಲ್ಲ.. ನಾವ್ ಮನುಷ್ಯರು ಹೌದೋ ಅಲ್ಲೋ..? ಅಂತ ಕೇಳಿಯೇ ಬಿಟ್ಟರು.

index-yograj
ಇನ್ನೊಂದು ನಾಗತಿಹಳ್ಳಿಯವರ ಸಿನಿಮಾ ಕ್ಲಾಸ್ ನಲ್ಲಿ ನಡೆದದ್ದು -ಅದರ ಸಾರಾಂಶ ಎಂದರೆ, ಸಿನಿಮಾ ಎಂದರೇನು ಅನ್ನೊ ಪ್ರಶ್ನೆ ಬಂದಾಗ, ಭಟ್ಟರು ಹೇಳಿದ್ದು ಸಿನಿಮಾ ಅನ್ನುವುದು ಕೆಲಸವಿಲ್ಲದವರು ಮಾಡುವ ಕೆಲಸ ಅಂತ. ಕೊನೆಗೆ ಅದನ್ನು ವಿವರಿಸಲೇಬೇಕಾಗಿ ಬಂದಾಗ, “ನೀವು ಸಿನಿಮಾ ನೋಡಲು ಹೋಗಬೇಕಾಗಿ ಬಂದಾಗ, ಎಕ್ಸಾಮ್ ಇದ್ರೆ ಹೋಗಲ್ಲ, ಆಫೀಸಿನಲ್ಲಿ ಏನಾದ್ರೂ ಇಂಪಾರ್ಟೆಂಟ್ ಕೆಲ್ಸ ಇದ್ರೆ ಹೋಗಲ್ಲ, ಹತ್ತಿರದವರ್ಯಾದರೂ ತೀರ್ಕೊಂಡಿದ್ದಾಗ ಹೋಗಲ್ಲ, ಹೀಗೆ ಐದಾರು ಘಂಟೆ ಫ್ರೀ ಇದ್ದಾಗ ಮಾತ್ರ ಸಿನಿಮಾ ನೋಡೋದು ಅನ್ನೋದು ನಡೆಯುತ್ತೆ. ಹೀಗಿದ್ದಾಗ ಸಿನಿಮಾ ಅನ್ನೋದು ಕೆಲಸವಿಲ್ಲದವರು ನೋಡುವ, ಮತ್ತಷ್ಟು ಕೆಲಸ ಇಲ್ಲದವನೇ ಮಾಡೋ ಕೆಲಸ ಅನ್ನುವುದನ್ನು ಹಾಸ್ಯವಾಗಿ, ವಿಡಂಬನೆಯಿಂದ ತನ್ನನ್ನು ತಾನೇ ಗೇಲಿ ಮಾಡಿಕೋತಾ ವಿವರಿಸಿದ್ರು.
~ ಯಾವ ಯಾವ ಭಾಷೆಯಲ್ಲಿ ಸಾಹಿತ್ಯ ಸಮೃದ್ಧವಾಗಿದೆಯೋ ಅಲ್ಲಿ ಚಿತ್ರರಂಗ ತುಂಬಾ ದುರ್ಬಲವಾಗಿರುತ್ತದೆ (ಕಮರ್ಷಿಯಲ್ಲೀ). ಇದಕ್ಕೆ ಕನ್ನಡ, ಬೆಂಗಾಳೀ, ರಾಜಸ್ಥಾನೀ ಭಾಷೆಗಳು ಉದಾಹರಣೆ.
~ ಕನ್ನಡ ಚಿತ್ರಗಳನ್ನು ನೋಡುವವರು ಬಹುತೇಕ ಹದಿನಾರರಿಂದ ಇಪ್ಪತ್ತೈದು ವಯಸ್ಸಿನವರು. ಅವರು ಮೊದಲು ನೋಡಿ, ಅವರಿಗಿಷ್ಟ ಆದರೆ ಮಾತ್ರ ಅವರ ಅಪ್ಪ ಅಮ್ಮ, ಅಂಕಲ್ ಆಂಟಿ, ಅಕ್ಕ ಭಾವ ನೋಡೋಕೆ ಬರ್ತಾರೆ. ಹಾಗಾಗಿ ನನ್ನ ಸಿನಿಮಾ ಅವರನ್ನು ಓಲೈಸುವ ಹಾಗಿರುತ್ತದೆ. ಅದು ಈಗಿನ ಮಾರುಕಟ್ಟೆಯ ಅವಶ್ಯಕತೆ ಕೂಡ.
~ ಎಲ್ಲರೂ ಒಳ್ಳೆ ಸಿನಿಮಾ ಮಾಡಿ, ಒಳ್ಳೇ ಕಥೆ ಬರೀರಿ ಅಂತಾರೆ. ಮಾಡಿದರೆ ನೋಡಲ್ಲ. ಬರೆದರೆ ಓದಲ್ಲ.

~ ನಾನು ಕಥೆಯನ್ನು ಪಾತ್ರಗಳ ಮೂಲಕ ಹೇಳಲು ಬಯಸ್ತೇನೆ. ನಂಗೆ ಸಿನಿಮಾ ಮಾಡಲು ಒಂದೊಳ್ಳೆ ಪಾತ್ರ ಸಿಕ್ಕರೆ ಸಾಕು. ಇದು ತಪ್ಪು ಅಂತ ಗೊತ್ತು. ಇಲ್ಲಿ ಸಿನಿಮಾ ಮಾಡಬಯಸುವ ನಿರ್ದೇಶಕರಿಗೆ ಹೇಳೋದು ಒಳ್ಳೆ ಕಥೆ ಇಟ್ಕೊಂಡು ಸಿನಿಮಾ ಮಾಡಿ.

ಇನ್ನಷ್ಟು ಒಳ್ಳೆಯ ಸಂವಾದ ಅಲ್ಲಿ ನಡೆಯಿತು. ಮೆದುಳಿಗೆ ಒಳ್ಳೆ ಮೇವು ದೊರಕಿಂದಂತೆ ಸಂತೃಪ್ತಿಯಿಂದ ಹೊರಬಂದೆ.

~ ೧ ~
ಊಹೆಗಳನ್ನು ಅನುಭವವನ್ನಾಗಿ
ಮಾಡಿಕೊಳ್ಳಬಹುದಾಗಿದ್ದಿದ್ದರೆ
ಕಳೆಯಲಾಗದ ರಾತ್ರಿಗಳಿಗೋಸ್ಕರವೇ
ಒಂದಿಷ್ಟು ನೆನಪುಗಳನ್ನು
ಸೃಷ್ಟಿಸಿಕೊಳ್ಳಬಹುದಿತ್ತು.
ಇಂಚಿಂಚಾಗಿ ಸಾಯುವುದನು
ತಪ್ಪಿಸಿಕೊಳ್ಳಬಹುದಿತ್ತು.
~೨~
ಕವಿಯೇನಲ್ಲ ನಾನು, ಬರೆಸುವುದು
ನನ್ನ ಬೆರಳು
ಹಿಡಿದು ಹೃದಯ
ಭಗ್ನಗೊಳಿಸಿದವಳ ನೆರಳು
~೩~
ಗುಡುಗಿನ ಮೂಲಕ ಪಲ್ಲವಿ
ಚರಣಕೆ ಮಿಂಚೇ ಕಾರಣ
ಒಟ್ಟಾರೆ, ನೆಲಕೆ ಚಿಗುರುವ ಕನಸಿನ ಹಾಡ
ಕಲಿಸಿದ್ದು ಆಗಷ್ಟೇ ಹುಟ್ಟಿದ ಮೋಡ
~೪~
ಎತ್ತಲಿಂದೆತ್ತ ಹಾರೋ
ಚಿಟ್ಟೆ ಚಿತ್ತ ಚಂಚಲ
ಅನಿಸಿದರೂ ಒಳಗೊಳಗೆ
ಅದಕೆ ಸದಾ ಪರಿಮಳದ್ದೇ ಧ್ಯಾನ
~೫~
ರಾತ್ರಿಯ ಜೋಪಡಿಯಲಿ
ನಿದಿರೆಯ ಬೆಳಕಿನಲಿ
ಒಂದಿಷ್ಟು ಕನಸುಗಳನ್ನು ಹುಡು-
ಕಾಡುವ ನನ್ನ ಪ್ರಯತ್ನ
ಇನ್ನೂ ಜಾರಿಯಲ್ಲಿದೆ
368785-bigthumbnail
~೬~
ಹೂ ಕಿತ್ತ ಹುಡುಗಿಯ
ಕೈ ಬೆರಳಿನ ಘಮವನ್ನೂ
ಹೂವೆಂದೇ ಭ್ರಮಿಸಿ
ಚಿಟ್ಟೆ ರಮಿಸುತಿದೆ
~೭~
ಒಂದಿಷ್ಟು ನೆನಪುಗಳನು
ಎದೆಗೂಡಿನಲಿ
ಜೋಪಾನವಾಗಿರಿಸಿಕೊಂಡಿರುವೆ
ಎಂದಿಗಾದರೂ ಒಮ್ಮೆ ಅವು
ನನ್ನ ಕತ್ತಲಿನ ರಾತ್ರಿಗಳಿಗೆ
ಕನಸಾಗಿ ಬಂದು
ಬೆಳಕಾಗಿಸಬಹುದೆಂಬ ಆಸೆಯಿಂದ.
~೮~
ಇಂದು ತನ್ನ ಸೊಗಸಾದ ಕನಸೊಂದನ್ನು
ವಿವರಿಸಬೇಕೆಂಬ ಆಸೆಯಲ್ಲಿದ್ದ ಹೂವಿಗೆ
ಮಕರಂದ ಹೀರುವ ಧ್ಯಾನದಲ್ಲೇ ಇದ್ದ
ಭ್ರಮರವ ಕಂಡು
ಭ್ರಮನಿರಸನವಾದಂತಿದೆ
~೯~
ಸದಾ ನೀ ಹೊರಟು ಹೋಗುವ
ಮುನ್ನ ನೀಡುವ ಮುತ್ತು
ಮತ್ತೆ ನೀ ಸಿಗುವವರೆಗೆ
ನನ್ನೊಳಗನ್ನು ಸದಾ
ಜೀವಂತವಾಗಿರಿಸುವ ದೀಪ
images
~೧೦~
ರಸ್ತೆಯಂಚಲಿ ದಿನಾ ಸಿಗುವಳು
ಬುಟ್ಟಿಯ ತುಂಬಾ ನಕ್ಷತ್ರ ಮಾರುವ ಹುಡುಗಿ
ಈ ಬಾರಿ ಅವಳ ಬಳಿ
ನಕ್ಷತ್ರಗಳದೇ ಮಾಲೆ ಕೊಂಡುಕೊಳ್ಳಬೇಕು
ಊರ ಸೂರ್ಯ ಚಂದ್ರರಿಗೆಲ್ಲಾ ಇನ್ನೇನು
ಗ್ರಹಣ ಬಡಿವ ಸಮಯ
~೧೧~
ನಿನ್ನ ಈ ಮೌನ ಮೊನಚು
ಹೇಳಬೇಕಾದ್ದನ್ನು ಹೇಳುವುದರ ಜೊತೆಗೆ
ಹೇಳಲಾಗದ್ದನ್ನೂ ಸ್ಪಷ್ಟವಾಗಿ ಅರುಹುತ್ತದೆ
~೧೨~
ಕವಿತೆ ಓದಲು ಪುಟ ತೆರೆದೊಡೆ
ಪದ ಹಾರುವ ಹಕ್ಕಿ
ಮನದ ಬನದ ತುಂಬಾ
ಹಕ್ಕಿ ಬಡಿದ ರೆಕ್ಕೆ ಹೆಜ್ಜೆ.
~೧೩~
ತೇಲುತಿರುವ ತೆಪ್ಪಕ್ಕೆ
ದಡದ ಗುರಿ ತೋರುತಿಹುದು
ಚಂದ್ರನ ಲಾಂದ್ರ.

 

ಕವಿತೆಯಲ್ಲಿ ’ಮಣ್ಣಿನ ವಾಸನೆ, ಸಂಸ್ಕೃತಿಯ ಸೊಗಡು ಹಾಸುಹೊಕ್ಕಾಗಿರಬೇಕು ಎಂದು ಗೋಪಾಲಕೃಷ್ಣ ಅಡಿಗರು ಸದಾ ಅನ್ನುತಿದ್ದ ಮಾತು. ಅದು ನಮ್ಮ ಎಲ್ಲರ ಒಳಮನಸ್ಸಿನ ಮಾತೂ ಹೌದು. ಬರೀ ಕವಿತೆಯಲ್ಲ, ಕಲೆಯ ಎಲ್ಲಾ ಪ್ರಾಕಾರಗಳಲ್ಲೂ ನಮ್ಮ ನಾಡಿನ, ನಮ್ಮ ಸಂಸ್ಕೃತಿಯ ಛಾಪು ಇದ್ದರೆ ಆ ಕಲಾಕೃತಿ ನಮ್ಮ ಮನಮುಟ್ಟುವುದು, ನಮ್ಮೊಳಗಿನದೇ ಅನಿಸುವುದು ಎಂಬುದು ಸತ್ಯ. ಒಂದು ಕತೆಯನ್ನು ಸಾಂಸ್ಕೃತಿಕ ಹಿನ್ನೆಲೆಯಿಂದ ನಿರೂಪಿಸಿದರೆ ಅದು ಆರ್ಟ್ ಸಿನಿಮಾ ಅಂತ ಮುದ್ರೆಯೊತ್ತಿ, ಟೆಲಿವಿಶನ್ ನಲ್ಲಿ ಬರಲು ಕಾಯುವ ಮನಸ್ಥಿತಿಗೇ ಒಗ್ಗಿಹೋಗಿರುವ ಕನ್ನಡ ಚಿತ್ರರಂಗಕ್ಕೆ ಉಳಿದವರು ಕಂಡಂತೆ ಚಿತ್ರ ಭಿನ್ನವಾಗಿ ಎದ್ದುನಿಲ್ಲುತ್ತದೆ. ಹೊಸ ಹಾದಿಯೊಂದನ್ನು ತೆರೆದಿಡುತ್ತದೆ.

ಚಾಪ್ಟರ್ ಒಂದು –  ನಿರೂಪಣಾ ತಂತ್ರ

ಒಂದು ಸರ್ಕಲ್ ಇರುತ್ತದೆ. ನಾಲ್ಕು ದಾರಿಗಳು ಆ ಸರ್ಕಲ್ ನಲ್ಲಿ ಸೇರುತ್ತದೆ. ಮತ್ತೆ ಆ ದಾರಿಗಳು ಬೇರ್ಪಟ್ಟು ಮುಂದಿನ್ನೊಂದು ಸರ್ಕಲ್ ನತ್ತ ಸೇರುತ್ತದೆ. ಹೀಗೆ ಉಳಿದವರು ಕಂಡಂತೆಯ ಕಥಾನಿರೂಪಣೆಯಲ್ಲಿ ಇಂಥ ಬಹಳ ಸರ್ಕಲ್ ಗಳಿವೆ. ನೋಡುಗ ನೋಡನೋಡುತ್ತಿದ್ದಂತೆ, ಓಹ್ ಆ ದಾರಿ ಬಂದು ಇಲ್ಲಿ ಸೇರಿತಾ ಅಂತ ಗಮನಿಸುತ್ತಾ ಹೋಗುತ್ತಾನೆ. ಒಂದು ದೃಶ್ಯವನ್ನು ಬೇರೆ ಕೋನದಿಂದ ಮತ್ತೆ ತೋರಿಸಿ ಕಥಾಚಲನೆಯಲ್ಲಿ ಕೊಂಡಿ ಬೆಸೆಯಲಾಗುವುದು ಹೊಸ ಬಗೆಯ ನಿರೂಪಣಾತಂತ್ರ.

ಈ ತಂತ್ರ ಕೆಲವೊಮ್ಮೆ – ಒಂದು ಕಥೆಯನ್ನು ಸುಖಾಸುಮ್ಮನೆ ಕಾಂಪ್ಲೆಕ್ಸ್ ಮಾಡುತ್ತಿದೆ ಅನ್ನಿಸಿದರೂ ಚಿತ್ರದ ಮೂಲ ಉದ್ದೇಶವೇ ಒಂದು ಘಟನೆಯನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ಹೇಳುವುದು ಎಂಬುದಾದ್ದರಿಂದ ಈ ಚಿತ್ರದ ಅಗತ್ಯವೂ ಹೌದಾಗುತ್ತದೆ. ಅಲ್ಲದೇ ಈ ತಂತ್ರ ’ವ್ಯಾಂಟೇಜ್ ಪಾಯಿಂಟ್’ ಎಂಬ ಹಾಲಿವುಡ್ ಚಿತ್ರವನ್ನು ಹೋಲುತ್ತದಾದರೂ, ಆ ಚಿತ್ರದಲ್ಲಿ ಕೊಂಡಿ ಒಂದೇ ಇದ್ದರೆ, ಉಳಿದವರು ಕಂಡಂತೆಯಲ್ಲಿ ಅಂಥ ಕೊಂಡಿ (ಸರ್ಕಲ್ ಗಳಂತದ್ದು) ಬಹಳ ಇವೆ.

Image

ಚಾಪ್ಟರ್ ಎರಡು –  ಪಾತ್ರ ಪೋಷಣೆ

ಇನ್ನೊಂದು ಕೋನದಲ್ಲಿ ನೋಡಿದರೆ, ಚಿತ್ರದಲ್ಲಿ ಕಥೆಗಿಂತ ಪಾತ್ರಪೋಷಣೆ ಮಾತ್ರ ಇರುವುದು. ಇಡೀ ಚಿತ್ರದ ಕಥೆಯನ್ನು ಒಂದೆರಡು ಸಾಲುಗಳಲ್ಲಿ ಹೇಳಲಸಾಧ್ಯವಾಗುವಂತೆ ಮಾಡುವುದು ಚಿತ್ರದ ಪಾತ್ರಪೋಷಣೆ. ಚಿತ್ರದ ಪ್ರತಿಯೊಂದು ದೃಶ್ಯವನು ಗಮನಿಸಿದರೆ ಅಲ್ಲಿ ಕಥೆ ಹೇಳಬೇಕೆನ್ನುವ ತುಡಿತಕ್ಕಿಂತ ಪಾತ್ರದ ಮನಸ್ಥಿತಿಯನ್ನು ಹೇಳುವ ಧಾವಂತವೇ ಎದ್ದು ಕಾಣುತ್ತದೆ. ಜೊತೆಗೆ ಮೇಲ್ನೋಟಕ್ಕೆ ಸಾಮಾನ್ಯವೆನಿಸುವ, ಬೇಡವಿದ್ದಿತ್ತೇನೋ ಅನಿಸುವ ದೃಶ್ಯಗಳಲ್ಲೂ ಈ ಪಾತ್ರಪೋಷಣೆಯ ಹಸಿವು ಎದ್ದು ಕಾಣುತ್ತದೆ. ಉದಾಹರಣೆಗೆ ರಿಚ್ಚಿ, ರೆಜಿನಾಳನ್ನು ರೇಗಿಸುವ, ಹಳೆಯ ಫೋಟೋಕ್ಕಾಗಿ ಕಾಡಿಸುವ ದೃಶ್ಯ. ರಿಚ್ಚಿಯ ಪಾಲಿಗೆ ರಿಮಾಂಡ್ ಹೋಂ ಗೆ ಸೇರಿದ್ದು ಅವನ ಬದುಕಿನಲ್ಲೇ ಆದ ಕಪ್ಪು ಚುಕ್ಕೆ. ಮರೆಯಲಾಗದಂತ ಘಟನೆ. ಅದಕ್ಕಿರುವ ಒಂದೇ ಒಂದು ಸಾಕ್ಷಿ ಆ ಫೋಟೋ. ಅದವನಿಗೆ ಎಷ್ಟು ಮುಖ್ಯ ಅಂತ ಸಾರುವುದಕ್ಕೆ ಅಂಥ ಎರಡು ದೃಶ್ಯ ಸೇರಿಸಲಾಗಿದೆ.

ಜೊತೆಗೆ ಚಿತ್ರಕಥೆಯಲ್ಲೂ ಪಾತ್ರಪೋಷಣೆಗೆ ಮಹತ್ವ ನೀಡಲಾಗಿದೆ. ಒಂದಿಷ್ಟು ಉದಾಹರಣೆ ನೀಡುವುದಾದರೆ, ಕರಾವಳಿಯ ಮೀನುಗಾರ್ತಿಯರ ಬಾಯಲ್ಲಿ ಯಾವ ಸೀಕ್ರೆಟ್ಟೂ ಉಳಿಯುವುದಿಲ್ಲ ಎಂಬುದನ್ನು ಸೂಚ್ಯವಾಗಿ ತಾರಾ ಪಾತ್ರದ ಮುಖೇನ ನಿರೂಪಿಸುತ್ತಾರೆ. ತಾನು ದುಬೈಗೆ ಹೋಗ್ತಿರುವ ವಿಷಯ, ತನ್ನ ಮಗ ರಾಘು ಊರಿಗೆ ಬಂದ ವಿಚಾರ ಸಿಕ್ಕ ಎಲ್ಲರಲ್ಲೂ ತಿಳಿಸ್ತಾ ಹೋಗ್ತಾಳೆ.

ರಿಚ್ಚಿ ಶಂಕ್ರ ಪೂಜಾರಿಗೆ ಯಾವ ಪರಿ ಅನುಯಾಯಿ ಎಂದರೆ ಯಾರೋ ಒಬ್ಬ ಅವನ ವಿರುದ್ಧ ಮಾತಾಡಿದಾಗ ಚಚ್ಚಿ ಎಳೆತರುವ ದೃಶ್ಯದ ಮುಖಾಂತರ ತೋರಿಸ್ತಾರೆ.

ರಾಘುವಿನ ಪಾತ್ರ ಎಲ್ಲದರಿಂದಲೂ ಓಡಿಹೋಗುವುದು. ಚಿಕ್ಕಂದಿನಲ್ಲಿ ಊರು ಬಿಟ್ಟು ಓಡುವ ರಾಘು, ದೊಡ್ಡವನಾದ ಮೇಲೆ ಭೂಗತ ದೊರೆಗಳ ಹಿಡಿತದಿಂದ ಓಡುತ್ತಾನೆ. ಅಲ್ಲಿಂದ ದೌಬೈಗೆ ಓಡಿ ಹೋಗುವ ಕನಸಿಟ್ಟುಕೊಂಡಿರುತ್ತಾನೆ. ಎಷ್ಟೋ ವರ್ಷಗಳ ನಂತರ ಅಮ್ಮನನ್ನು ಭೇಟಿಯಾದ ಕೆಲಕ್ಷಣಗಳಲ್ಲೇ ಅಲ್ಲಿಂದ ಹೋಗುವ ಮಾತಾಡುತ್ತಾನೆ. ಚಿತ್ರದ ಕೊನೆಯಲ್ಲಿ ಒಂದು ವರ್ಷನ್ ಪ್ರಕಾರ, ರಾಘು ಸಾಯದೇ ದುಬೈಗೆ ಓಡಿಹೋಗಿರುತ್ತಾನೆ.

ಚಾಪ್ಟರ್ ಮೂರು – ನಟನೆ

ಈ ಚಿತ್ರದಲ್ಲಿ ಸಿಂಕ್ ಸೌಂಡ್ ಬಳಸಿಕೊಳ್ಳಲಾಗಿದೆ. ಒಂದು ಚಿತ್ರಕ್ಕೆ ಸಿಂಕ್ ಸೌಂಡ್ ಯಾಕೆ ಬೇಕು? ಮತ್ತು ಒಂದು ವೇಳೆ ನಟನೆಯಲ್ಲಿ ಡಬ್ಬಿಂಗ್ ಹೇಗಿರಬೇಕು? ಈ ಎರಡೂ ಪ್ರಶ್ನೆಗಳಿಗೆ ಉತ್ತರ, ಡೆಮಾಕ್ರಸಿಯ ನಟನೆ ನೋಡಿದರೆ ತಿಳಿದೀತು. ಸಿಂಕ್ ಸೌಂಡ್ ಇಲ್ಲದೇ ಹೋಗಿದ್ದರೆ ಆ ಪುಟ್ಟ ಹುಡುಗನ ಸಹಜ ಅಭಿನಯ ಮತ್ತು ಮಾತುಗಾರಿಕೆಗೆ ಡಬ್ಬಿಂಗ್ ನೀಡುವುದೂ ಹರಸಾಹಸದ ಕೆಲಸವಾಗಿರುತ್ತಿತ್ತು. ಜೊತೆಗೆ ರಿಚ್ಚಿಯ ಪಾತ್ರ, ಮತ್ತು ಬಾಲು (ಅಚ್ಯುತ್ ಕುಮಾರ್) ಪಾತ್ರಕ್ಕೆ ಕೂಡ ಅವನ ಆಂಗಿಕ ಅಭಿನಯಕ್ಕೆ ತಕ್ಕ ಮಾತು ದಕ್ಕದೇ ಹೋಗಬಲ್ಲ ಸಾಧ್ಯತೆಗಳಿದ್ದವು. ಸಿಂಕ್ ಸೌಂಡ್ ಚಿತ್ರಕ್ಕೆ ಮತ್ತಷ್ಟು ಸಹಜ ಸೌಂದರ್ಯ ನೀಡುವಂತಾಯಿತು.

ಚಿತ್ರದ ಎಲ್ಲಾ ಪಾತ್ರಗಳಿಗೆ ಒಂದಿಷ್ಟು ಹಿನ್ನೆಲೆ ಕಥೆಗಳಿದ್ದವು. ಈ ಹಿನ್ನೆಲೆ ಕಥೆಗಳೂ ಪಾತ್ರಗಳ ಅಭಿನಯವನ್ನು ಜಸ್ಟಿಫೈ ಮಾಡಲು ಸಹಕಾರಿಯಾಗಿದ್ದವು. ಅಂದರೆ ಒಂದು ವೇಳೆ ಆ ಪಾತ್ರದ ಕಲಾವಿದ ಒಂದಿಷ್ಟು ದೃಶ್ಯಗಳಲ್ಲಿ ಪರಿಪೂರ್ಣ ನಟನೆ ನೀಡದೇ ಹೋದರೂ ಪಾತ್ರಪೋಷಣೆಯ ನೆರವಿನಿಂದ ನೋಡುಗನಿಗೆ ರಿಜಿಸ್ಟರ್ ಆಗಬಲ್ಲಂಥ ಪಾತ್ರಪೋಷಣೆ ಇತ್ತು. ಆದರೆ ತಾರಾ ಪಾತ್ರಕ್ಕೆ ಯಾವುದೇ ಹಿನ್ನೆಲೆ ಇಲ್ಲ.  ಮೀನ್ ಕರ್ರಿ ಅಧ್ಯಾಯದಲ್ಲಿ ತಾರಾ ಪಾತ್ರದ ಒಂದಿಡೀ ದಿನದ ದಿನಚರಿಯ ಮೂಲಕ ಅವಳು ಕಳೆದ ಹದಿನೈದಿಪ್ಪತ್ತು ವರ್ಷದ ಮಾನಸಿಕ ವೇದನೆಯನ್ನು ಸೂಚಿಸಬೇಕಾಗಿತ್ತು. ಅದನ್ನು ತಾರಾ ನಿಭಾಯಿಸಿದ ಪರಿ ಅದ್ಭುತ. ಜೊತೆಗೆ ವರ್ಷಗಳ ನಂತರ ಮೊದಲ ಬಾರಿಗೆ ರಾಘುವನ್ನು ಭೇಟಿಯಾಗುವ ದೃಶ್ಯ, ಬಂದ ಕೆಲ ಕ್ಷಣಗಳಲ್ಲೇ ಹೊರಟು ನಿಂತಾಗ, ಊಟ ಆದ್ರೂ ಮಾಡ್ಕೊಂಡು ಹೋಗು ಅಂತ ಕೇಳುವಾಗಿನ ಭಯಮಿಶ್ರಿತ ಮನವಿ. ಎಷ್ಟೋ ವರ್ಷಗಳ ಹಂಬಲವಿದ್ದುದು ಸಿಕ್ಕಿಬಿಡುವ ಅನಿರ್ವಚನೀಯ ಸಂತಸ, ಜೊತೆಗೆ ಸಿಕ್ಕಿದ್ದು ಮತ್ತೆಲ್ಲಿ ಕಳೆದುಕೊಂಡುಬಿಡುತ್ತೀನೇನೋ ಎಂಬುದರ ಭಯ ಎರಡನ್ನು ಮಿಶ್ರ ಮಾಡಿದ ಅವರ ಅಭಿನಯ ಶ್ಲಾಘನೀಯ.

ಇನ್ನು ಅಚ್ಯುತ್ ಕುಮಾರ್ ಅಭಿನಯದ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಜೇಡಿಮಣ್ಣು ಯಾವ ಆಕಾರ ಕೂಡ ತಾಳಬಲ್ಲದೋ ಹಾಗೆ ಅಚ್ಯುತ್ ಕಥೆಗೆ ತಕ್ಕಂತೆ ಮತ್ತು ತಕ್ಕಷ್ಟೇ ಆಂಗಿಕ ಅಭಿನಯ, ಜೊತೆಗೆ ತಮ್ಮ ಭಾಷೆಯನ್ನು, ಸಂಭಾಷಣೆಯನ್ನು ನಿಯಂತ್ರಿತವಾಗಿಟ್ಟುಕೊಂಡಿದ್ದಾರೆ. ಕುಂದಾಪುರದ ಭಾಷೆಯನ್ನು ಅದೆಷ್ಟೋ ವರ್ಷಗಳಿಂದ ಅಲ್ಲೇ ಆಡಿಬೆಳೆದವರೋ ಎಂಬಂತೆ ಅನಿಸಿದರೆ ಪೂರ್ಣ ಕ್ರೆಡಿಟ್ಟು ಅವರ ಪ್ರತಿಭೆಗೆ ಸಲ್ಲಲೇಬೇಕು.

ಚಾಪ್ಟರ್ ನಾಲ್ಕು – ಛಾಯಾಗ್ರಹಣ ಮತ್ತು ಸಂಗೀತ

ಚಿತ್ರದ ಹಿನ್ನೆಲೆ ಸಂಗೀತವನ್ನು ಇನ್ನೊಂದು ಪಾತ್ರವಾಗಿ ಮಾಡಿಕೊಂಡಂತಿದೆ ರಕ್ಷಿತ್. ಟ್ರೈಲರ್ ಮತ್ತು ಆಡಿಯೋದ ಮೂಲಕವೇ ಚಿತ್ರದ ಹಿನ್ನೆಲೆ ಸಂಗೀತವನ್ನು ನೋಡುಗರ ಪರಿಚಯಿಸಿ ಸಿನಿಮಾದಲ್ಲಿ ಹಿನ್ನೆಲೆ ಸಂಗೀತವನ್ನು ಮತ್ತಷ್ಟು ಹತ್ತಿರವಾಗುವಂತೆ ಮಾಡಿದ ಐಡಿಯಾ ಕೂಡ ಒಂದು ರೀತಿ ವರ್ಕ್ ಔಟ್ ಆಗಿದೆ. ಮುಖ್ಯವಾಗಿ ರಿಚ್ಚಿಯ ಎಂಟ್ರಿ ದೃಶ್ಯ, ಕಿಶೋರ್ ರ ಪ್ರೇಮ ದೃಶ್ಯ ಮತ್ತು ಕ್ಲೈಮಾಕ್ಸ್ ನಲ್ಲಿ ಹಿನ್ನೆಲೆ ಸಂಗೀತ ಅದಕ್ಕೆ ಉದಾಹರಣೆ. ಚಿತ್ರಕ್ಕೊಂದು ಸ್ಟೈಲ್ ಕೊಡುವುದಕ್ಕೂ ಇದು ಬಳಕೆ ಆಗಿದೆ. ಅಜನೀಶ್ ಲೋಕನಾಥ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಬೇರೆಯೇ ಆದ ಫ್ಲೇವರ್ ಉಳ್ಳದ್ದು.

Image

ಕರಮ್ ಚಾವ್ಲಾ ಛಾಯಾಗ್ರಹಣ ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್. ಫ್ರೇಮಿಂಗ್ ಇಡುವುದಾಗಲಿ, ಪಾತ್ರಗಳ ಪೊಸಿಶನಿಂಗ್ ಮತ್ತದಕ್ಕೆ ತಕ್ಕ ಲೈಟಿಂಗ್ ಎಲ್ಲವನ್ನೂ ಎಚ್ಚರಿಕೆಯಿಂದ ಮಾಡಿದ್ದು ಅವರ ಯಶಸ್ಸಿಗೆ ಕಾರಣ. ಮುಖ್ಯವಾಗಿ ರಕ್ಷಿತ್ ಶೆಟ್ಟಿಯ ನಿರ್ದೇಶನ ಪ್ರತಿಭೆಗೆ ಎರವಾಗುವಂಥ ಕೆಲವು ದೃಶ್ಯಗಳಲ್ಲಿ ಕರಮ್ ಚಾವ್ಲಾ ಅವರ ಕೊಡುಗೆಯೂ ಇರುವುದು ಅಲ್ಲಗಳೆಯಲಾಗದ ವಿಚಾರ.

ಚಾಪ್ಟರ್ ಐದು – ನಿರ್ದೇಶನ

ರಕ್ಷಿತ್ ಶೆಟ್ಟಿ ತಮ್ಮ ಸ್ಕ್ರಿಪ್ಟ್ ಕುರಿತು ಬಹಳ ಎಚ್ಚರ ಕೊಟ್ಟಿರುವುದು, ಚಿಕ್ಕ ಪುಟ್ಟ ಡೀಟೈಲಿಂಗ್ ಗೆ ಕೂಡ ಆಸ್ಥೆವಹಿಸಿರುವುದು ಗಮನಕ್ಕೆ ಬರುತ್ತದೆ. ಮುಖ್ಯವಾಗಿ ನಮ್ಮದೇ ನೆಲದ ಕಥೆಯೊಂದು ಹೇಳುತ್ತಿರುವಾಗ ಚಿಕ್ಕ ವಿಷಯವನ್ನೂ ನಿಗಾವಹಿಸಿ ಹೇಳಬೇಕಾಗುತ್ತದೆ. ಅದು ಮನೆಗೆ ಬಂದವರಿಗೆ ಬೆಲ್ಲ ನೀರು ಕೊಡುವ ವಿಚಾರವೇ ಇರಲಿ, ಮೀನನ್ನು ಲೆಕ್ಕಮಾಡದೇ ಭಾಗ ಮಾಡುವ ದೃಶ್ಯವಿರಲಿ, ಅಥವಾ ಬಸ್ ಕಂಡಕ್ಟರ್ ಒಬ್ಬ ಮೀನು ಏನಾದರೂ ಉಳಿದಿದೆಯಾ ಅಂತ ಕೇಳುವುದೇ ಇರಲಿ. ಪಾತ್ರಗಳಾಡುವ ಭಾಷೆಯ ವಿಚಾರದಲ್ಲೂ ಆ ಎಚ್ಚರ ಕಂಡುಬರುತ್ತದೆ. ವಾಲಿ ಕಳುಕ್ ಎಂಬ ಬೈಗುಳ, ಎಂಥಾ ಸಾವ್ ಮರೆ ಅನ್ನುವಾಗ ಬೇಕಾಗಿದ್ದ ರಾಗ, ಶಾಲೆಯಲ್ಲಿ ಸಿಗರೇಟ್ ಸೇದಿ ಸಿಕ್ಕಿ ಬಿದ್ದ ಎಂಬ ಮಾತು ಬಂದಾಗ, ಡೆಮಾಕ್ರಸಿ ಹೇಳುವ, – ಓಯ್.. ಬೀಡಿ ಮಾರ್ರೆ ಎಂಬ ಸಂಭಾಷಣೆ, ಹುಲಿವೇಷದ ಪಾತ್ರ ಎಲ್ಲವೂ ಚಿತ್ರದ ಚೌಕಟ್ಟನ್ನು ನಮ್ಮದೇ ನೆಲದ ಕಥೆ ಎಂಬಂತೆ ಮಾಡುತ್ತದೆ.

ಮೊದಲ ಚಿತ್ರದಲ್ಲೇ ರಕ್ಷಿತ್ ಮಾಡಿರುವ ಕೆಲವೊಂದು ಪ್ರಯತ್ನಗಳು ಮನಸೂರೆ ಮಾಡುತ್ತದೆ. ಬೇರೆ ಕಾಲ ಮತ್ತು ಒಂದೇ ಸ್ಥಳವನ್ನು ಮಿಳಿತ ಮಾಡುವ ದೃಶ್ಯ ಅದರಲ್ಲೊಂದು. ಜರ್ನಲಿಸ್ಟ್ ರೆಜಿನಾ, ರಾಘು ಅಡಗಿದ್ದ ಮನೆ ನೋಡಲು ಹೋದಾಗಲೇ ರಿಚ್ಚಿ ಒಳಬರುವ ಬರುವ ದೃಶ್ಯ ಅಂಥದ್ದೊಂದು ವಿಶಿಷ್ಟ ಪ್ರಯತ್ನ. ಬೇರೆ ಭಾಷೆಯಲ್ಲಿ ಬಂದಿದ್ದರೂ ಇಲ್ಲಿ ಅಳವಡಿಸಿರುವ ರೀತಿ ಶ್ಲಾಘನೀಯ.

ರಾಘು ತನ್ನ ಅಮ್ಮನನ್ನು ಎಷ್ಟೋ ವರ್ಷಗಳ ನಂತರ ನೋಡಲು ಬರುವಾಗಲೂ ಕಾಲ ಸ್ಥಳದ ಮೇಳೈಕೆಯೊಂದನ್ನು ಬರಿಯ ಲೈಟಿಂಗ್ ನಲ್ಲಿ ತೋರಿಸುತ್ತಾರೆ ರಕ್ಷಿತ್. ರಾಘು, ಬಾಗಿಲು ತಟ್ಟಿ ಖುಷಿಭರಿತ ಆತಂಕದಲ್ಲಿ ಹಿಂತಿರುಗಿ ಸ್ವಲ್ಪ ದೂರ ಬಂದು ನಿಲ್ಲುವುದೂ ಕೂಡ ಒಂದು ಒಳ್ಳೆಯ ಭಾವನಾತ್ಮಕ ದೃಶ್ಯ ಸಂಯೋಜನೆ.  

ಪಾತ್ರಗಳ  ಪುಟ್ಟ ಪುಟ್ಟ ಭಾವನೆಗಳನ್ನು ಚೆನ್ನಾಗಿ ರಿಜಿಸ್ಟರ್ ಮಾಡುವುದರಿಂದಲೇ ಉಳಿದವರು ಕಂಡಂತೆ ಚಿತ್ರ ಲೂಸಿಯಾ ಚಿತ್ರಕ್ಕಿಂತ ಆಪ್ತವಾಗುತ್ತದೆ. ರಾಘು ಓಡಿ ಹೋಗುವಾಗ ಬೋಟ್ ಒಳಗಿಂತ ರಿಚ್ಚಿಯನ್ನು ನೋಡುವ ದೃಶ್ಯ, ರೆಜಿನಾ ಮತ್ತು ಇನ್ನೊಂದು ಪಾತ್ರ ತಾರಾ ಮನೆಯ ಬಳಿ ಬಂದಾಗ ತಾರಾ ತನ್ನೊಳಗಿನ ಒದ್ದಾಟದ ಪ್ರಶ್ನೆಯೊಂದನ್ನು ಕೇಳಬೇಕೆಂದು ಬಂದೂ ಸುಮ್ಮನಾಗುವ ದೃಶ್ಯ ಇದಕ್ಕೆ ಉದಾಹರಣೆ.

Image

ಹಾಗಂತ ಚಿತ್ರದಲ್ಲಿ ನೆಗೆಟಿವ್ ಅಂಶ ಇಲ್ಲದಿಲ್ಲ. ಒಂದು ಸಿನಿಮಾದಲ್ಲಿ ಸ್ಲೋ ಮೋಷನ್ ದೃಶ್ಯಿಕೆಗಳ ಬಳಕೆಗೆ ಕೆಲವು ಉದ್ದೇಶಗಳಿವೆ. ಅವಶ್ಯವಿದ್ದಲ್ಲಿ ಮಾತ್ರ ಬಳಸಿದ್ದರೆ ಅನುಕೂಲವಿತ್ತು. ಮತ್ತು ಚಿತ್ರದ ಶೀರ್ಷಿಕೆ ಉಳಿದವರು ಕಂಡಂತೆ ಅಂತ ಇದ್ದರೂ, ಯಾವ ಕಥೆಯನ್ನು ಯಾರು ಹೇಳುತ್ತಿದ್ದಾರೆ ಎಂಬುದನ್ನು ನೋಡುಗನಿಗೆ ತಿಳಿಸದೇ ಇರುವುದು ಚಿತ್ರದ ಅಮೂರ್ತತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ರಾಘು ಸತ್ತಿದ್ದನ್ನು ನೋಡುಗನಿಗೆ ತೋರಿಸಿ, ನಂತರ ಇನ್ನೊಂದು ಪಾತ್ರದ ಮೂಲಕ ಬದುಕಿದ್ದಾನೇನೋ ಅಂತ ಹೇಳಿಸುವುದು ನೋಡುಗನಿಗೆ ಅನಾವಶ್ಯಕ ಗೊಂದಲ ಹುಟ್ಟಿಸುತ್ತದೆ.

ಚಿತ್ರದ ಸ್ಕ್ರಿಪ್ಟ್ ನ್ನು ತುಂಬಾ ಕೂಲಂಕಷವಾಗಿ ಕ್ರಾಫ್ಟ್ ಮಾಡಿದ್ದರೂನು, ಶೂಟಿಂಗ್ ಸಮಯದಲ್ಲಿನ ಕೆಲವು ತಪ್ಪುಗಳು ಎದ್ದು ಕಾಣುತ್ತದೆ. ಮುಖ್ಯವಾಗಿ ರೆಜಿನಾ ಪಾತ್ರದ ಬಾಲ್ಯದಲ್ಲಿ ಕ್ಯಾಮರದಿಂದ ಫೋಟೋ ತೆಗೆಯುವಾಗ ಕೈ ಅಡ್ಡ ಇರುವುದು, ಯಜ್ಞಾ ಶೆಟ್ಟಿ ಮೀನುಗಳನ್ನು ಬುಟ್ಟಿಯಿಂದ ಎತ್ತಿಹಾಕುವುದನ್ನು ಒಬ್ಬ ಮೀನುಗಾರ್ತಿಯಂತೆ ಮಾಡದ್ದು, ’ಕಾ’ ಅನ್ನುವ ಅಧ್ಯಾಯದಲ್ಲಿ ಕೆಲವೊಂದು ದೃಶ್ಯಗಳ ಕ್ವಾಲಿಟಿ ಬೇರೆ ರೀತಿಯಿರುವುದು, ಇಂಥ ಚಿಕ್ಕ ಪುಟ್ಟ ತಪ್ಪುಗಳು ಎದ್ದು ಕಂಡರೂ ನಿರ್ದೇಶಕನೊಬ್ಬನ ಮೊದಲ ಚಿತ್ರವೆಂಬುದು ಅದೆಲ್ಲದರ ಮನ್ನಿಸುವಿಕೆಗೆ ಕಾರಣವಾಗಬಹುದು.

ನಿಮಿತ್ತ

ಒಟ್ಟಿನಲ್ಲಿ  ಚಿತ್ರದ ಕಥೆ, ನಿರೂಪಣೆ, ನಟನೆ, ಭಾಷೆಯ ಬಳಕೆ ಮತ್ತು ಭಿನ್ನವಾದ ಫ್ಲೇವರಿಂಗ್ ಮೂಲಕ ಉಳಿದವರು ಕಂಡಂತೆ ಚಿತ್ರ ಕನ್ನಡದಲ್ಲೊಂದು ವಿಶಿಷ್ಟ ಪ್ರಯತ್ನ. ಮೊದಲ ಚಿತ್ರದಲ್ಲೇ ಒಂದೊಳ್ಳೆಯ ಚಿತ್ರ ನೀಡಿದ ರಕ್ಷಿತ್ ಶೆಟ್ಟಿ ತಮ್ಮ ನಿರ್ದೇಶನದಿಂದ ಗಮನ ಸೆಳೆಯುತ್ತಾರೆ.

ಲೈಬ್ರೆರಿಯ ಕಪಾಟಿನಲ್ಲಿ ಜೋಡಿಸಲ್ಪಟ್ಟಿರುವ ಪುಸ್ತಕಕ್ಕೆ ತನ್ನದೇ ಅಪ್ಯಾಯವಾದ ವಲಯವೊಂದಿದೆ. ಅದು ತನ್ನದೇ ಆದ ವಿಶಿಷ್ಟ ಪ್ರಪಂಚ ಹೊಂದಿದೆ. ಯಾರಾದರೂ ಒಮ್ಮೆ ಅದರೆಡೆಗೆ ಹೋಗಿ ಇಸ್ಪೀಟೆಲೆಯೊಂದನ್ನು ಎತ್ತುವಂತೆ ಪುಸ್ತಕವೊಂದನ್ನು ತೆರೆದರೆ ಸಾಕು, ಆತನನ್ನು ತನ್ನ ಪ್ರಪಂಚಕ್ಕೆ ಕೈ ಹಿಡಿದು ಎಳೆದೊಯ್ಯುತ್ತದೆ. ಪುಸ್ತಕದ ಮುಖಪುಟದಲ್ಲಿರುವ ಹೆಸರಿನ ಜೊತೆಗೆ, ಅದರ ಅಕ್ಷರದ ವಿನ್ಯಾಸ ಕೂಡ ಆ ಪ್ರಪಂಚದ ಬಾಗಿಲಿನ ಕೀಲಿಕೈ. ಒಳಪುಟಗಳ ಕಲೆ, ಚಿತ್ರಗಳು ಆ ಪ್ರಪಂಚದ ಕಿಟಕಿಯಾದೀತು. ಮತ್ತು ಅಲ್ಲಿಂದ ಒಳಬರುವ ಬೆಳಕಲ್ಲಿ ಓದುಗನ ಪ್ರಪಂಚ ಇನ್ನಷ್ಟು ಸ್ಪಷ್ಟ, ಇಷ್ಟವಾದೀತು.

ಪುಟ ತೆರೆದಾಗ ಅಲ್ಲಿ ಅರಳುವ ಗಂಧ ಬೇರೆಲ್ಲಿಯೂ ಸಿಗದು, ಆ ಪರಿಮಳಕ್ಕಾಗಿ ನೀವು ಲೈಬ್ರೆರಿಯ ತೋಟಕ್ಕೇ ಹೋಗಬೇಕಾಗುತ್ತದೆ. ಈ ವಿಶಿಷ್ಟ ಪರಿಮಳದ ಜೊತೆಗೆ ಯಾವುದಾದರೂ ಪುಸ್ತಕ ಓದಿ ಅದರ ಭಾವಗಳನ್ನು ಮನಸ್ಸಿಗೆ ಉದ್ದೀಪ್ತಗೊಳಿಸಿದರೋ ಅದೊಂದು ಮುದ್ರೆಯಂತೆ ಮನಸ್ಸಿನಲ್ಲೇ ಉಳಿದುಬಿಡುತ್ತದೆ. ಮೆದುಳ ಪದರದೊಳಗೆ ಪರಿಮಳದ ಜೊತೆಗೆ ಓದಿದ ಭಾವವೂ ಲಾಕ್ ಆಗಿರುತ್ತದೆ. ಎಷ್ಟೋ ವರ್ಷಗಳ ನಂತರ ನೀವು ಆ ಪುಸ್ತಕ ಓದಬೇಕಿಲ್ಲ, ಸುಮ್ಮನೆ ಆ ಪರಿಮಳವನ್ನು ಮತ್ತೆ ಹಾಯ್ದರೂ ಸಾಕು, ಫಕ್ಕನೆ ಮಾಯಾದೀವಿಗೆಯಿಂದ ಹೊರಬಂದ ಜೀನಿಯಂತೆ ಯಾವತ್ತೋ ಓದಿದ ಭಾವ ಎದುರು ಬಂದು ನಿಲ್ಲುತ್ತದೆ. ಭಾವನೆಗೂ ಸುಗಂಧಕ್ಕೂ ಸಂಬಂಧವಿರುವುದು ಅರಿವಾಗುವುದು ನವಿರು ಪುಟವನ್ನು ಬೆರಳು ಪ್ರೀತಿಯಿಂದ ಸವರಿದಾಗಲೇ.

ಲೈಬ್ರೆರಿಯ ಮೌನದಲ್ಲಿ ಜ್ಞಾನದ ಅಲೆಗಳು ಓಡಾಡುತ್ತಿರುತ್ತದೆ. ಅಲ್ಲಿನ ಮೌನಕ್ಕೆ ದೇವಸ್ಥಾನದ ಭಕ್ತಿಯ ಲೇಪವಿದೆ. ಅದಕ್ಕೆ ಅದರದ್ದೇ ಆದ ಆಲಾಪವಿದೆ. ಕಿಟಕಿಯಾಚೆ ಹೆಸರಿಲ್ಲದ ಹಕ್ಕಿಯೊಂದು ಎಸೆದು ಹೋದ ಶಬ್ದಕೆ ಲೈಬ್ರೆರಿಯ ಮೌನ ವಿಚಲಿತವಾಗುವುದಿಲ್ಲ. ಒಂದು ವೇಳೆ ಈ ಲೋಕದ ಮೌನದ ಫ್ಲವರ್ ವಾಸ್ ಫಳ್ಳಂತ ಒಡೆಯುವುದು ನೋಡಲೇಬೇಕಾದರೆ ನಿರ್ವಾಹಕನನ್ನು ಗಮನಿಸಬೇಕಾಗುತ್ತದೆ. ಮೆತ್ತನೆ ಹತ್ತಿಯಂಥ ಧ್ವನಿಯಲ್ಲಿ ಮಾತಾಡಿಸಿದರೂ ಆತ ಮಾತ್ರ ತನ್ನ ಉತ್ತರವನ್ನು ಎತ್ತರದ ದನಿಯ ಗತ್ತಿನಲ್ಲೇ ನೀಡುತ್ತಾನೆ. ಸದ್ದಿಲ್ಲದ ಲೋಕದಲ್ಲಿ ಮುಳುಗಿದ ಓದುಗರು ಒಮ್ಮೆ ತಲೆಯೆತ್ತಿ ತನ್ನ ನೋಡುವರು ಅನ್ನುವ ಹೆಮ್ಮೆಯೊಂದು ಆತನ ಓರೆನೋಟದ ಎಡೆಯಲ್ಲಿರುತ್ತದೆ. ಇನ್ನು ರಸ್ತೆಯ ವಾಹನಗಳ ಹಾರ್ನಿನ ಸದ್ದು, ಕಾಲೇಜು ಯುವಕನ ಗಾಡಿಯ ಹೈ ವೀಲಿಂಗ್ ನ ಸದ್ದು, ಪಕ್ಕದಲ್ಲಿರುವ ಮೈದಾನದ ಕ್ರಿಕೆಟ್ಟಿನಲ್ಲಿ ವಿಕೆಟ್ಟು ಬಿದ್ದುದಕ್ಕೆ ಮೂಡುವ ಉದ್ಘೋಷದ ಸದ್ದುಗಳೆಲ್ಲವು ಲೈಬ್ರೆಯ ಸರಹದ್ದಿನಲ್ಲಿರುವ ಲಕ್ಷ್ಮಣ ರೇಖೆ ದಾಟಿಬಂದರೂ ಅದು ಮಹತ್ವವಿಲ್ಲದೇ ಹೋಗುವ ಮಾಯಾಲೋಕ ಇಲ್ಲಿ ಸೃಷ್ಟಿಯಾಗಿರುತ್ತದೆ. ಇನ್ನು, ಎಲ್ಲೋ ಲೇಖಕನ ಪೆನ್ ಡ್ರಾಪ್ ಸೈಲೆನ್ಸ್ ನಿಂದ ಮೂಡಿದ ಅರ್ಥದ ಸದ್ದು, ಇಲ್ಲಿನ ಪಿನ್ ಡ್ರಾಪ್ ಸಿಲೆನ್ಸಿನಲ್ಲಿ ಸ್ಪಷ್ಟವಾಗಿ ಕೇಳಬಹುದು. ಲೈಬ್ರೆರಿಯ ನಿರ್ವಾಹಕ, ಸೈಲೆನ್ಸ್ ಪ್ಲೀಸ್ ಎಂದು ಬರೆದು ಹಾಕಿದ ಬೋರ್ಡು ಗಾಳಿಗೆ ಅಲುಗಿ ಮಾಡುವ ಸದ್ದು ಸಹಿಸಿದರೂ, ಪುಟ್ಟ ಪಿಸುಗುಟ್ಟುವಿಕೆಗೆ ಭುಸುಗುಟ್ಟಬಲ್ಲ.

ಬಹುತೇಕ ಎಲ್ಲಾ ಲೈಬ್ರೆರಿಯ ಓದುಗರಲ್ಲೂ ಒಬ್ಬ ಒಂದು ಸಾಲಿನ ವಿಮರ್ಶಕ ಇದ್ದೇ ಇರುತ್ತಾನೆ. ಅವನು ಯಾವುದೋ ಗಲ್ಲಿಯ, ಯಾವುದೋ ಮನೆಯ, ಯಾವುದೋ ಕೋಣೆಯಲ್ಲಿ ಕುಳಿತೇ ಇಲ್ಲಿ ಲೈಬ್ರೆರಿಯ ಪುಸ್ತಕಗಳ ಕಪಾಟಿನ ಸಾಲುಗಳ ಮಧ್ಯೆ ಕಳೆದುಹೋದ, ಕನ್ ಫ್ಯೂಸ್ ಆದ ವ್ಯಕ್ತಿಗೆ ದಾರಿ ತೋರಬಲ್ಲ. ಇಷ್ಟಕ್ಕೂ ಅವನು ಮಾಡುವುದಿಷ್ಟೇ; ಓದಿದ ಪುಸ್ತಕಗಳಲ್ಲಿ this is a very good book ಅಂತ ಕುತ್ತಿಗೆ ಒತ್ತಿ ಬರೆಸಿರುವಂತಿರುವ ಕೈಬರಹದಲ್ಲಿ ಬರೆಯುತ್ತಾನೆ. ಹೀಗೆ ಯಾವ ಪುಸ್ತಕ ಆರಿಸಲಿ ಅಂತ ಲೈಬ್ರೆರಿಯ ಕಪಾಟಿನ ಸಾಲುಗಳ ಮಧ್ಯೆ ಕಳೆದುಹೋದ ಅಭಿಮನ್ಯುವಿಗೆ ದಾರಿ ತೋರಿಸಬಲ್ಲ.

ಇನ್ನೂ ಪುಸ್ತಕದ ಒಳದಾರಿಗಳಲ್ಲಿ ಹೋಗಿ ಇಂಥ ಒನ್ ಲೈನ್ ವಿಮರ್ಶೆಯನ್ನು ಓದುವ ವ್ಯವಧಾನವಿಲ್ಲದವರು ಮತ್ತೊಂದು ಮಾರ್ಗೋಪಾಯ ಕಂಡು ಹಿಡಿದಿದ್ದಾರೆ. ಅದು ಪುಸ್ತಕದ ಹಿಂಭಾಗದಲ್ಲಿ ಅಂಟಿಸಿರುವ ಚೀಟಿಯನ್ನು ಗಮನಿಸುವುದು. ಕೊನೆಯ ದಿನಾಂಕಗಳಿಂದಲೇ ಅರಳಿರುವ ಕೊನೆಯ ಪುಟವದು. ಒಂದು ಪುಸ್ತಕ ಊರಿನ ಒಂದು ಮೂಲೆಯ ಮನೆಯಲ್ಲಿನ ಕೋಣೆಯಿಂದ ಮುಕ್ತಿ ಪಡೆವ, ಮತ್ತೊಂದ್ಯಾವುದೋ ಕೋಣೆಯೊಳಗೆ ಹೋಗಲು ಅವಕಾಶಕ್ಕೆ ಅನುಮತಿ ಸಿಗುವ ದಿನಾಂಕಗಳವು. ಅವೇ ಪುಸ್ತಕದ ಪಾಲಿನ ಸ್ವಾತಂತ್ರ್ಯದಿನಗಳು. ಆ ಪುಟ ಪೂರ್ತಿ ದಿನಾಂಕಗಳೇ ತುಂಬಿದ್ದರೆ ಅಂಥ ಪುಸ್ತಕವನ್ನು ಹೆಚ್ಚು ಓದುಗರು ಕೊಂಡೊಯ್ದಿದ್ದಾರೆ ಹಾಗಿದ್ದಾಗ ಇದು ಬಹುಶಃ ಚೆನ್ನಾಗಿರುವ ಪುಸ್ತಕ ಅಂತಲೇ ಆತ ಭಾವಿಸುತ್ತಾನೆ. ಕೋಟ್ಯಾಧಿಪತಿಯಲ್ಲಿನ ಆಡಿಯೆನ್ಸ್ ವೋಟಿಂಗ್ ಮಾದರಿಯಲ್ಲಿ ಆ ಪುಸ್ತಕವನ್ನೇ ಆರಿಸಿ ಒಯ್ಯುತ್ತಾನೆ.ಇಂಥದ್ದೊಂದು ಉಪಾಯವನ್ನು ಕಂಡುಹಿಡಿದ ಅಂಥ ಓದುಗರನ್ನು ಲೈಬ್ರೆರಿಯೆಂಬ ಭೋಧನ ವೃಕ್ಷದ ಕೆಳಗೆ ಜ್ಞಾನೋದಯಗೊಂಡ ಬುದ್ಧರೆನ್ನಬಹುದು.

ಯಾವುದೋ ಒಂದು ಬೆಡ್ರೂಮಿನಲ್ಲಿ ಓದುತ್ತಾ ಓದುತ್ತಾ ಓದುಗ ಇನ್ನೇನು ಪುಸ್ತಕದ ಮೇಲೆಯೇ ಬಿದ್ದು ಬಿಡುತ್ತಾನೆ ಅನ್ನುವಾಗ ಪುಸ್ತಕಗಳಲ್ಲಿನ ಅಂಡರ್ ಲೈನ್ ಆಗಿರುವ ಸಾಲುಗಳು ಎಚ್ಚರಿಸುತ್ತದೆ. ಓದುತ್ತಿದ್ದೇನೆಂಬ ಭಾವದಲ್ಲಿದ್ದುಕೊಂಡು ಓದುವ ಭರದಲ್ಲಿ ಅರ್ಥದ ಹಳಿತಪ್ಪಿ ಸಾಗುವ ಓದುಗನನ್ನೂ ಇಂಥ ಅಡಿಗೆರೆಗಳು ಎಬ್ಬಿಸುತ್ತಿರುತ್ತದೆ. ಮತ್ತೆ ರಸದ ಹಳಿ ಮೇಲೆ ಯಾರದೋ ಅನುಭವವು ನಮ್ಮ ಅನುಭೂತಿಯಾಗಬಲ್ಲಂಥ ಗಮ್ಯದೆಡೆಗೆ ಸಾಗುವ ಉಮೇದು ಕೊಡುತ್ತದೆ.

ಹಾಗೇನೆ ಕೊನೆ ಪುಟದಲ್ಲಿನ ಸಸ್ಪೆನ್ಸ್ ಒಂದನ್ನು ಮೊದಲನೇ ಪುಟದಲ್ಲೇ ಬರೆವ ಚಾಳಿಗೂ ಓದುಗ ಸಿಲುಕಬೇಕಾಗುತ್ತದೆ. ಸಸ್ಪೆನ್ಸ್ ಸಿಕ್ಕಿದ ಸಿಟ್ಟಿನಲ್ಲೂ (ಏನಾದರೂ ಸಿಕ್ಕಿದರೂ ಸಿಟ್ಟಾಗುವ ಸಂಗತಿ ಬಹುಶಃ ಇದು ಒಂದರಲ್ಲೇ ಇರಬೇಕು!) ಓದುಗನಿಗೆ ಒಳಸುಳಿಯಲ್ಲಿ ಗಮ್ಯಕ್ಕಿಂತ ಗಮ್ಯದೆಡೆಗೆ ಸಾಗುವ ದಾರಿ ಕೂಡ ಮಹತ್ವದ್ದು ಎಂಬ ಪಾಠವೂ ಸಿಗುತ್ತದೆ. ಚೋಮನ ದುಡಿ, ಮಲೆಗಳಲ್ಲಿ ಮದುಮಗಳು ಪುಸ್ತಕದಲ್ಲಿ ಎಂಥ ಸಸ್ಪೆನ್ಸ್ ಇರುತ್ತದೆ, ಆದರೂ ಮತ್ತೆ ಮತ್ತೆ ಓದಿಸಿಕೊಳ್ಳಲು ಕಾರಣ ಅದು ಸೃಷ್ಟಿಸಿದ ಮಾಯಾಲೋಕ ಮತ್ತು ಅದು ವಿವರಿಸುವ ಜೀವನಕ್ರಮ, ನಿರೂಪಣೆಯ ವಿನ್ಯಾಸದಲ್ಲೇ ಇದೆ.

ಪುಸ್ತಕ ಸೃಷ್ಟಿಸಿದ ಮಾಯಾಲೋಕದೊಳಗೆ ಸಿಕ್ಕಿ ದಾರಿತಪ್ಪಿದವರ ಮತ್ತೆ ಕೆಲವುಸಲ ಓದಿನ ಹಾದಿಯಲ್ಲಿ ಸುಸ್ತಾದವರ ತಂಪಿನ ನೆಳಲಿನ ನೆನಪಿಗೆಂದೆ ಕೆಲವು ಪುಸ್ತಕಗಳಲ್ಲಿ ಕಿವಿಹಿಂಡಿದ ಪುಟಗಳಿರುತ್ತದೆ. ಆ ಪುಟಗಳು ಓದುಗರ ಪಾಲಿನ ಇಂಟರ್ ವಲ್. ಕೆಲವರು ಹತ್ತಿರದಲ್ಲಿ ಪೆನ್ಸಿಲ್ ಇಟ್ಟುಕೊಂಡಿರದ ತಮ್ಮ ತಪ್ಪಿಗೆ ಚಂದದ ಕೊಟೇಶನ್ ಇರುವ ಪುಟದದ ಕಿವಿ ಹಿಂಡಿ ಬಿಟ್ಟಿರುತ್ತಾರೆ.

ಹೊಸಾ ಲೇಖಕನೊಬ್ಬ ವಿಶಾಲ ಲೈಬ್ರೆರಿಯ ಕಪಾಟಿನ ಮಧ್ಯೆಯಲ್ಲಿ ತನ್ನ ಪುಸ್ತಕವೊಂದನ್ನು ತುಂಬು ಸಂಕೋಚದಿಂದ ಹಿಡಿದು, ಎಸ್ಸೆಲ್ಸಿ ಹುಡುಗನೊಬ್ಬ ರಿಸಲ್ಟ್ ನೋಡುವಾಗಿನಂಥಹ ಹಿಂಜರಿಕೆಯಿಂದ ಕೊನೆಭಾಗದಲ್ಲಿರುವ ಕೊನೆದಿನಾಂಕಗಳ ಪಟ್ಟಿ ಮೇಲೆ ಕಣ್ಣಾಡಿಸುವಾಗ ಆತನ ಕಣ್ಣುಗಳು ಖುಷಿಯಿಂದ ಪ್ರದೀಪ್ತವಾಗಲಿ. ಮನದ ನಾಲಿಗೆಗೆ ಓದಿನ (ಅಭಿ)ರುಚಿ ಹತ್ತಿಸಿದ ಅಡುಗೆಭಟ್ಟನ ಖುಷಿ ಅವನದಾಗಲಿ. ಸಾಲು ಕಪಾಟಿನಲ್ಲಿರುವ ಯಾವುದೇ ಲೇಖಕನ ಯಾವುದೇ ಪುಸ್ತಕಗಳಿಗೆ ಓದಿಲ್ಲದ ಗುರುತಿನಂತಹ ಧೂಳು ಅಂಟದಿರಲಿ.

ಯಾಕೆಂದರೆ,

ಮುಂಬೈನ ಬಾಂದ್ರಾದಲ್ಲೋ, ಮಂಗಳೂರಿನ ಬಂದರಲ್ಲೋ, ಮನೆಮೂಲೆಯ ಟೇಬಲಿನಲ್ಲೋ ಕುಳಿತು ಬರೆವ ಲೇಖಕನ ಹೊಳಹು, ಭಾವವಿನ್ಯಾಸ, ಜೀವನದ್ರವ್ಯವೊಂದು ಇನ್ಯಾವುದೋ ಹಳ್ಳಿಯಲ್ಲಿ, ವಿಶಾಲ ಹಜಾರದಲ್ಲಿ, ಟೀವಿಯ ಸೆಳೆತವನ್ನೂ ಹತ್ತಿಕ್ಕಿ, ಪಕ್ಕಕ್ಕಿರಿಸಿ, ತನ್ನೊಳಗಿನ ಮೌನದಲ್ಲಿ ಕುಳಿತು ಓದುವ ಓದುಗನ ಮನದಲ್ಲಿ ಮೂಡಿಸುವ ಬೆಳಕಿದೆಯಲ್ಲ, ಅದು ವಿಶಿಷ್ಟ ಮತ್ತು ವಿಶೇಷವಾದ್ದು.

 

(‘ಸಖಿ’ ಪಾಕ್ಷಿಕದಲ್ಲಿ ಪ್ರಕಟವಾಗಿದೆ.)

ಹದಿನೆಂಟನೇ ಶತಮಾನದಲ್ಲಿ ಹೊರದೇಶದಲ್ಲಿ ರಾಜಕೀಯ ನಾಯಕನೊಬ್ಬ ಎಲ್ಲಾ ಊರುಗಳಿಗೆ ಹೋಗಿ ಭಾಷಣ ನೀಡಬೇಕಾಗಿತ್ತು. ಅದೊಂದು ದಿನ ಯಾವುದೋ ಹಳ್ಳಿಯಲ್ಲಿ ಭಾಷಣವಿತ್ತು. ಆ ದಿನವಿಡೀ ಭಾಷಣದಿಂದ ಆ ನಾಯಕ ತುಂಬಾ ಸುಸ್ತಾಗಿದ್ದ. ಅದನ್ನು ಗಮನಿಸಿದ ಕಾರ್ ಡ್ರೈವರ್, ಸರ್ ನೀವು ತುಂಬಾ ಸುಸ್ತಾಗಿದ್ದೀರಿ, ಈ ಹಳ್ಳಿಯಲ್ಲಿ ನಿಮ್ಮನ್ನು ನೋಡಿದವರ್ಯಾರೂ ಇಲ್ಲ, ಹಾಗಾಗಿ ನೀವು ಕಾರಲ್ಲಿ ರೆಸ್ಟ್ ತಗೊಳ್ಳಿ, ನಾನು ಭಾಷಣ ಮಾಡ್ತೀನಿ ಅಂದ. ನಾಯಕ ಒಪ್ಪಿದ.

ಎಲ್ಲಾ ಊರಿನಲೂ ಭಾಷಣ ಕೇಳಿ ಅಭ್ಯಾಸವಾಗಿದ್ದ ಕಾರ್ ಡ್ರೈವರ್ ರಾಜಕೀಯ ನಾಯಕನ ಉದ್ದೇಶಕ್ಕೆ ಭಂಗವಾಗದಂತೆ ಭಾಷಣ ಮಾಡಿದ. ಕೊನೆಯಲ್ಲಿ ಪ್ರಶ್ನೋತ್ತರವಿದ್ದರೂ ಚೆನ್ನಾಗಿ ನಿಭಾಯಿಸುತ್ತಿದ್ದ. ಆಗ ಸಭಿಕರಲ್ಲೊಬ್ಬ ನಾಯಕನ ಪರ್ಸನಲ್ ವಿಷಯದ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ. ಆ ಕುರಿತು ಕಾರ್ ಡ್ರೈವರ್ ಗೆ ಗೊತ್ತಿರಲಿಲ್ಲ. ಆ ಪ್ರಶ್ನೆಯಂತೂ ಗೊತ್ತಿಲ್ಲ ಅನ್ನುವಂತಿಲ್ಲದ ಪ್ರಶ್ನೆ.

ಆಗ ಕಾರ್ ಡ್ರೈವರ್ ನಕ್ಕು, ‘ಈ ಪ್ರಶ್ನೆ ತುಂಬಾ ಸಿಂಪಲ್, ಇದಕ್ಕೆ ನನ್ನ ಕಾರ್ ಡ್ರೈವರ್ ಕೂಡ ಉತ್ತರ ನೀಡಬಲ್ಲ’ ಎಂದು ಆ ರಾಜಕೀಯ ನಾಯಕನನ್ನು ಕರೆದ.

 

***********

 

ಒಬ್ಬ ಹುಡುಗ ಅಂಗಡಿಗೆ ಬಂದು ಅಲ್ಲಿದ್ದ ಕಾಯಿನ್ ಬಾಕ್ಸ್ ಫೋನ್ ನಲ್ಲಿ ಮಾತಾಡಲು ಬಯಸಿದ. ಅವನ ಎತ್ತರಕ್ಕೆ ಅದು ಎಟುಕದ ಕಾರಣ ಅಂಗಡಿಯವ ಅವನಿಗೆ ನಿಲ್ಲಲು ಸ್ಟೂಲ್ ಕೊಟ್ಟ.

ಕಾಯಿನ್ ಹಾಕಿ ಹುಡುಗ ಮಾತಾಡಲು ಆರಂಭಿಸಿದ. ‘ಹಲೋ, ಮೇಡಮ್ ನಿಮ್ಮಲ್ಲಿ ಏನಾದರೂ ಕೆಲಸವಿದೆಯಾ?’ ಆ ಕಡೆಯಿಂದ ಇಲ್ಲವೆಂಬ ಉತ್ತರ ಬಂದಿರಬೇಕು. ‘ಯಾವುದಾದರೂ ಕೆಲಸವಾದೀತು, ನೀವು ಸಂಬಳ ಕೊಡದಿದ್ದರೂ ಪರವಾಗಿಲ್ಲ, ಊಟ ಕೊಟ್ಟರೆ ಸಾಕು’ ಮತ್ತೆ ಆ ಕಡೆಯಿಂದ ನಕಾರ ಬಂದಿತೆಂಬಂತೆ ಸರಿ ಎಂದು ಫೋನಿಟ್ಟ.

ಇದನ್ನೆಲ್ಲಾ ಕಾಣುತ್ತಿದ್ದ ಅಂಗಡಿಯವನಿಗೆ ಕನಿಕರವೆನ್ನಿಸಿ ಆ ಹುಡುಗನಿಗೆ, ನನ್ನ ಅಂಗಡಿಯಲ್ಲೇ ಕೆಲಸ ಮಾಡ್ತೀಯಾ? ಅಂತ ಕೇಳಿದ.

ಅದಕ್ಕೆ ಆ ಹುಡುಗ, ‘ನಾನೀಗ ಫೋನ್ ಮಾಡಿದ್ದು ನಾನು ಕೆಲಸ ಮಾಡುವ ಸ್ಥಳಕ್ಕೇನೆ’

 

***********

 

ಒಂದು ಪ್ರಾಜೆಕ್ಟ್ ತಂಡಕ್ಕೆ ಅವತ್ತು ಜೀನಿ ಸಿಕ್ಕಿಬಿಟ್ಟ. ಹತ್ತು ರೂಪಾಯಿ ಸುಡೋಕ್ಸು ಕಾರ್ಡನ್ನೇ ಬಿಡದ ಅವರುಗಳು ಜೀನಿಯನ್ನು ಬಿಟ್ಟಾರೆಯೇ. ಅವನು ಬರುವವರೆಗೂ ಮಾಯಾದೀವಿಗೆಯನ್ನು ಉಜ್ಜತೊಡಗಿದರು. ಕ್ರೆಡಿಟ್ಟು, ಡೆಬಿಟ್ಟು ಕಾರ್ಡುಗಳನ್ನು ಉಜ್ಜಿ ಅನುಭವವುಳ್ಳ ಅವರಿಗೆ ಸೋತು ತಡಮಾಡದೇ ಜೀನಿ ಪ್ರತ್ಯಕ್ಷ ಆದ.

ಮೊದಲನೆಯವ ‘ನಾನು ಈ ಕ್ಷಣವೇ ರಿಯೋ ಡಿ ಜೆನೆರೋ ದಲ್ಲಿನ ರೆಸಾರ್ಟ್ ಒಂದರಲ್ಲಿ ಐಷಾರಾಮದ ಕೋಣೆಯಲ್ಲಿ ಇರಬೇಕೆಂದು ಬಯಸಿದ.

ಎರಡನೆಯವ ರೋಮಿನಲ್ಲಿ ತನ್ನ ಗೆಳತಿಯೊಂದಿಗೆ ದೋಣಿವಿಹಾರ ಮಾಡಬೇಕೆಂದು ಬಯಸಿದ.

ಅದೆಲ್ಲಾ ಕ್ಷಣದಲ್ಲಿಯೇ ಆಗಿಹೋಯಿತು ಕೂಡ.

ಮೂರನೆಯವನು ಆ ತಂಡದ ಪ್ರಾಜೆಕ್ಟ್ ಲೀಡರ್. ಒಂದು ನಿಮಿಷವೂ ತಡಮಾಡದೇ ತನ್ನ ಕೋರಿಕೆ ಮುಂದಿಟ್ಟ. ‘ಇವರಿಬ್ಬರೂ ಲಂಚ್ ಅವರ್ ಮುಗಿಯೋದ್ರೊಳಗೆ ಆಫೀಸಿನಲ್ಲಿರ್ಬೇಕು’

 

***********

 

ಆಕೆಗೆ ಬಹಳಷ್ಟು ವಯಸ್ಸಾಗಿದೆ. ಅವಳಿಗೆ ಇಬ್ಬರು ಮಕ್ಕಳು. ಕಿರಿಯವ ಆಕೆಯನ್ನು ಬಹಳಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾನೆ. ತನ್ನ ಮನೆಯಲ್ಲೇ ಆಕೆಯನ್ನು ಇರಿಸಿಕೊಂಡು ಆಕೆಯ ಬೇಕು ಬೇಡಗಳನ್ನೆಲ್ಲಾ ನೋಡಿಕೊಳ್ಳುತ್ತಿದ್ದ. ದೊಡ್ಡವನು ಈ ವಿಷಯದಲ್ಲಿ ಜಾಣಮೌನವನ್ನು ತೋರುತ್ತಾನೆ. ‘ತಾನು ಬ್ಯುಸಿ’ ಎಂಬ ಮುಸುಕಿನಿಂದ ಆಕೆಯನ್ನು ನೆಗ್ಲೆಕ್ಟ್ ಮಾಡುತಾನೆ. ಹೀಗಿರಬೇಕಾದರೆ ದೊಡ್ಡವನ ಮನೆಯ ಗೃಹಪ್ರವೇಶವಿರುತ್ತದೆ. ದೊಡ್ಡವ ಆಕೆಗೊಂದು ಕರ್ಚೀಫ್ ನ್ನು ಉಡುಗೊರೆಯಾಗಿ ನೀಡುತ್ತಾನೆ. ಆಕೆ ತುಂಬಾ ಖುಷಿಯಾಗುತ್ತಾಳೆ.

ಗೃಹಪ್ರವೇಶದ ದಿನ ಆಕೆ ಬಂದ ಸಂಬಂಧಿಕರಿಗೆಲ್ಲಾ ಆ ಕರ್ಚೀಫ್ ತೋರಿಸುತ್ತಾಳೆ. ತನ್ನ ದೊಡ್ಡ ಮಗ ಕೊಡಿಸಿದ್ದೆಂದು ಖುಷಿಯಿಂದ ಹೇಳಿಕೊಳ್ಳುತ್ತಾಳೆ.

ಇದನ್ನು ನೋಡಿ ಚಿಕ್ಕವನಿಗೆ ತುಂಬಾ ಬೇಸರವಾಗುತ್ತದೆ. ತಾನು ಆಕೆಗೆ ಎಷ್ಟು ಮಾಡಿದ್ದರೂ ಆಕೆ ಅದನು ಹೇಳದೇ ಕರ್ಚೀಫ್ ಕೊಡಿಸಿದ್ದನ್ನೇ ಎಲ್ಲರಿಗೂ ಹೇಳ್ತಾಳಲ್ಲ ಅಂತ ಖೇದ ಪಡ್ತಾನೆ. ಚಿಕ್ಕವನ ಗೆಳೆಯನೊಬ್ಬ ಅವನಿಗೆ, ಬೇಜಾರ್ ಮಾಡ್ಕೋಬೇಡ, ನಿಜವಾಗಿಯೂ ನಿನ್ನಮ್ಮ ನಿನ್ನನ್ನು ಹೊಗಳ್ತಾ ಇದಾಳೆ. ಒಂಚೂರು ಆಲೋಚಿಸಿ ನೋಡು’ ಅಂತಾನೆ.

ಚಿಕ್ಕವನಿಗೆ ಅರಿವಾಗುತ್ತದೆ, ಮುಗುಳ್ನಗುತ್ತಾನೆ!

***

(ಇದು ನೀಲಿಹೂವಿನ ೨೦೦ ನೇ ಪೋಸ್ಟ್)

ಮಹಾನಗರವೆಂದರೆ ಸುಮ್ಮನೆ ಅಲ್ಲ. ಬಟ್ಟೆಯನ್ನು ಶಿಲೆಗಲ್ಲಿಗೆ ಕುಟ್ಟಿ, ಬ್ರಷ್ ನಲ್ಲಿ ಉಜ್ಜಿ, ನೀರಲ್ಲಿ ಮುಳುಗಿಸಿ, ಅಡಿಮೇಲೆ ಮಾಡಿ ಸುಡುಬಿಸಿಲಿಗೆ ನೇತು ಹಾಕುತ್ತೇವಲ್ಲ, ಹಾಗೆ ನಮ್ಮೊಳಗೆ ಹೊಳಪು ತರಲು ಅದು ಮಾಡದಿರುವ ಕಸರತ್ತೇ ಇಲ್ಲ.

ಅವನೋ ಹಳ್ಳಿಯಿಂದ ಬಂದವನು. ಮಹಾನಗರದಲ್ಲಿ ಹೆಜ್ಜೆಯಿಟ್ಟ ಮೊದಲ ದಿನವೇ ಕಂಡಕ್ಟರು ಚೇಂಜ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಬೈದ. ಕಾಲೇಜ್ ಹುಡುಗಿಯೊಬ್ಬಳು ಸಿಗ್ನಲ್ ಕ್ರಾಸ್ ಮಾಡಿ ಟ್ರಾಫಿಕ್ ಪೋಲಿಸ್ ಕೈಲಿ ಸಿಕ್ಕಿ ಹಾಕಿಕೊಂಡಾಗ ಸಾರ್, ಎಕ್ಸಾಮ್ ಗೆ ಹೊರ್ಟಿದೀನಿ ಈಗ್ಲೇ ತಡಾ ಆಯ್ತು ಅಂತ ಹಸೀ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದನ್ನು ನೋಡಿದ. ರಸ್ತೆಯಲ್ಲಿ ನಡೆವ ಚಿಕ್ಕ ಪುಟ್ಟ ಆಕ್ಸಿಡೆಂಟುಗಳಲ್ಲಿ ಬಾಯ್ಮಾತು ಚೆನ್ನಾಗಿದ್ದವನದೇನೂ ತಪ್ಪಿರಲ್ಲ ಎಂಬುದನ್ನು ಅರಿತ. ಥಿಯೇಟರ್ ನಲ್ಲಿ ಟಿಕೇಟ್ ಸಿಗದೇ ಒದ್ದಾಡುತ್ತಿದ್ದ ಸಮಯದಲ್ಲಿ ಪಕ್ಕದಲ್ಲಿ ನಿಂತಿದ್ದ ಮಿನಿಸ್ಟ್ರ ಮಗನಿಗೆ ಒಂದು ಫೋನ್ ಕಾಲ್ ಮೂಲಕ ಟಿಕೇಟ್ ಹೇಗೆ ಸಿಕ್ಕಿತು ಎಂದು ಅಚ್ಚರಿ ಪಟ್ಟ. ಟ್ರಾಫಿಕ್ಕಿನಿಂದಾಗಿ ಗಂಟೆಗಟ್ಟಲೆ ಬಸ್ಸೊಳಗೇ ಇರಬೇಕಿದ್ದರೂ ಇದು ಸಾಮಾನ್ಯವೇ ಅಂತ ಸುಮ್ಮನೆ ತಾಳ್ಮೆಯಿಂದ ಕುಳಿತ ಜನರನ್ನು ಕಂಡ. ಒಂದು ಕಾಫಿಗೂ ಹನ್ನೆರಡು ರೂಪಾಯಿ ಕೊಡಬೇಕಾದ, ರೂಮು ರೆಂಟಿಗೇ ಮೂರು ಸಾವಿರ ನೀಡಬೇಕಿರುವ ಈ ಊರಿಗೆ ದೂರದ ಬೀದರಿನಿಂದ ಆರು ಸಾವಿರ ಪಗಾರದ ಸಪ್ಲಾಯರ್ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿಯ ಜೊತೆ ಕುಶಲೋಪರಿ ಮಾತಾಡಿದ. ನಿನ್ನೆಯಷ್ಟೇ ಪರಿಚಯವಾದ ಒಬ್ಬ ನೇರವಾಗಿ ಲಜ್ಜೆಯಿಲ್ಲದೇ ಒಂದೈದು ಸಾವ್ರ ಸಾಲ ಇದ್ರೆ ಕೊಡ್ತೀಯಾ ಗುರೂ, ನಾಳೆ ವಾಪಸ್ ಮಾಡ್ಬಿಡ್ತೀನಿ ಅಂತ ಆತ್ಮವಿಶ್ವಾಸದಿಂದ ಹೇಳುವುದನ್ನು ಸಾಲ ಕೊಡಲಾಗದ ಗಿಲ್ಟಿನಿಂದ ಕೇಳಿದ. ಇಸ್ತ್ರಿ ಅಂಗಡಿಯಲ್ಲಿ ಎಂಟು ರೂಪಾಯಿ ಬಿಲ್ಲಾದಾಗ ನೀಡಿದ ಹತ್ತು ರೂಪಾಯಿಗೆ ಎರಡು ರೂಪಾಯಿ ವಾಪಸ್ಸು ಬರುವುದೇ ಇಲ್ಲ. ಚೇಂಜಿಲ್ಲ ಎಂಬ ಎರಳ್ಡು ರೂಪಾಯಿ ಬೆಲೆಬಾಳದ ಉತ್ತರ ಸಿಗುತ್ತದೆ. ಚೀಟಿಯಲ್ಲಿ ಕಂಡೆಕ್ಟರು ಬರೆದುಕೊಡುವ ಬಾಕಿ, ತಾನು ಇಳಿವ ಸ್ಟಾಪ್ ಬಂದಾಗ ಕಂಡಕ್ಟರು ಬಸ್ಸಿನ ಮುಂತುದಿಯಲ್ಲಿರುತ್ತಾನೆ. ಆ ರಶ್ಶಿನಲ್ಲಿ ಇಂಥ ಅನೇಕ ಘಟನೆಗಳೇ ಕಂಡಕ್ಟರನ ‘ಗಳಿಕೆ’ಗಳು.

ಇಲ್ಲಿ ಮಾಡಿದ ತಪ್ಪನ್ನೂ ಆತ್ಮವಿಶ್ವಾಸದಿಂದ ಹೇಳುವುದನ್ನು, ಸುಳ್ಳನ್ನು ಸತ್ಯದ ಮೇಲೆ ಪ್ರಮಾಣ ಮಾಡಿ ಹೇಳೋದನ್ನು ಕಲೀಬೇಕು ಬಾಸೂ… ಮೊದಲೆಲ್ಲ ಸಿಗ್ನಲ್ ಎಗರಿಸಿ ಗಾಡಿ ಓಡಿಸಿದರೆ ಟ್ರಾಫಿಕ್ ಪೋಲಿಸ್ ಗಮನಿಸದೇ ಇದ್ದರೂ ತಾನೇ ಹೋಗಿ ಫೈನ್ ಕಟ್ಟಿದ್ದೆ ಅನ್ನುವುದು ಹೀರೋಯಿಸ್ಮ್ ಆಗಿತ್ತು. ಈಗ ಅದನ್ನು ದಡ್ಡತನ ಅಂತಾರೆ. ಹಾಗೆ ಮಾಡಿದವನನ್ನು ಎಲ್ಲರೂ ಅನುಕಂಪದಿಂದ ನೋಡ್ತಾರೆ. ಈಗ ಸಿಗ್ನಲ್ ಜಂಪ್ ಮಾಡಿ ಅದನ್ನ ಯಾವ ರೀತಿ ಸುಳ್ಳು ಹೇಳಿ ಫೈನ್ ನಿಂದ ಬಚಾವಾದೆ ಅಂತ ಯಾರಿಗಾದ್ರೂ ವಿವರಿಸಿ ನೋಡು. ಜಗತ್ತಿನಲಿ ನೀನೇ ದೊಡ್ಡ ಬುದ್ಧಿವಂತ ಅನ್ನೋ ಧಾಟಿಯಲಿ ನೋಡ್ತಾರೆ. ಇದು ಈಗಿನ ಬದುಕು ಬಾಸೂ.. ಬೇಗ ಅಪ್ಡೇಟ್ ಆಗಬೇಕು.. ಅಂತ ರೂಂಮೇಟ್ ಅನ್ನುವುದನ್ನು ವಿಪರೀತ ಮುಗ್ದತನದಲ್ಲಿ ಕೊನೆಯ ಸಾಲಿಗೆ ಬರುವಷ್ಟರಲ್ಲಿ ಒಂದಿಷ್ಟು ಆತಂಕವನ್ನೂ ಬೆರೆಸಿ ನೋಡುತ್ತಾನೆ.

ಅಪ್ಪಾ, ನೀ ಆರಾಮಿದ್ದಿ ಅಲ್ಲ. ಬೀಪಿ ಟ್ಯಾಬ್ಲೆಟ್ಟು ತಗೊಳ್ಳೊದನ್ನ ಮರೀಬೇಡ. ನಾ ಚೆನ್ನಾಗಿದ್ದ ಹಾಗೆ ಇದ್ದೇನೆ. ಈ ಊರಲ್ಲಿ ಯಾರೂ ನನ್ನವರು ಅನ್ನಿಸುವುದಿಲ್ಲ. ಈ ಊರ ಜನರ ಮುಂದೆ ನಾನು ಹದಿನೈದು ವರ್ಷ ಹಿಂದಿನವನಂತೆ ಅನ್ನಿಸುತ್ತಿದ್ದೇವೆ. ನನ್ನ ನಡಿಗೆ ಈ ಊರಿನ ಓಟದ ಮುಂದೆ ಏನೂ ಅಲ್ಲ ಅನಿಸ್ತಿದೆ. ಇಲ್ಲಿ ಬದುಕಲಿಕ್ಕೆ ಸುಳ್ಳು ಹೇಳೋದು ಮಾತ್ರ ಅಲ್ಲ, ಸುಳ್ಳು ಹೇಳುವವರನ್ನು ಗುರುತಿಸುವ ಕಲೇನೂ ತಿಳಿದಿರ್ಬೇಕು. ಮುಖದ ಯಾವ ನೆರಿಗೆಯಲ್ಲೂ ಗಿಲ್ಟಿನ ಲವಲೇಷವೂ ಸುಳಿಯದಂತೆ ಸುಳ್ಳು ಹೇಳೋದಕ್ಕೆ ಬರಬೇಕು.

ಬೆಳಿಗ್ಗೆ ಆಗ್ತಾ ಇದ್ದ ಹಾಗೆ ಎದುರಾಗೋ ಮಂದಿಯಲ್ಲಿ ನನ್ನ ನಾನು ರಕ್ಷಿಸಿಕೊಳ್ತಾ ಬದುಕಬೇಕು. ಒಂಚೂರು ಮೈಮರೆತರೂ ಮೋಸಹೋಗ್ತೀನಿ. ತುಂಬಾ ಕಷ್ಟವಾಗುತ್ತಿದೆ ಅಪ್ಪಾ, ನಾನು ಊರಿಗೆ ಬಂದುಬಿಡುತ್ತೇನೆ. ನೀನು ನನ್ನ ಮೇಲೆ ಜೋಡಿಸಿಟ್ಟ ಅಪಾರ ಕನಸುಗಳ ತೀರಿಸಲಾದದೇ ಹೋದುದಕ್ಕೆ ಇದೊಂದು ಸಲ ಕ್ಷಮಿಸಿಬಿಡು. ನನ್ನನ್ನೂ ನಿನ್ನ ಜೊತೆಯಲೇ ಇರಲು ಬಿಡು.

ಹೀಗೆ ಬರೆದ ಪತ್ರವೊಂದನ್ನು ಅಂಚೆಪೆಟ್ಟಿಗೆ ಹಾಕಲು ಹೋದಾಗ ತಂದೆಯ ಸೋತ ಮುಖ ಎದುರಿಗೆ ಬಂದಂತಾಗಿ ಭಯದಿಂದ ಹರಿದು ಹಾಕುತ್ತಾನೆ.

ಪಾರ್ಕಿನ ಮೂಲೆಯೊಂದರಲ್ಲಿ ಕೂತು ಈ ಊರಲ್ಲಿ ಪಳಗಬೇಕೆಂದರೆ ಒಂದೋ, ಒಬ್ಬೊಬ್ಬರಿಂದಲೂ ಇಂಥ ಅನೇಕ ಕಲೆಗಳನ್ನು ಕಲಿತು ಅವರಲ್ಲೊಬ್ಬರಾಗಬೇಕು. ಇಲ್ಲವೇ, ವ್ಯವಸ್ಥೆಯನ್ನು ದೂರಿಕೊಂಡು ಮೋಸಹೋಗುತ್ತಾ ಬದುಕಬೇಕು. ಈ ಎರಡು ರಸ್ತೆ ಸೇರುವ ಕಾರ್ನರಿನಲ್ಲಿ ಅರ್ಧ ಟೀ ಕುಡಿಯುತ್ತಾ ಆಲೋಚಿಸುತ್ತಿದ್ದ ಅವನು.

ಮಹಾನಗರ, ಬಟ್ಟೆಯನ್ನು ತಿರುವಿಹಾಕಿ ಸುಡುಬಿಸಿಲಲಿ ಒಣಗಿಸಲನುವಾಯ್ತು.

ಅವತ್ತು ಹೊಸ ಚಿತ್ರ ತಂಡವೊಂದರ ಸಂದರ್ಶನವಿತ್ತು.

ನನಗೆ ಅಗತ್ಯವಿದ್ದ ಎಲ್ಲ ಪ್ರಶ್ನೆಗಳ ಸಿದ್ಧತೆ ನಡೆಸಿಕೊಂಡು ತಯಾರಾಗಿದ್ದೆ. ‘ನಿಮಗೆ ಹೇಗನ್ಸುತ್ತೆ?’ ಯಂಥ ಚಿಲ್ಲರೆ ಪ್ರಶ್ನೆಗಳನ್ನು ಮೀರಿದ್ದೇನನ್ನೊ, ಬೇರೆಲ್ಲೂ ಓದಿರದ ಸೂಕ್ಷ್ಮ ಒಳಪದರಗಳನ್ನು ಸ್ಪರ್ಶಿಸಬೇಕು, ಓದುಗರಿಗೆ ಹೊಸ ಸಿನಿಮಾದ ಅಂತರಂಗದ ಹೊಸ ಪಲುಕಗಳನ್ನು ತೋರಿಸಬೇಕೆಂಬುದು ನನ್ನ ಆಶಯವಾಗಿತ್ತು. ಹೊಸ ತಂಡ, ಸಹಜವಾಗಿಯೇ ತುಂಬ ಅಡೆತಡೆಗಳನ್ನು ಮೀರಿ ಸಿನಿಮಾ ಮುಗಿಸಿದ್ದವು. ಪಟ್ಟ ಪಾಡುಗಳನ್ನೆಲ್ಲವನ್ನೂ ವಿವರಿಸುವ ಹಪಾಹಪಿಯಲ್ಲಿರುತ್ತಾರೆ. ಎಲ್ಲವನ್ನೂ ಶಾಂತಿಯಿಂದ ಕೇಳಿಸಿಕೊಂಡು ನನಗೆ ಬೇಕಾದ ಕೆಲವಂಶಗಳನ್ನು ಹೆಕ್ಕಿ ಕೇಳುವುದು ಸಾಮಾನ್ಯವಾಗಿ ಇಂಥ ಸಂದರ್ಶನಗಳಲ್ಲಿ ನನ್ನ ಅಜೆಂಡಾ ಆಗಿರುತ್ತದೆ.

ಸಂದರ್ಶನ ಶುರುವಾಯಿತು. ಎಂದಿನಂತೆ ಒಂದೊಂದೇ ಪ್ರಶ್ನೆಗಳ ಮೆಟ್ಟಿಲು ಹತ್ತುತ್ತಾ ಹೊಸ ಸಿನಿಮಾದ ಬಗ್ಗೆ ವಿವರ ಕಲೆಹಾಕಿಕೊಳ್ಳುತ್ತಿದ್ದೆ. ಹೆಚ್ಚಾಗಿ ಯಾವ ಸಿನಿಮಾದವರೂ ಪೋಷಕವರ್ಗದ ನಟರ ಬಗ್ಗೆ ಎಲ್ಲೂ ಜಾಸ್ತಿ ಹೇಳಿಕೊಳ್ಳುವುದಿಲ್ಲ. ಆದರೆ ಹೊಸ ಚಿತ್ರತಂಡದವರು ಹೇಳಿಕೊಳ್ಳಲು ಬಯಸುತ್ತಾರೆ. ಬಹುಶಃ ಜನಪ್ರಿಯ ಹೆಸರುಗಳಿರುವುದು ಚಿತ್ರದ ಮಾರ್ಕೆಟಿಂಗ್ ಗೆ ಒಂದು ಅಡ್ವಾಂಟೇಜ್ ಆಗಿರುತ್ತದೆಂಬುದು ಅವರ ಉದ್ದೇಶ. ಈ ಚಿತ್ರದ ಪೋಷಕವರ್ಗದ ಬಗ್ಗೆ ಕೇಳಿದಾಗ ನಿರ್ಮಾಪಕ ನಿರ್ದೇಶಕರು ಬಹಳ ಉತ್ಸಾಹದಿಂದ ಕೆಲವು ಪೋಷಕನಟರ ಹೆಸರು ಹೇಳಿದರು. ಅದರಲ್ಲಿ ಕೊನೆಯದಾಗಿ ಮೆಲ್ಲ ಉಸುರಿದ ಪೋಷಕ ನಟನ ಹೆಸರು ಮಾತ್ರ ಹೇಳಲೋ ಬೇಡವೋ ಎಂಬಂತಿತ್ತು.

ಆವರು ಒಂದೆರಡು ವರ್ಷದ ಹಿಂದೆ ವಿಧಿವಶರಾಗಿದ್ದ ಬಹಳ ಹಿರಿಯ ಕಲಾವಿದರು. ಬಹುಶಃ ಈ ಹೊಸ ತಂಡದ ಚಿತ್ರವೇ ಕೊನೆಯ ಚಿತ್ರವಾಗಿದ್ದಿರಬೇಕು. ಹಾಗಾಗಿ ನಾನು ಬಹಳ ಕುತೂಹಲಗೊಂಡೆ. ಅದೇ ವಿಷಯವನ್ನೇ ವಿಚಾರಿಸಿದೆ. ಆದರೆ ಆ ನಿರ್ದೇಶಕ, ನಿರ್ಮಾಪಕರಿಬ್ಬರೂ ಕೊಂಚ ಗಲಿಬಿಲಿಗೊಂಡರು. ಆ ಕಲಾವಿದ ನಿರ್ವಹಿಸಿದ ಪಾತ್ರದ ಕುರಿತು, ಅವರ ಕುರಿತು ಮಾತಾಡಿದರೂ ಕೊನೆಗೆ ಸ್ವಲ್ಪ ಸಂಕೋಚದಿಂದ ‘ಅವರು ಈ ಚಿತ್ರದಲ್ಲಿ ಅಭಿನಯಿಸಿದುದರ ಕುರಿತು ಜಾಸ್ತಿ ಬರೆಯಬೇಡಿ ಸರ್’ ಅಂದರು.

ಅಚ್ಚರಿಯಿಂದ, ‘ಯಾಕ್ರೀ? ಅಂಥ ಒಳ್ಳೇ ಕಲಾವಿದ ನಿಮ್ಮ ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ನೀವು ಹೆಮ್ಮೆ ಪಡಬೇಕಲ್ವಾ’ ಅಂತ ಕೇಳಿದಾಗ ಅವರು ಇತ್ತ ಉತ್ತರ ಕೇಳಿ ಒಳಜೀವ ತತ್ತರಿಸಿತು.

ಆ ನಿರ್ದೇಶಕ, ‘ಸರ್, ಅವರು ತೀರಿಹೋಗಿ ಒಂದೆರಡು ವರ್ಷವೇ ಆಯಿತು. ಅವರು ಅಭಿನಯಿಸಿದ್ದನ್ನು ಹೈಲೈಟ್ ಮಾಡಿದರೆ, ಈ ಚಿತ್ರ ಒಂದು ಹಳೆಯ ಪ್ರಾಡಕ್ಟ್ ಅಂತ ಇಡೀ ಚಿತ್ರರಂಗ ಒಂಥರಾ ನಿಷ್ಕಾಳಜಿ ತೋರುತ್ತೆ ಅಲ್ವಾ, ಹಾಗೇನೇ ಪ್ರೇಕ್ಷಕನಿಗೂ ಇದರ ಮೇಲೆ ಇಂಟ್ರಸ್ಟ್ ಕಡಿಮೆ ಆಗುವ ಸಾಧ್ಯತೆ ಇದೆ. ಆ ಅಂಶ ಬಿಟ್ಟು ಉಳಿದ ಕಲಾವಿದರ ಬಗ್ಗೆ ಬರೀರಿ ಸರ್’ ಅಂದರು!

ಅವಧಿ, ಓದುಗರ ಬಳಿ ಕಳೆದ ವರ್ಷ ಓದಿದ ಬೆಸ್ಟ್ ಪುಸ್ತಕಗಳ ಟಾಪ್ ಟೆನ್ ಪಟ್ಟಿ ಕೇಳ್ತಿದೆ. ಅದನ್ನು ನೋಡಿದಾಗ ನನಗೂ ಪಟ್ಟಿ ಮಾಡಬೇಕನ್ನಿಸಿತು. ಕಳೆದ ವರ್ಷ ಓದಿದ ತುಂಬಾ ಕಾಡಿದ ಪುಸ್ತಕಗಳ ಪಟ್ಟಿ ಇದು:-

೧. ಚಾರ್ಮಿನಾರ್ – ಜಯಂತ್ ಕಾಯ್ಕಿಣಿ

೨. The Professional – Subrato Bagchi

೩. ಹಲಗೆ ಬಳಪ – ಜೋಗಿ

tAzaELrA

೪. ಟೆಂಟ್ ಸಿನಿಮಾ – ಬೀಚಿ

೫. ಆಕಾಶಕ್ಕೊಂದು ಕಂದೀಲು! – ವ್ಯಾಸರಾಯ ಬಲ್ಲಾಳ

೬. ಅನುದಿನದ ಅಂತರಗಂಗೆ – ಪ್ರತಿಭಾ ನಂದಕುಮಾರ್

cDuUwUF6

೭. ಬಾಳ್ವೆಯೇ ಬೆಳಕು – ಡಾ. ಶಿವರಾಮ ಕಾರಂತ

೭. ಕಲ್ಲು ಕರಗುವ ಸಮಯ – ಪಿ.ಲಂಕೇಶ್

೮. The Winning Way – Harsha Bhogle

೯. What Young India Wants – Chethan Bhagat

ChetanBhagatWhatYoungIndiaWantsEDIT

೧೦. ಎದೆಗಾರಿಕೆ – ಅಗ್ನಿ ಶ್ರೀಧರ್

ಸಿನಿ ಬಿಟ್ಸ್…!

Posted: ನವೆಂಬರ್ 20, 2012 in ಸಿನೆಮಾ

(ಈ ಲೇಖನ “ಪೃಥ್ವಿ” ಮ್ಯಾಗಜೀನ್ ಗಾಗಿ ಬರೆದದ್ದು)

ಭಟ್ಟರು, ಉಡಾಫೆ ಮತ್ತು ವಿನಯ!

ಜಯಂತ್ ಕಾಯ್ಕಿಣಿಯವರ ಹಾಡುಗಳು ಅಂದರೆ ಕಾಡಿನ ಮಧ್ಯೆ ಸಿಕ್ಕುವ ಅಪ್ಪಟ ಶುದ್ಧ ನೀರು, ನನ್ನದು ಬಿಡಿ, ಎಲ್ಲಂದರಲ್ಲಿ ಸಿಗಬಹುದಾದ ಬಿಸ್ಲೇರಿ” ಅಂತ ಹೇಳಿ ಒಮ್ಮೆ ತಮ್ಮ ವಿನಯ ಮೆರೆದಿದ್ದ ಯೋಗರಾಜ್ ಭಟ್ಟರು ಈಗ ಮತ್ತೊಮ್ಮೆ ಸಂಗೀತ ಬ್ರಹ್ಮ ಹಂಸಲೇಖಾ ಎದುರು ನಾವೆಲ್ಲಾ ಏನೂ ಅಲ್ಲ ಅಂತ ಹೇಳಿ ತಾವಿನ್ನೂ ಸಾಧಿಸುವುದು ತುಂಬಾ ಇದೆ ಅನ್ನುವುದನು ಸೂಚ್ಯವಾಗಿ ಹೇಳಿದ್ದಾರೆ. ಭಟ್ಟರು ಅಂದರೆ ತಮ್ಮ ಹಾಡುಗಳಲ್ಲಿನ, ಸಂಭಾಷಣೆಯಲ್ಲಿನ ಉಡಾಫೆಯ ಲೇಪಕ್ಕೆ ಹೆಸರುವಾಸಿ. ಆ ಉಡಾಫೆಯನ್ನು ತಮ್ಮ ನಿರ್ದೇಶನದಲ್ಲಿ ಕಥೆಗೂ ವಿಸ್ತರಿಸಿದಾಗ ಪ್ರೇಕ್ಷಕರು ಎಂಥಾ ಗೂಸಾ ಕೊಟ್ಟರೆಂದರೆ ಪುನೀತ್, ಐಂದ್ರಿತಾ, ಅದ್ಭುತ ಹಾಡುಗಳು, ಸುಂದರ ದೃಶ್ಯಾವಳಿ ಇದ್ದರೂ “ಪರಮಾತ್ಮ” ಚಿತ್ರ ನೆಲಕ್ಕಚ್ಚಿತ್ತು.
ಈಗ ಬಹುನಿರೀಕ್ಷೆಯ “ಡ್ರಾಮಾ” ಬರಲಿದೆ. ಎಂದಿನಂತೆ ಮಾತಲ್ಲದೇ, ಕತೆಯೂ ಇದೆ ಅನ್ನುತ್ತಾ ಮಾತುಕತೆಯಾಡುತ್ತಿದ್ದ ಭಟ್ಟರು, ಹಂಸ್ ಸಾವಿರಕ್ಕೂ ಹೆಚ್ಚು ಹಾಡು ಬರೆದವರು, ಜಾನಪದ ಅರೆದು ಕುಡಿದವರು ಅಂಥವರ ಮುಂದೆ ಐವತ್ತು ಅರವತ್ತು ಹಾಡುಗಳನ್ನು ಬರೆದ ತಾವೇನೂ ಅಲ್ಲ ಅಂದರು.

ಹಿರಿಯ ಲೇಖಕರೊಬ್ಬರು “ಬರೆಯುವಾಗ ಆತ್ಮವಿಶ್ವಾಸ ಅಹಂಕಾರದಷ್ಟು ಎತ್ತರವಿರಬೇಕು, ಬರೆದಿದ್ದನ್ನು ತೋರುವಾಗ ವಿನಯ, ವಾಮನ ಬಲಿಯನ್ನು ತುಳಿಯಲು ಹೇಗೆ ಬೆಳೆಯುತ್ತಾನೋ ಹಾಗಿರಬೇಕು” ಅಂದಿದ್ದರು.

ಭಟ್ಟರು ಅಂತದ್ದೇ ಹಾದಿಯಲ್ಲಿ ನಡೆಯುತ್ತಿದ್ದಾರಾ!

****

ನೀವೇ ಹೇಳಿ ಸಾರ್!

ಒಂದಿಷ್ಟು ಸಮಯದ ಹಿಂದೆ, ಎಸ್. ನಾರಾಯಣ್ ಚಿತ್ರರಂಗ ಬಿಡುತ್ತೇನೆ ಎಂದು ಹೆದರಿಸಿದ್ದರು. ಅವರ ಸಮಯಬಧ್ಧತೆ, ಶಿಸ್ತುಪಾಲನೆ ಗಮನಿಸಿದ ಗಾಂಧಿನಗರಿಯ ಮಂದಿ, ಇನ್ನು ನಾರಾಯಣ್ ವಾಪಸ್ಸು ಬರುವುದಿಲ್ಲ, ಆ ವಿಷಯದಲ್ಲಿ ಅವರು ಕೊಟ್ಟ ಮಾತಿಗೆ ಕಟ್ಟುನಿಟ್ಟು ಅಂತಲೇ ಭಾವಿಸಿದ್ದರು. ಅದು ಸುಳ್ಳಾದದ್ದು ಹಳೆಯ ಸುದ್ಧಿಯಾತು. ಈಗ ಅವರು ರಮೇಶ್, ಮೋಹನ್ ಜೊತೆಯಲ್ಲಿ ಹಾಸ್ಯ ಚಿತ್ರವೊಂದನ್ನು ಮಾಡಲು ತಯಾರಾಗಿದ್ದಾರೆ. “ಕುರಿಗಳು ಸಾರ್ ಕುರಿಗಳು” ಚಿತ್ರದಲ್ಲಿ ಈ ಕಾಂಬಿನೇಶನ್ ಕೊನೆಯಬಾರಿ ಕಾಣಿಸಿಕೊಂಡಿತ್ತು. ಈ ಬಾರಿ ಜೊತೆಯಾಗಲಿರುವ ಚಿತ್ರಕ್ಕೆ ಏನು ಹೆಸರು ಸಾರ್ ಅಂತ ಕೇಳಿದರೆ, ಕುರಿಯಾಯ್ತು ಕೋತಿಯಾಯ್ತು, ಇನ್ನೂ ಬೇಜಾನ್ ಪ್ರಾಣಿಗಳಿವೆಯಲ್ಲಾ ತೊಂದರೆಲ್ಲ ಅನ್ನುವಂತೆ ನಕ್ಕರೂ, ನೀವೇ ಏನಾದ್ರೂ ಹೇಳಿ ಸಾರ್ ಅಂತ ಪ್ರೇಕ್ಷಕರನ್ನೇ ಕೇಳ್ತಿದಾರೆ!

***

ಬಿಸಿ ಬಿಸಿ ದೋಸೆ

ಲೂಸ್ ಮಾದ ಯೋಗಿ ಮತ್ತು ಬೆಡಗಿ ರಮ್ಯಾ ಜೋಡೀನಾ ಅಂತ ಮೂಗೆಳೆದಿದ್ದರು ಆಗ. ಅದು ವಿಜಯ ಪ್ರಸಾದ್ ನಿರ್ದೇಶನದ ಮೊದಲ ಚಿತ್ರ, ಸಿದ್ಲಿಂಗು. ಚಿತ್ರರಂಗದಲ್ಲಿ “ಮಾಮೂಲಿ ಕೋತಿಯ ತಾರುಣ್ಯ ಗೀತೆ”ಯಂತಿದ್ದ ಸಿನೆಮಾಗಳೇ ಬರುತಿದ್ದ ಸಮಯ. ಸಿದ್ಲಿಂಗು ತನ್ನ ವಿಭಿನ್ನ ನಿರೂಪಣೆ, ಡೈಲಾಗ್ ಬಾಜಿ, ಸ್ವಲ್ಪ ವಿಚಿತ್ರ ಅನ್ನಿಸುವ ಕತೆಂದ ಗೆದ್ದಿತ್ತು. ಈಗ ಅದೇ ವಿಜಯಪ್ರಸಾದ್ ಮತ್ತೆ ಎಲ್ಲರೂ ಹುಬ್ಬೇರಿಸುವಂಥ ಕಾಂಬಿನೇಷನ್ ತರುತ್ತಿದ್ದಾರೆ. ಚಿತ್ರಕ್ಕೂ “ನೀರ್ ದೋಸೆ” ಅಂತ ಹೆಸರಿಟ್ಟಿದ್ದಾರೆ. ನೀರ್ ದೋಸೆಯಲ್ಲಿ ನೀರೆಯಾಗಿ ರಮ್ಯಾ ಮತ್ತು ದೋಸೆ ಹುಯ್ಯುವ ನಾಯಕನಾಗಿ ಜಗ್ಗೇಶ್ ಇದ್ದಾರೆ. ಜೊತೆಗೆ ನಂಜಿಕೊಳ್ಳಲು ಮಸಾಲೆಭರಿತ ಚಟ್ನಿ, ಐಂದ್ರಿತಾ ರೇ.

ಚಿತ್ರದ ಟಿಕೆಟ್ಟು, ಬಿಸಿ ಬಿಸಿ ದೋಸೆ ಹಾಗೆ ಖರ್ಚಾಗುತ್ತದಾ ಅಂತ ಕಾಲವೇ ಹೇಳಬೇಕು!

***

ನಟನೆ ನನ್ನ ಡ್ಯೂಟಿ

ರಾಧಿಕಾ ಚಿತ್ರರಂಗಕ್ಕೆ ಬರದೇ ೬ ವರ್ಷವಾಗಿತ್ತು. ಲಕ್ಕಿ ಚಿತ್ರದ ನಿರ್ಮಾಣದಲ್ಲಿ ಓಡಾಡುತ್ತಿದ್ದಾಗ ನೋಡಿದವರೆಲ್ಲರೂ ಆಕೆ ತನ್ನ ಸೌಂದರ್ಯ ಕಾಪಾಡಿಕೊಂಡು ಬಂದಿದ್ದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದರು. ನೀವ್ಯಾವಾಗ ನಟಿಸ್ತೀರಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದರು. ಮರೆಗೆ ಸರಿದದ್ದು ಸುಮ್ಮನೆ, ಬೆಳ್ಳಿತೆರೆಯೇ ನಮ್ಮನೆ ಅಂತ ಈಗ ವಾಪಸ್ಸಾಗಿದ್ದಾರೆ. “ಸ್ವೀಟಿ” ಅನ್ನುವ ಚಿತ್ರದಲ್ಲಿನ ಬ್ಯೂಟಿಯಾಗಿ ತಮ್ಮ ಡ್ಯೂಟಿ ಒಪ್ಪಿಕೊಂಡಿದ್ದಾರೆ.

ಮರೆಯಾಗಿ ರಾಧಿಕಾ ಮಾಡಿದ ಅಲ್ಲೋಲಕಲ್ಲೋಲ ಎಲ್ಲರಿಗೂ ಗೊತ್ತಿರುವ ವಿಷಯ. ಪ್ರೇಕ್ಷಕ ಎಲ್ಲವ ಮರೆತು ಬರೀ ನಟನೆ, ಚಿತ್ರ ಮಾತ್ರ ಗಮನಿಸುತ್ತಾನಾ ಅಂತ ಕಾದು ನೋಡಬೇಕು

***

ಹಂಸಲೇಖಾ, ನೀವೂನಾ!

ಯೂಟ್ಯೂಬಿನಲ್ಲಿ ಮದರ್ ರಷ್ಯಾ, ಐರನ್ ಮೈಡನ್ ಅಂತ ಟೈಪ್ ಮಾಡಿ ಸರ್ಚ್ ಕೊಟ್ಟರೆ ಒಂದು ಹಾಡು ಸಿಗುತ್ತದೆ. ಅದು ಒಂದು ರಷ್ಯಾ ದೇಶದ ಗೀತೆ. ಸುಮ್ಮನೆ ಕೇಳಿ ನೋಡಿದಾಗ, ಈ ಹಾಡು ಎಲ್ಲೋ ಕೇಳಿದ್ದೇನಲ್ಲಾ ಅಂತನ್ನಿಸುತ್ತದೆ. ನಮ್ಮ ಮೆದುಳಪದರವನ್ನು ಇನ್ನೂ ಒಂಚೂರು ಕೆದಕಿದಾಗ “ಪುಟ್ನಂಜ” ಸಿನೆಮಾದ ಹಾಡು ನೆನಪಾಗುತ್ತದೆ. ಅದರಲ್ಲಿ, ರವಿಚಂದ್ರನ್ ನಾಯಕಿ ಮೀನಾಗೆ “ದಸರಾ ಬೊಂಬೆ ನಿನ್ನನು ನೋಡಲು ನಮ್ಮೂರಿಂದ ಬಂದೆ ಕಣೇ” ಅಂತ ರೇಗಿಸುವ ಹಾಡೊಂದಿದೆ. ಆಗ ಒಂದು ಮಟ್ಟಕ್ಕೆ ಜನರಿಗೆ ಇಷ್ಟವಾಗಿದ್ದ ಹಾಡದು.
ಕನ್ನಡದ ಬಹುತೇಕ ಸಂಗೀತ ನಿರ್ದೇಶಕರು ಕಾಪಿ ಮಾಡುತ್ತಾರೆ, ಅದು ಗೊತ್ತಿರುವಂಥ ವಿಷಯವೇ. ಸಾಧು ಕೋಕಿಲ ರಂಥವರು ಯಾರಿಗೂ ಗೊತ್ತಾಗದ ಹಾಗೆ ಹೇಗೆ ಕದಿಯಲಿ ಅಂತಲೇ ರಿಸರ್ಚ್ ಮಾಡುತ್ತಾರೆ. ಗುರುಕಿರಣ್ ರಂಥವರು ಹೊಸ ಹಿಂದಿ ಗೀತೆಗಳಿಂದ ರಾಜಾರೋಷವಾಗಿ ಎತ್ತಿಕೊಳ್ಳುತ್ತಾರೆ. ಹರಿಕೃಷ್ಣ, ಇಂಗ್ಲೀಷಿನಿಂದ ಹೇಗಿದೆ ಹಾಗೆಯೇ “ಸ್ಪೂರ್ತಿ”ಗೊಳ್ಳುತ್ತಾರೆ.
ಆದರೆ ಹಂಸಲೇಖ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಬಹಳ ಗೌರವವಿದೆ. ರವಿಚಂದ್ರನ್ ರ ಎಲ್ಲಾ ರೀಮೇಕ್ ಚಿತ್ರಗಳಿಗೆ ಸಂಗೀತ ಕೊಡುತ್ತಾ, ಬೇರೆ ಭಾಷೆಯ ಹಾಡಿನ ರಾಗವನ್ನೇ ಬಳಸಿ ಅಂತ ನಿರ್ಮಾಪಕರುಗಳೇ ತಾಕೀತು ಮಾಡದರೂ ಒಪ್ಪದೇ, ಚಿತ್ರ ರೀಮೇಕ್ ಆದರೂ ಹಾಡು ಇಲ್ಲಿಯವೇ ಆಗಿರಬೇಕು ಅಂತ ಒರಿಜಿನಲ್ಲುಗಳನ್ನು ಕೊಟ್ಟವರು. ದೇಸೀಯತೆ, ಜಾನಪದ ಎಲ್ಲವನ್ನೂ ಮನದಲ್ಲಿ ಕರಗತ ಮಾಡಿಕೊಂಡವರು. ಅವರೂ ಹಾಡುಕೊಡಲು “ರಿಸರ್ಚ್” ಮಾಡಿರುವುದು ನಂಬಲಾಗದ್ದು!

ಆಗ ಈ ಯೂಟ್ಯೂಬ್ ಗಳು, ಗೂಗಲ್ ಗಳೂ ಇದ್ದಿರಲಿಲ್ಲ. ಈಗ ಹಿಂದೆ ಕದ್ದಿದ್ದೂ ತಿಳಿಯದೇ ಹೋಗುವುದಿಲ್ಲ.

ತಮ್ಮ ಹಾಡುಗಳಿಂದ ನಮ್ಮ ಬಾಲ್ಯವನ್ನು ಬೆಳಗಿದ್ದ ಹಂಸಲೇಖಾ ರವರೂ ಹೀಗೆ ಮಾಡುತ್ತಾರೆಂದರೆ, ಚಿತ್ರಗೀತೆ ರಸಿಕರಿಗೆ ನಂಬಲಾಗದ ಸುದ್ಧಿ, ನುಂಗಲಾರದ ತುತ್ತು.

***

ಬರದ ನಾಯಕ

“ಈಗ” ಸುದ್ಧಿಯಾಗಿದ್ದೇ ತಡ, ಅಭಿಮಾನಿಗಳೆಲ್ಲರೂ ಮುಂದಿನದು ಯಾವಾಗ ಅಂತ ಪ್ರಶ್ನಿಸತೊಡಗಿದ್ದಾರೆ ಸುದೀಪ್ ರನ್ನು. “ಬಚ್ಚನ್” ಚಿತ್ರ ಒಂದು ಹಂತಕ್ಕೆ ಮುಗಿದಿದೆ. ಶಶಾಂಕ್ ನಿರ್ದೇಶಕರಾಗಿರುವ ಆ ಚಿತ್ರಕ್ಕೆ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ನಿರೀಕ್ಷೆದೆ. ತಮ್ಮ ತಮ್ಮನಂತಹ ಶಿಷ್ಯ, ಚಿರಂಜೀವಿ ಸರ್ಜಾ ರನ್ನು ಚಿತ್ರರಂಗದಲ್ಲಿ ನೆಲೆಯೂರಲು ಸಹಾಯ ಮಾಡಲು ಒಪ್ಪಿಕೊಂಡಿರುವ ವರದ ನಾಯಕ, ಹೊರಬರಲು ಮಾಡುತ್ತಿರುವ ಸಾಹಸ ದೇವರಿಗೇ ಪ್ರೀತಿ. ತೆಲುಗಿನ “ಲಕ್ಷ್ಯಂ” ಚಿತ್ರದ ನಕಲಾಗಿರುವ ಈ ಚಿತ್ರದ ಬಗ್ಗೆ ಸುದೀಪ್ ಇದ್ದಾರೆ ಅನ್ನುವುದನು ಬಿಟ್ಟರೆ ಅಂಥ ನಿರೀಕ್ಷೆಗಳಿಲ್ಲ.

ಗಾಂಧಿನಗರಿಯ ಗಲ್ಲಿಗಳಲ್ಲಿ, ವರದ ನಾಯಕನನ್ನು “ಬರದ ನಾಯಕ” ಅಂತ ಗೇಲಿ ಮಾಡುತಿರುವುದು ಸುಳ್ಳಿರಲಿಕ್ಕಿಲ್ಲ!

***

ಪ್ರೇಮ್ ಎಲ್ಲಾ ಅವಮಾನಗಳ ಮೆಟ್ಟಿ ನಿಲ್ಲಲಿ

ನಿರ್ದೇಶಕ ಪ್ರೇಮ್ ರ ಅಡ್ಡ ಇನ್ನೇನು ತೆರೆಗೆ ಬರಲಿದೆ. ಎಂದಿನಂತೆ ಅವರ ಸಿನೆಮಾ ವಿವಾದಗಳಿಂದ ಮುಕ್ತವಾಗಿಲ್ಲ. “ಜೋಗಯ್ಯ” ಪ್ರೇಮ್ ಪಾಲಿಗೆ ಕಹಿನೆನಪು. ಸ್ವತಃ ಶಿವರಾಜ್ ಕುಮಾರ್ ಅಭಿಮಾನಿಗಳಿಂದಲೇ ನಿರಾಕರಿಸಲ್ಪಟ್ಟ ಸಿನೆಮಾ. ತ್ರೀಡಿ ವಿಚಾರ ಎಲ್ಲರಿಂದ ಗೇಲಿಗೊಳಗಾತು. “ಮಠ” ಗುರುಪ್ರಸಾದ್ ರಂಥವರು ವಾಹಿನಿಯ ಸಂದರ್ಶನವೊಂದರಲ್ಲೇ ಪ್ರೇಮ್ ರನ್ನು ಹೀಗಳೆದರು. ಗುರುಪ್ರಸಾದ್ ರ “ಡೈರೆಕ್ಟರ್ಸ್ ಸ್ಪೆಷಲ್” ಚಿತ್ರದ ಜಾಹೀರಾತನ್ನೂ ಪ್ರೇಮ್ ಅವಹೇಳನಕ್ಕೆ ಬಳಸಿಕೊಂಡರು.

ಇಂತಿಪ್ಪ ಪ್ರೇಮ್, ಮತ್ತೆ ಕೊಡವಿ ನಿಂತಿದ್ದಾರೆ. ತಮಿಳಿನ ಅದ್ಭುತ ಚಿತ್ರ “ಸುಬ್ರಹ್ಮಣ್ಯಪುರಂ” ದ ರಿಮೇಕ್ ಆದ “ಪ್ರೇಮ್ ಅಡ್ಡ” ಮೂಲಕ ಮರಳಿ ಬಂದಿದಾರೆ. ಕಣ್ಣಲ್ಲಿ ಅದೇ ಗೆಲುವಿಗಾಗಿ ತೀವ್ರ ಹಸಿವು. ಸಿನೆಮಾ ಬಿಟ್ಟರೆ ಮತ್ತೇನೂ ಗೊತ್ತಿಲ್ಲವೆಂಬ ಪ್ಯಾಷನ್.

ಪ್ರೇಮ್ ಅಡ್ಡ ಗೆಲ್ಲಲಿ. ಸೋತ ಪಾಠ ಹೆಚ್ಚಾಯ್ತು. ಗೆಲುವಿನ ಟಚ್ ಸಿಗಲಿ.

ಅಪ್ಪನ ಬೈಗುಳ ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಕಾರಣ ಚಿಕ್ಕದು, ಅಕ್ಕನಿಂದ ಪತ್ರ ಬಂದಿತ್ತು ಅಕ್ಕನೆಂದರೆ ನನ್ನ ಪಾಲಿಗಂತೂ ದೊಡ್ಡ ಧೈರ್ಯಸ್ಥೆ! ಅಷ್ಟುವರ್ಷ ಪ್ರೀತಿಯಿಂದ ಸಾಕಿದ ಅಪ್ಪನನ್ನು ಧಿಕ್ಕರಿಸಿ ಯಾವುದೋ ಹುಡುಗನ ಪ್ರೀತಿಯ ಮಾಯಾಮೃಗಕ್ಕೆ ಆಸೆಪಟ್ಟು, ಕಟ್ಟು ಪಾಡಿನ ಲಕ್ಷಣ ರೇಖೆಯನ್ನು ದಾಟಿದವಳು. ಸದಾ ಮುಗುದೆಯಂತೆ ಮಾಡುತ್ತಿದ್ದ ಅಕ್ಕನಿಗೆ ಅಂತಹ ಮಾನಸಿಕ ಶಕ್ತಿಯನ್ನು ನೀಡಿದ ಮಹಾನ್ ಶಕ್ತಿ ಪ್ರೇಮವೆಂದು ಅಚ್ಚರಿಪಟ್ಟಿದ್ದೆ!

ಅಪ್ಪನ ಕೋಪಕ್ಕೆ ತಲೆಕೆಡಿಸಿಕೊಳ್ಳದೆ ’ಆದದ್ದು ಆಗಿ ಹೋಯಿತು, ಇನ್ನಾದರು ಒಟ್ಟಿಗೆ ಇರೋಣ….’ ಎಂಬ ಸಂಧಾನ ಪತ್ರ ಆಗಾಗ್ಗೆ ಕಳುಹಿಸುತ್ತಲೇ ಇರುತ್ತಾಳೆ. ಈ ಪತ್ರಗಳ ಬಿಸಿಗೆ ಅಪ್ಪನ ಕೋಪದ ಮಂಜುಗಡ್ಡೆ ಇನ್ನು ಕರಗಲೇ ಇಲ್ಲ. ಮತ್ತೆ ಇನ್ನೊಂದು ಪತ್ರ ಹಾಕಿದ್ದಳು.

ಅವಳಿಗಾಗಲೇ ಈ ಬೈಗುಳ. ನನಗೆ ಯಾಕೋ ಕಸಿವಿಸಿ, ಅವರು ಬೈದ ಮಾತುಗಳು ನನಗೂ ತಾಗುತ್ತಿದ್ದವು. ಪ್ರೇಮವೆಂದೊಡನೆ ಎಲ್ಲರ ಮನೆಗಳಲ್ಲಿಯೂ ತಂದೆ ತಾಯಿಗಳ ಮಾಮೂಲಿ ಮಾತುಗಳಿರಬಹುದು ಆದರೆ ನಿಜವಾದ ಪ್ರೀತಿಯಲ್ಲಿ ತೋಯ್ದಿರುವ ನನ್ನಂತವಳಿಗೆ ಇದು ಚುಚ್ಚುವ ಈಟಿಯಂತದ್ದು. ಅಸಲು ದೊಡ್ಡವರಿಗೆ ಪ್ರೀತಿಯ ಮೇಲಿಷ್ಟು ದ್ವೇಷ ಯಾಕೆ ಅಂತ ಅರ್ಥವಾಗುವುದಿಲ್ಲ. ಹರೆಯದ ವಯಸ್ಸಿನಲ್ಲಿ ಅವರೂ ಪ್ರೇಮಿಸಿರಲಿಲ್ಲವೇ? ಪ್ರೇಮದ ಗಾಢತೆ, ಅದರ ಸವಿಸ್ಪರ್ಶ ಅವರೂ ಅನುಭವಿಸಿರಲಿಲ್ಲವೇ? ಆದರೂ ಇದನ್ನೆಲ್ಲ ಧೈರ್ಯವಾಗಿ ನಿರ್ಭಯತೆಯಿಂದ ತಂದೆಯೆದುರು ಹೇಳುವಂತಹ ಅಕ್ಕನ ಧೈರ್ಯ ಧಿಮಾಕು ನನ್ನ ಬಳಿ ಇಲ್ಲ. ಆ ಭಯ ನಿಜಕ್ಕೂ ಧೈರ್ಯವಿಲ್ಲದೆಯಷ್ಟೇ ಅಲ್ಲ, ಇಷ್ಟು ದಿನ ತಂದೆ ತೋರಿದ ಪ್ರೀತಿಯೆ ಅಂತಹ ಮಾತಾಡದಂತೆ ಕಟ್ಟಿಹಾಕಿರುವುದು.

ಹೌದು…. ತಂದೆಗೆ ನನ್ನ ಮೇಲೆ ಅಗಾಧ ಪ್ರೀತಿ. ಅಕ್ಕ ಹೋದ ಮೇಲಂತೂ ಅವರಿಗೆ ನನ್ನ ಮೇಲೆ ಪ್ರೀತಿ ಇಮ್ಮಡಿಯಾಗಿದೆ. ಯಾವ ವಿಷಯಕ್ಕೂ ನನ್ನ ನಿರ್ಧಾರಕ್ಕೆ ಅಡ್ಡಿ ಬರುವವರಲ್ಲ ಅಲ್ಲದೇ ಜಬ್ದಾರಿಯಿಂದ ಬೆಳೆಸಿದ್ದರು. ಆದರೆ ಮದುವೆ ವಿಷಯಕ್ಕೆ ಬಂದರೆ
ಮಾತ್ರ ನನಗೆ ನಿರ್ಣಯದ ಸ್ವಾತಂತ್ರ್ಯ ನೀಡುವುದು ಅನುಮಾನವೇ! ಅದಕ್ಕೆ ಕಾರಣವನ್ನೂ ಆಗಾಗ್ಗೆ ಹೇಳುತ್ತಿರುತ್ತಾರೆ. ‘ಹರೆಯಕ್ಕೆ ಬಂದವರ ಕಣ್ಣು ಕುರುಡಂತೆ’. ಆದರೆ ನನಗೆ ಈ ಅಭಿಪ್ರಾಯದ ಬಗ್ಗೆ ಕೊಂಚವೂ ನಂಬಿಕೆ, ಒಪ್ಪಿಗೆಯಿಲ್ಲ.

ಪಕ್ಕದಲ್ಲೇ ಬಿದ್ದಿದ್ದ ಎಕನಾಮಿಕ್ಸ್ ಪುಸ್ತಕದ ಮಧ್ಯಭಾಗದಲ್ಲಿ ಬಚ್ಚಿಟ್ಟಿದ್ದ ಅವನ ಫೋಟೊ ಕೈಗೆತ್ತಿಕೊಂಡೆ. ಅವನ ತುಟಿಯಂಚಿನ ಮುಗ್ಧ ನಗು ಸೂಜಿಗಲ್ಲಂತೆ ಸೆಳೆಯುತ್ತಿತ್ತು. ಕಣ್ಣ ಹೊಳಪು, ಆಕರ್ಷಣೆಗೆ ಮನ ತಲೆಬಾಗಿತ್ತು. ನಿಜವಾಗಿಯೂ ಹೇಳೆಬೇಕೆಂದರೆ ಆತನ ಸೌಂದರ್ಯವನ್ನು ಇಷ್ಟಪಟ್ಟು ಪ್ರೇಮಿಸಿದ್ದಲ್ಲ. ಸೌಂದರ್ಯಕ್ಕೆ ಮೀರಿದ ರಹಸ್ಯವೇನೋ ಆತನಲ್ಲಿದೆ. ಅದು ಆತನ ನಡೆ, ಮಾತು, ನಗು, ದಿರಿಸು ಏನೂ ಆಗಿರಬಹುದು. ಒಟ್ಟಿನಲ್ಲಿ ಆತನೆಂದರೆ ನಂಗಿಷ್ಟ.

ಆದರೆ ಇವತ್ತಿಗೂ ಚಿಕ್ಕ ಅನುಮಾನದ ಮೊಳಕೆ ಎದೆಯ ಭೂಮಿಯಲ್ಲಿ ಇದ್ದೇ ಇದೆ. ಅದೇನೆಂದರೆ, ಆತನೊಳಗೆ ನನ್ನ ಬಗ್ಗೆ ಪ್ರೇಮದ ಭಾವನೆ ಇದೆಯಾ ಎಂದು. ಯಾಕೆಂದರೆ ಯಾವತ್ತೂ ಅದನ್ನು ಅವನ ಬಳಿ ಕೇಳಿಲ್ಲ. ನನ್ನ ಇಂಟ್ರಾವರ್ಟ್ ಮನಸತ್ವಕ್ಕೆ ಅದು ಸಾಧ್ಯವಾಗುತ್ತದಾ ಇಲ್ಲವಾ ಎಂಬ ಭಯ ನನ್ನಲ್ಲಿದೆ. ಅವನು ಮೊದಲು ಭೇಟಿಯಾದಾಗಿನಿಂದ ಇಲ್ಲಿಯವರೆಗೂ ಒಮ್ಮೆ ಅದೂ ಕಾಲೇಜ್ ಡೇ ದಿನದ ಫೋಟೊ ಆಲ್ಬಮ್‌ನಿಂದ ಆತನ ಫೋಟೊ ಕದ್ದಿದ್ದನ್ನು ಬಿಟ್ಟರೆ, ಪ್ರೇಮ ನಿವೇದನೆಯ ಪ್ರಯತ್ನವಾಗಲೀ, ಲೆಟರ್ ಮೂಲಕ ಹೇಳುವ ಧೈರ್ಯವಂತ ನಿರ್ಧಾರವಾಗಲೀ ಮಾಡಿದ ನೆನಪಿಲ್ಲ. ಆದರೆ ಆತ ನನ್ನೆಡೆಗೆ ನೋಡುವ ನೋಟದಲ್ಲಿನ ಚಿಲುಮೆ, ನೀಡುವ ಗೌರವ, ಯಾವತ್ತೂ ನನ್ನ ಹೃದಯದಲ್ಲಿ ‘ಅವನೂ ಪ್ರೀತಿಸುತ್ತಿದ್ದಾನೆ’ ಎಂಬ ಮಾತು ಮಾರ್ದವಗೊಳ್ಳುವಂತೆ ಮಾಡುತ್ತಿರುತ್ತದೆ.

ಕ್ಲಾಸಿನಲ್ಲಿ ಕೆಲವೊಮ್ಮೆ ಆತನನ್ನು ಗಮನಿಸುತ್ತಿರುತ್ತೇನೆ. ಯಾರ ಬಳಿಯೂ ಹೆಚ್ಚು ಮಾತಿಲ್ಲ. ಅವನಾಯಿತು. ಓದಾಯಿತು ಎಂಬಂತಿರುತ್ತಾನೆ. ನನ್ನಂತೆಯೇ ಶುದ್ಧ ಇಂಟ್ರಾವರ್ಟ್ ಇರಬೇಕು. ಅವನೊಳಗಿರುವ ನನ್ನ ಬಗೆಗಿನ ಪ್ರೇಮವನ್ನು ತೋಡಿಕೊಳ್ಳಲು ಅದೇ ಅಡ್ಡಿ ಬರುತ್ತದೆ ಅಂದುಕೊಂಡು ವಿಲಪಿಸುವ ಹೃದಯಕ್ಕೆ ಸಮಾಧಾನ ಹೇಳುತ್ತಿರುತ್ತದೆ.

ಅವನನ್ನು ಭೇಟಿ ಮಾಡಿದ ಕ್ಷಣಗಳೆಲ್ಲ ಅವಿಸ್ಮರಣೀಯ. ನನ್ನೆಡೆಗೆ ಆತ ನೋಡಿದ ಚಿಕ್ಕ ನೋಟವನ್ನೂ ಕೂಡ ಮನಸ್ಸು ರೆಕಾರ್ಡ್ ಮಾಡಿಟ್ಟುಕೊಂಡಿರುತ್ತದೆ. ಅದನ್ನು ಮನಸ್ಸು ಮೆಲುಕು ಹಾಕಿದಾಗಲೆಲ್ಲ ಹೃದಯ ನವಿಲುಗರಿಬಿಚ್ಚಿ ಕುಣಿದಾಡುತ್ತದೆ. ಅಬ್ಬ! ಪ್ರೇಮವೇ, ನಿನ್ನ ಒಂದು ಚಿಕ್ಕಲಹರಿ ಇಷ್ಟು ಗಾಢವಾಗಿ ಮನ ತಟ್ಟುತ್ತಾ ಎಂದು ಚಿಕ್ಕ ಮಗುವಿನಂತೆ ಅಚ್ಚರಿ ಪಡುತ್ತೇನೆ! ಅಂತಹ ಅನುಭವ ಪಡೆಯದ ಜೀವಗಳನ್ನು ನೋಡಿ ಗೆಲುವಿನ ನಗೆ ಮೂಡುತ್ತದೆ ನನ್ನೊಳಗೆ.

ಸದ್ಯಕ್ಕೆ ಅವನ ಸ್ನಿಗ್ಧ ನಗುವಿನ ಚಿಕ್ಕ ಫೋಟೋನೇ ನನ್ನ ಆಸ್ತಿ. ಅವನ ನಗುವಿನೊಳಗೆ ಮುಳುಗಿ ಒದ್ದೆ ತಂಪಿನ ಸುಲ್ಹ ಅನುಭವಿಸುತ್ತೇನೆ. ಖುಷಿಯಾದಾಗ ದುಃಖವಾದಾಗ ಏನೂ ಭಾವನೆ ಮೂಡದಿರುವಾಗ – ಯಾವಾಗಲೂ ಅವನೊಳಗೇ ಇರುವಾಸೆ ಮನಸ ಬಸಿರಿಗೆ. ಈ ಆಸೆಯ ಬಸಿರಿಗೆ ಹೆರಿಗೆ ಯಾವಾಗ?

ಸ್ವಲ್ಪ ದಿನ ಕಳೆಯಿತು. ಒಮ್ಮೆ ತಂದೆ ಮನೆಗೆ ಬರುವಾಗ ಎಂದಿನಂತಲ್ಲದೆ ಬಹಳ ಉತ್ಸಾಹದಿಂದ ಬಂದರು. ಅವರು ತಂದ ಸುದ್ದಿಗೆ ನನ್ನ ಮನಕ್ಕೆ ಬುದ್ಧಿ ಭ್ರಮಣೆಯಾದಂತಾಯಿತು. ನನ್ನ ಮದುವೆಗೆ ಯಾವುದೋ ಹುಡುಗನನ್ನು ಹುಡುಕಿದ್ದು ನನ್ನ ನೋಡಲು ಒಂದೆರಡು ದಿನಗಳಲ್ಲಿ ಬರುತ್ತಾನಂತೆ. ಒಂದೇ ಉಸಿರಿಗೆ ರೂಮಿಗೆ ಓಡಿದೆ. ಅವರು ನಾಚಿಕೆ ಅಂದುಕೊಂಡರು. ಬಾಗಿಲು ಹಾಕಿಕೊಂಡು ಹಾಸಿಗೆಯಲ್ಲಿ ಬಿದ್ದು ಮನಸಾರೆ ಅತ್ತೆ. ಮನದ ರೋದನ ಮುಸಲ ಧಾರೆಯಾಗಿ ದಿಂಬನ್ನೆಲ್ಲ ಒದ್ದೆಯಾಗಿಸಿತು. ಮೌನ ಎಷ್ಟು ಅಸಹನೀಯ! ಪ್ರೀತಿ ಅವನಲ್ಲೂ ಇದೆ. ಆದರೆ ಅವರ ಮಧ್ಯೆ ಹಾಳು ಭಯವಿದೆಯಲ್ಲ! ಭಯದ ಮಗುವಾದ ಮೌನದ ಹೊರೆಯಿದೆಯಲ್ಲ ಅದನ್ನು ಸರಿಸುವವರು ಯಾರು? ಅವನಾ..? ನಾನಾ..?

ಗಂಡಸರಿಗೇನಾಗಬೇಕು? ಮರೆತೂ ಸುಖವಾಗಿರಬಲ್ಲರು. ಆದರೆ ಹೆಂಗಸಿನ ಪ್ರಥಮ ಪ್ರೇಮವಿದೆಯಲ್ಲ, ಅಂಟಿಕೊಂಡರೆ ಬಿಡದು. ಬದುಕಿನುದ್ದಕ್ಕೂ ಹೃದಯದ ಹೊಟ್ಟೆಯಲ್ಲಿಟ್ಟುಕೊಂಡೇ ಬಾಳಬೇಕು. ಆ ಹಾಳು ಹಾದರ ಯಾರಿಗೆ ಬೇಕು?

ಇಷ್ಟಕ್ಕೂ ಒಂದು ವಿಷಯ ಮಾತ್ರ ಖಂಡಿತ. ಹೃದಯಕ್ಕೆ ಬೇರಾರೂ ಬೇಡ. ಅವನಿಗೇ ಮೀಸಲಾಗಿದೆ ಈ ಬದುಕು. ಬೇರೆ ಯಾರನ್ನೂ ಪ್ರೀತಿಸಲಾರೆ. ಬೇರಾರಿಗೂ ಒಲವಧಾರೆ ಎರೆಯಲಾರೆ.

ಆದರೆ ಇದನ್ನೆಲ್ಲ ತಂದೆಗೆ ಹೇಗೆ ಹೇಳಲಿ? ಹತ್ತೊಂಭತ್ತು ವರ್ಷ ಪೋಷಿಸಿದವರವರು. ತಿದ್ದಿ ತೀಡಿದವರು… ಹೇಗೆ ಎದುರಾಡಲಿ ಅಕ್ಕನಂತೆ.

ಸ್ವಲ್ಪ ಹೊತ್ತು ಕುಳಿತು ಆಲೋಚಿಸಿದೆ. ಇಬ್ಬರ ಪ್ರೀತಿ ನಡುವೆ ಮೌನ ಭಾರ, ಅಸಹನೀಯ. ಅವನ ಬಳಿಯೇ ಹೋಗಬೇಕು. ಭಯ, ಸಂಕೋಚ ಎಲ್ಲದಕ್ಕೂ ತಿಲಾಂಜಲಿ ಕೊಟ್ಟು ಬಿಡಬೇಕು. ನನ್ನೊಳಗಿನೊಲವು ತಿಳಿಸಿಬಿಡಬೇಕು. ನಾಳೆ ಹೇಳುವೆನೆಂದರೆ ಬಾಳೆ ಕೂಪದಲ್ಲಿ ಬಿದ್ದೀತು. ಇವತ್ತೇ ಏನಾದರಾಗಲೀ ಹೇಳಿ ಬಿಡಬೇಕೆಂದು ನಿರ್ಧರಿಸಿದೆ.

ಒಂದುವೇಳೆ ಆತ ಒಲ್ಲೆ ಎಂದರೆ? ದಡ ಕಾಣದ ಹಡಗಿನಂತಾದೀತು ಮನಸು. ಅಂತಹ ಪರಿಸ್ಥಿತಿ ಊಹಿಸಲೂ ನಿರಾಕರಿಸಿತು ಮನ.
……………….

ಪ್ರಿಯ ಸಖನಿಗೆ,
ಭರಿಸಲಾಗದಷ್ಟು ಹೊರೆಯಾಗಿದೆ ಈ ಪ್ರೀತಿ. ಹಂಚಿಕೊಳ್ಳದೇ ವಿಧಿಯಿಲ್ಲ ಎಂಬಂತಾಗಿದೆ. ಕಣ್ಣ ಕುಡಿಯಂಚಿನ ಪ್ರೇಮದಾಟ ಸಾಕು. ಹೃದಯದ ‘ನೀನೇ ಬೇಕೆಂಬ’ ಹಠ ಹೆಚ್ಚಾಗಿದೆ. ನಿನ್ನೊಳಗೂ ನನ್ನ ಬಗ್ಗೆ ಪ್ರೇಮವಿದೆಯಾ? ಇದೆಯಾದರೆ ಹಂಚಿಕೋ. ಇಲ್ಲವಾದರೆ ಈ ಪತ್ರ ಹರಿದು ಚೂರು ಮಾಡು.
ನಿನ್ನ
ಶರ್ಮಿಳ

ಹೀಗೆ ಬರೆದು ಮಡಚಿ ಪುಸ್ತಕದೊಳಗಿಟ್ಟುಕೊಂಡಳು. ಕಾಲೇಜು ಬಿಡುವ ಸಮಯಕ್ಕಾಗಿ ಕಾಯತೊಡಗಿದೆ. ಕ್ಲಾಸಿನಲ್ಲಿ ಅನ್ಯಮನಸ್ಕತೆ ಬದುಕು ಏನಾದೀತೋ ಎಂಬ ಭೀತಿ. ಆತನ ಉತ್ತರವೇನೋ ಎಂಬ ಆತಂಕ. ಏನಾದರಾಗಲಿ ಇಂದೇ ನಿರ್ಧಾರವಾಗಿ ಹೋಗುವುದೆಂಬ ನಿರುಮ್ಮಳತೆ ಮತ್ತೊಂದು ಕಡೆ.

ಸಂಜೆ ಕಾಲೇಜು ಬೀಡುವ ಸಮಯದಲ್ಲಿ ಆಗಸದ ತುಂಬ ಮೋಡ. ಸಣ್ಣ ಮಬ್ಬುಗತ್ತಲೆ. ಉಸಿರು ಬಿಗಿ ಹಿಡಿದು ಕಾಲೇಜು ಗೇಟ ಬಳಿ ನಿಂತೆ. ತುಂಬು ಜನಸಂದಣಿ ಮಧ್ಯೆ ಜಾಗ ಮಾಡಿಕೊಂಡು ಆತ ಬರುತ್ತಿದ್ದ. ಹತ್ತಿರ. ಇನ್ನೂ ಹತ್ತಿರ ಬಂದ. ಹತ್ತಿರ ಬಂದಷ್ಟೂ ಹೆಚ್ಚುವ ಭಯ, ನಡುಕ.

“ಒಂದ್ನಿಮಿಷ ನನ್ನ ಜೊತೆ ಬರ್ತೀರಾ?” ಕೇಳಿದೆ. ಆಶ್ಚರ್ಯಕರ ಮುಖಭಾವದೊಂದಿಗೆ ‘ಸರಿ’ ಎಂದನಾತ.

ಮೈದಾನದೆಡೆಗೆ ಏಕಾಂತವನ್ನರಸಿ ಹೋಗುತ್ತಿದ್ದರೆ ನನ್ನ ಹಿಂದೆಯೇ ಬರುತ್ತಿದ್ದ, ಚಿಕ್ಕದಾಗಿ ಊಟದೆಲೆಗೆ ನೀರು ಚಿಮುಕಿಸಿದಂತೆ ಹೊಯ್ಯುತ್ತಿತ್ತು ಮಳೆ.

ಮೈದಾನದ ಮೂಲೆಗೆ ಕರೆದೊಯ್ದು ನೀಡಿದ ಪತ್ರ, ಆತನ ಕೈಗಿಟ್ಟು ಆತನನ್ನು ಎದುರಿಸಲಾಗದೆ ಈ ಕಡೆ ಬಂದು ಬಿಟ್ಟೆ. ಮರದ ಕೆಳಗೆ ಮರೆಯಲ್ಲಿ ನಿಂತು ಆತನನ್ನು ಗಮನಿಸುತ್ತಿದ್ದೆ.

ಮಳೆ ಸಣ್ಣಗೆ ಬರುತ್ತಿದ್ದುದು ಹೆಚ್ಚುತ್ತಾ ಹೋಯಿತು. ಅಂತೆಯೇ ನನ್ನ ಆತಂಕವೂ! ಆತ ಓದುವುದ ಮುಗಿಸಿ ಕಣ್ಣು ಮುಚ್ಚಿ ನಿಂತಿದ್ದ. ಮೊಗದ ತುಂಬ ಮಳೆನೀರು. ಅಳುತ್ತಿರುವನಾ? ಗೊತ್ತಾಗಲಿಲ್ಲ.

ಸ್ವಲ್ಪಹೊತ್ತು ಕಾದೆ. ಬರಲಿಲ್ಲ. ತಿರುಗಿ ನೋಡಲೂ ಇಲ್ಲ. ಭಯವಾಯಿತು. ಆತನ ಬಳಿ ಓಡಿದೆ. ಆತನಿನ್ನೂ ತೊಯ್ಯುತ್ತಲೇ ಇದ್ದ; ಬಯಲ ಮಧ್ಯದ ಮರದಂತೆ. ಅವನ ಶರಟು ಹಿಡಿದೆ. “ಏನಾಯ್ತು” ಕೇಳಿದೆ. ನಿರ್ಭಾವುಕ ನೋಟ ನನ್ನತ್ತ ಎಸೆದ. “ಸಾರಿ ಶರ್ಮಿಳ ಶರ್ಮಿಳ ಇಷ್ಟು ದಿನ ನಿನ್ನನ್ನು ಕಾಡಿದ್ದಕ್ಕೆ ಪ್ರೀತಿ ನನ್ನಲ್ಲೂ ಇದೆ” ಅಂದ. ನನ್ನ ಮೇಲೆ ಬೀಳುತ್ತಿರುವುದು ನೀರಹನಿಯಲ್ಲ ಪನ್ನೀರ ಸುರಿಮಳೆ ಅನ್ನಿಸಿತು. ಆನಂದದಿಂದ ತಬ್ಬಿಕೊಂಡೆ ಮತ್ತೆ ಹೇಳಿದೆ, “ನಾನೇ ನಿನ್ನ ಬಳಿ ಬಂದು ಕೇಳಬೇಕಿತ್ತು. ಕ್ಷಮಿಸು ಇಷ್ಟು ದಿನ ಹೇಳದಿದುದಕ್ಕೆ ಕಾರಣ ನನಗಿದ್ದ ಭಯವೇ. ನಿನ್ನ ನಿರಾಕರಣೆಯ ಭಯ. ನೀನೇ ಒಪ್ಪಿಕೊಂಡ ಮೇಲೆ ಇನ್ನು ಯಾವ ಭಯವೂ ಇಲ್ಲ.”

“ಆದರೆ ನನ್ನ ತಂದೆ ನನಗೆ ಬೇರೆ ಹುಡುಗನನ್ನು ನೋಡುತ್ತಿದ್ದಾರೆ…” ಅಂದೆ.

“ಇವತ್ತೇ ಹೋಗಿ ಮಾತಾಡುತ್ತೇನೆ. ಪ್ರೀತಿ ಮಾಡಿದರೆ ಭಯ ಪಡಬಾರದು. ಇದೇ ನಾನು ಕಲಿತ ಪಾಠ.”

“ನನ್ನ ತಂದೆ ಒಪ್ಪದಿದ್ದರೆ…?”

“ಒಪ್ಪಿಸುವೆ ಎಂಬ ನಂಬಿಕೆ ನನಗಿದೆ.” ಅಂದ.

ಜಡಿ ಮಳೆಯಲ್ಲಿ ಇಬ್ಬರೂ ಒಟ್ಟಾಗಿ ಒದ್ದೆಯಾದೆವು. ಇನ್ನು ಯಾವ ಬೆದರು ಮಳೇಗೂ ಬಗ್ಗುವವಳಲ್ಲ ನಾನು, ಸಂಗಾತಿಯಾಗಿ ಅವನಿರುವ ತನಕ…