ಏಕಾಂತ
ನೆನಪಿನಾಳ
ಕ್ಕೆ
ಹಾಕಿ ಗಾಳ
ಹಳೆಯ ಮನದ ಗೀರೊಂದು
ಕೊಟ್ಟ ನೋವನ್ನು
ಮಧುರವಾಗಿ
ಹೀರುತ್ತಾ ಕೂರುವುದು.
******
ಕಾವ್ಯ
ಮೌನ, ರೇಷಿಮೆ ನಯ
ನೆನಪೋ ಸೂಜಿಮೊನೆ
ಘನ ಮನ
ಕಾದು ಕುಂತು
ನೇಯ್ದದ್ದು
ಕಾವ್ಯಕಸೂತಿ.
***
ಹನಿ
ಹಕ್ಕಿಯಂತೆ
ಹತ್ತಿಯಂತೆ ಹಾರಾಡಿ
ಬಾನಬಯಲಲಿ ತೇಲಾಡಿ
ಹುಡುಕಿ ಹುಡುಕಿ
ಅವಳ ನೆತ್ತಿಯ ಮೇಲುದುರಿ
ಜಾರುಬಂಡಿಯಾಡುವ
ಆಸೆ ಹೊತ್ತ
ಹನಿ
ಬಲು ಕಿಲಾಡಿ.
****
ಆಟ
ಕನಸಕೆರೆಗೆ
ಕಲ್ಲನೆಸೆದು
ನಿನಗೋ ಆಟವಾಡುವ ಲಹರಿ
ದಡದಮೂಲೆಯಲಿ
ಏಡಿಮನೆಮಾಡಿದ ಮನವಿರುವ
ನನಗೋ
ತೆರೆತೆರೆಯೂ ಸುನಾಮಿಯ ಪರಿ.
*****