Posts Tagged ‘ಕವಿತೆ’

 

ನಾ ಬರೆದಿದ್ದರಲ್ಲೇ ಅದ್ಭುತ ಕವಿತೆ

ಅಂದರೆ

 

ಅಂದು

ಹಿಂದೆಂದೋ ಆಗಿದ್ದ ಅನುಭವ

ಒಳಗೊಳಗೇ ಪಾಕಗೊಂಡು

ನೆನಪೊಂದು ಹಾಗೇಯೇ ಪರಿಮಳ

ದಂತೆ ನನ್ನ ಆಳ

ಇಳಿದು

ಪದರು ಪದರಾಗಿ

ಪದಗಳು

ಜಿನುಜಿನುಗುತ್ತ ಹಾಳೆಗಳ ತುಂಬಾ

ಚಲಿಸಿದವಲ್ಲಾ

poetry2

ಗೆಳೆಯ ಅದನ್ನೋದಿ

ಅವನ ಹಳೆಹುಡುಗಿ ನೆನಪಾಗಿ

ಕವಿತೆ ಥೇಟ್ ಅವಳ ನಗುವಂತಿದೆ

ಅಂತಲೇ ಜ್ಞಾನಪೀಠ ಇತ್ತನಲ್ಲ

 

ಮತ್ತು ಜನಗಳು ಓದಿದರೆ

ಮತ್ತು ಹೆಚ್ಚಿ

ಕವಿತೆಯ ಉದ್ದಗಲಕ್ಕೇ ತಮ್ಮ ಬದುಕನು ಚಾಚಿ

ವಿಸ್ತಾರವಾಗುವರಲ್ಲ

 

ಆ ಹಾಳೆ ಆ ಸಮಯ ಆ ನೆನಪು

ಆ ಸುವಾಸನೆ

ಅನುಭಾವದ ಆ ಘಳಿಗೆ

ಎಲ್ಲಾ ಮತ್ತೆ ಸಿಗದೇ ಇದ್ದಲ್ಲಿ

ಅಂತಾದ್ದೇ ಬಿಡಿ

ಅದನ್ನು ಬರೆಯಲೂ ಆಗದಂಥದ್ದು ಅಂದಿದ್ದೆನಲ್ಲಾ

poetry-prompts-nature

ಹಾಗೂ ಬರೆದು ಉನ್ಮತ್ತನಾಗಿ

ಅದರ ಗುಂಗಲೇ ನನ್ನ ನಾ ಕಳೆದುಹೋಗಿ

ಜತೆಯಲಿ ಆ ಹಾಳೆಯನೂ ಕಳೆದು

ಮರುದಿನ ನನ್ನಾಕೆ ಬಟ್ಟೆ ಒಣಗಿಸುವಾಗ

ಪ್ಯಾಂಟಿನಲಿ ಮುದ್ದುಮುದ್ದಾಗಿ ಮುದುರಾಗಿ

ಸಿಕ್ಕಿತ್ತಲ್ಲಾ

 

ಅದೇ ಕವಿತೆ!

 

****

 

(ಚಿತ್ರಕೃಪೆ : )

 

xml-haiku-28oct2005-w

ಅತೀ ದೊಡ್ಡ ಕವಿತೆ ಬರೆದು

ಸಾಕಾಗಿ ಎಲ್ಲಾ ಸಾಲು ಅಳಿಸಿದೆ

ಮೊದಲ ಮೂರು ಬಿಟ್ಟು.

 

 

***

ಚಿತ್ರದ ಕ್ರೆಡಿಟ್ಟು : ಇಲ್ಲಿಂದ

 

ನಿರ್ಮಲಳು ಹಾದಿಯಲಿ ಹೋಗುವಾಗ

ಜೊಲ್ಲುಸುರಿಸುವ ಗಂಡುಜೀವಿಗಳು

ಹುಟ್ಟಿಸುವ ವಾಕರಿಕೆ,

covertextsample01

ತನ್ನ ನಂಬಿರುವ ಜೀವಗಳು ಮನೆತುಂಬಾ

ಇರುವಾಗಲೂ ಶಂಕರನಿಗೆ ರಾಜೀನಾಮೆ ನೀಡಬೇಕಾದ

ಅನಿವಾರ್ಯತೆ ಹುಟ್ಟಿಸುವ ಕಂಪನ,

 

ಮನೆಮಾಡಲು ಸಾಲುಮರಗಳ ಕೊಂದು

ಮನೆಮುಂದೆ ಪುಟ್ಟ ಬೃಂದಾವನವ ಪ್ಲಾನು ಮಾಡಿ

ಪಾಪಶುದ್ಧಿಯಾದಂತೆ ಪರಿಭಾವಿಸುವ

ಇಂಜಿನೀಯರನ ಆತ್ಮವಂಚನೆಯು ಮೂಡಿಸುವ ರೇಜಿಗೆ,

 

ಪಾತ್ರಗಳ ಕನಸುಗಳು

ಬೆಳಕು ಏರುತ್ತಿದ್ದಂತೆ ಕರಗುವ ಖೇದ

ಮೂಡಿಸುವ ಬಾಧನೆ,

 

ಇನ್ನೂ ಲೆಕ್ಕವಿಲ್ಲದಷ್ಟು ಪರಿತಾಪನೆ,

ಗೊಂದಲ,

ತಾನೇ ಹುಟ್ಟಿಸಿದ ಹಾದಿಯಲಿ ಕಳೆದುಹೋಗುವ ಗುಂಗು,

ತಾನು ಹುಟ್ಟಿಸಿದ ಜೀವ ತನಗೇ ಧಿಕ್ಕರಿಸಿದಾಗ ಚುಚ್ಚುವ ಸೂಜಿ,

ಮಳೆಗಾಲದಲ್ಲೂ ಮಳೆ

ಹುಟ್ಟಿಸದ ಮೋಡ

ಗಳಾಗುವ ಸ್ತಬ್ಧ ಶಬ್ದಗಳೊಳಗೆ ಮುದುಡಿಕೊಳ್ಳುವ ಭಾವಗಳು,

 

ರೋಚಕತೆ ಸಲುವಾಗಿ ಪಾತ್ರಗಳ

ಸುಲಲಿತ ಬದುಕಿನ ಜೇನುಗೂಡಿಗೂ ಕಲ್ಲೆಸೆಯಬೇಕಾದ ಪಾಡು,

ಆ ತಪ್ಪಿಗೆ ಬರೆದವನ ಜೀವನಪೂರ್ತಿ ಬೆಂಬಿಡದ ಜೇನು ಮತ್ತು ಅದು ಚುಚ್ಚುತ್ತಲೇ ಇರುವ ನೋವು,

Gleeson Corrosive Littoral of Habit

ತನ್ನ ಜಾಲದೊಳಗೆ ತಾನೇ ಸಿಲುಕಿಕೊಳ್ಳುವ ಜೇಡ,

ತಾನೆಸೆದ ಬಲೆಗೆ ತಾನೇ ಕಾಲೆಡವಿ ಬೀಳ್ವ ಅಡವಿ ಬೇಡ,

 

ಅಬ್ಬಬ್ಬ!

 

ಇಂಥ ಪರಿಸ್ಥಿತಿಗಳು ಯಾವ ವೈರಿಗೂ ಬೇಡ,

 

ಸಂಪಾದಕರುಗಳೇ, ಓದುಗರೇ ದಯವಿಟ್ಟು ಮನ್ನಿಸಿ

ಇನ್ನು ಇಂಥ ಕವಿತೆಗಳನ್ನು ಬರೆದು ಹಾಯಾಗಿರುತ್ತೇನೆ

ವಿನಾ

ಕಥೆಗಳನ್ನು ಬರೆದು ನನ್ನ ನಾ ಸುಟ್ಟುಕೊಳ್ಳುವುದಿಲ್ಲ.

 

*****

 

(ಫೋಟೋಕೃಪೆ:http://elizaw.wordpress.com/2008/06/ ಮತ್ತು http://artblogbybob.blogspot.com/2008_11_01_archive.html )

ಕವಿತೆ ಬರೆಯೋಲ್ಲ ಇನ್ನು

ಎಂದು ನಿರ್ಧರಿಸಿದ ತಕ್ಷಣ

ಪದಗಳು ಗೋಗರೆಯುವವು

ಮುಕ್ತಿಕೊಡು ಅಂತ ಬೇಡುವವು

ಭಾವಗಳು ನಾಕು ದಿನದಿಂದ

ಉಪವಾಸ ಬಿದ್ದ ಖೈದಿಯಂತೆ

ಬಿಡುಗಡೆಯ ವಿನಂತಿ ಮಾಡುವವು

ಹಾಳೆಗಳು ಧೂಳು

ಹಿಡಿದು ಖಾಯಿಲೆ ಬೀಳುವವು

work.4412917.1.fp,375x360,black,offwhite,flat,l,ffffff

ಅಂತೆಲ್ಲಾ ಅಂದುಕೊಂಡಿದ್ದೆ

ಮೂರು ದಿನಗಳ ಕೋಮಾ ಬಳಿಕ

ಹಾಸಿಗೆಯಲಿ ಮುದುರಿ ಬಿದ್ದಿದ್ದ

ನನ್ನನ್ನು ಸುತ್ತಿವರೆದಿದ್ದ ಡಾಕ್ಟರು

ಬಂಧುಬಾಂಧವರು ಗೆಳೆಯರು

ಪೆನ್ನು ಪೇಪರು ಹಿಡಿದು

ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದರು

ದಯವಿಟ್ಟು ಒಂದು ಕವಿತೆ ಬರಿ

ಬರೆದರೆ ಮಾತ್ರ ನೀನು

ಉಳಿದುಕೊಳ್ಳುತ್ತೀಯಂತೆ.

(ಚಿತ್ರಕೃಪೆ : ರೆಡ್ ಬಬಲ್)