ಪಶ್ಚಾತ್ತಾಪವೊಂದು ಹೀಗೆ
ನನ್ನ ಬಿಡದೇ ಬೆಂಬತ್ತಿದುದರಿಂದ
ನಾನು ತಪ್ಪು ಮಾಡಿದ್ದೇ ಹೌದು
ಅಂತ ನಂಬಿಕೆ ಆಗುತ್ತಿದೆ
*******
ಆ ಸಂಜೆ ರೂಮಿಗೆ ಬಂದಾಗ
ಅಲ್ಲಿ ಕತ್ತಲು ಧಗಧಗನೆ
ಹೊತ್ತಿ ಉರಿಯುತಿತ್ತು
ಮೊಂಬತ್ತಿ ಹತ್ತಿಸಿ
ಎಲ್ಲಾ ನಂದಿಸಿದೆ.
*********
ಬದುಕಿನ ಈ ಘಟ್ಟದಲ್ಲಿ
ನಿಂತು ಹಿಂತಿರುಗಿ ನೋಡಿದರೆ
ಬೇಡ
ಬೇಕಾದ ಅದೆಷ್ಟೋ
ಕ್ಷಮೆಗಳ ಸಾಲವಿದೆ
*******
ಆಕೆ ನನ್ನ ಬಿಟ್ಟುಹೋದ ದಿನ
ಅವಳಮ್ಮ ಸಂಜೆ ತಿಂಡಿಗೆ
ಕಟ್ಲೇಟು ಮಾಡಿದ್ದರಂತೆ
ಆಕೆ ಅದರ
ಹೃದಯದಾಕಾರಕ್ಕೆ
ಬೆಚ್ಚಿಬಿದ್ದು ತಿನ್ನಲಿಲ್ಲ,
*******
ಭಾವಗಳ ಮೋಡ ಮನಸಿನಾಗಸ ತುಂಬಾ ಆವರಿಸಿದೆ….
ದೊರಕುತಿದೆ ಪ್ರೀತಿಯ ಜಡಿಮಳೆಯಾಗುವ ಮುನ್ಸೂಚನೆ..
ಕವಿತೆಗಳಾಗುವ ಪದಗಳು ಎದೆಯ ಬಾಗಿಲಲ್ಲೇ ತಡವರಿಸಿದೆ..
ಇದು ಯಾವ ವೈದ್ಯನಿಗೂ ಅರ್ಥವಾಗದ ಸುಮಧುರ ಯಾತನೆ!
****
ಇದು “ನೀಲಿ ಹೂವು” ಬ್ಲಾಗಿನ ನೂರೈವತ್ತನೇ ಪೋಸ್ಟು!
******