ಹೊಸದಾಗೊಂದಿಷ್ಟು ಹನಿಗವನಗಳು!

Posted: ಡಿಸೆಂಬರ್ 23, 2014 in ಕವಿತೆ, ಕವಿತೆ ತರಹ
~ ೧ ~
ಊಹೆಗಳನ್ನು ಅನುಭವವನ್ನಾಗಿ
ಮಾಡಿಕೊಳ್ಳಬಹುದಾಗಿದ್ದಿದ್ದರೆ
ಕಳೆಯಲಾಗದ ರಾತ್ರಿಗಳಿಗೋಸ್ಕರವೇ
ಒಂದಿಷ್ಟು ನೆನಪುಗಳನ್ನು
ಸೃಷ್ಟಿಸಿಕೊಳ್ಳಬಹುದಿತ್ತು.
ಇಂಚಿಂಚಾಗಿ ಸಾಯುವುದನು
ತಪ್ಪಿಸಿಕೊಳ್ಳಬಹುದಿತ್ತು.
~೨~
ಕವಿಯೇನಲ್ಲ ನಾನು, ಬರೆಸುವುದು
ನನ್ನ ಬೆರಳು
ಹಿಡಿದು ಹೃದಯ
ಭಗ್ನಗೊಳಿಸಿದವಳ ನೆರಳು
~೩~
ಗುಡುಗಿನ ಮೂಲಕ ಪಲ್ಲವಿ
ಚರಣಕೆ ಮಿಂಚೇ ಕಾರಣ
ಒಟ್ಟಾರೆ, ನೆಲಕೆ ಚಿಗುರುವ ಕನಸಿನ ಹಾಡ
ಕಲಿಸಿದ್ದು ಆಗಷ್ಟೇ ಹುಟ್ಟಿದ ಮೋಡ
~೪~
ಎತ್ತಲಿಂದೆತ್ತ ಹಾರೋ
ಚಿಟ್ಟೆ ಚಿತ್ತ ಚಂಚಲ
ಅನಿಸಿದರೂ ಒಳಗೊಳಗೆ
ಅದಕೆ ಸದಾ ಪರಿಮಳದ್ದೇ ಧ್ಯಾನ
~೫~
ರಾತ್ರಿಯ ಜೋಪಡಿಯಲಿ
ನಿದಿರೆಯ ಬೆಳಕಿನಲಿ
ಒಂದಿಷ್ಟು ಕನಸುಗಳನ್ನು ಹುಡು-
ಕಾಡುವ ನನ್ನ ಪ್ರಯತ್ನ
ಇನ್ನೂ ಜಾರಿಯಲ್ಲಿದೆ
368785-bigthumbnail
~೬~
ಹೂ ಕಿತ್ತ ಹುಡುಗಿಯ
ಕೈ ಬೆರಳಿನ ಘಮವನ್ನೂ
ಹೂವೆಂದೇ ಭ್ರಮಿಸಿ
ಚಿಟ್ಟೆ ರಮಿಸುತಿದೆ
~೭~
ಒಂದಿಷ್ಟು ನೆನಪುಗಳನು
ಎದೆಗೂಡಿನಲಿ
ಜೋಪಾನವಾಗಿರಿಸಿಕೊಂಡಿರುವೆ
ಎಂದಿಗಾದರೂ ಒಮ್ಮೆ ಅವು
ನನ್ನ ಕತ್ತಲಿನ ರಾತ್ರಿಗಳಿಗೆ
ಕನಸಾಗಿ ಬಂದು
ಬೆಳಕಾಗಿಸಬಹುದೆಂಬ ಆಸೆಯಿಂದ.
~೮~
ಇಂದು ತನ್ನ ಸೊಗಸಾದ ಕನಸೊಂದನ್ನು
ವಿವರಿಸಬೇಕೆಂಬ ಆಸೆಯಲ್ಲಿದ್ದ ಹೂವಿಗೆ
ಮಕರಂದ ಹೀರುವ ಧ್ಯಾನದಲ್ಲೇ ಇದ್ದ
ಭ್ರಮರವ ಕಂಡು
ಭ್ರಮನಿರಸನವಾದಂತಿದೆ
~೯~
ಸದಾ ನೀ ಹೊರಟು ಹೋಗುವ
ಮುನ್ನ ನೀಡುವ ಮುತ್ತು
ಮತ್ತೆ ನೀ ಸಿಗುವವರೆಗೆ
ನನ್ನೊಳಗನ್ನು ಸದಾ
ಜೀವಂತವಾಗಿರಿಸುವ ದೀಪ
images
~೧೦~
ರಸ್ತೆಯಂಚಲಿ ದಿನಾ ಸಿಗುವಳು
ಬುಟ್ಟಿಯ ತುಂಬಾ ನಕ್ಷತ್ರ ಮಾರುವ ಹುಡುಗಿ
ಈ ಬಾರಿ ಅವಳ ಬಳಿ
ನಕ್ಷತ್ರಗಳದೇ ಮಾಲೆ ಕೊಂಡುಕೊಳ್ಳಬೇಕು
ಊರ ಸೂರ್ಯ ಚಂದ್ರರಿಗೆಲ್ಲಾ ಇನ್ನೇನು
ಗ್ರಹಣ ಬಡಿವ ಸಮಯ
~೧೧~
ನಿನ್ನ ಈ ಮೌನ ಮೊನಚು
ಹೇಳಬೇಕಾದ್ದನ್ನು ಹೇಳುವುದರ ಜೊತೆಗೆ
ಹೇಳಲಾಗದ್ದನ್ನೂ ಸ್ಪಷ್ಟವಾಗಿ ಅರುಹುತ್ತದೆ
~೧೨~
ಕವಿತೆ ಓದಲು ಪುಟ ತೆರೆದೊಡೆ
ಪದ ಹಾರುವ ಹಕ್ಕಿ
ಮನದ ಬನದ ತುಂಬಾ
ಹಕ್ಕಿ ಬಡಿದ ರೆಕ್ಕೆ ಹೆಜ್ಜೆ.
~೧೩~
ತೇಲುತಿರುವ ತೆಪ್ಪಕ್ಕೆ
ದಡದ ಗುರಿ ತೋರುತಿಹುದು
ಚಂದ್ರನ ಲಾಂದ್ರ.
ಟಿಪ್ಪಣಿಗಳು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s