ನೀ ತೊರೆದ ಕ್ಷಣ..

Posted: ಫೆಬ್ರವರಿ 26, 2017 in ಕವಿತೆ, ಕವಿತೆ ತರಹ

ನಿಂತಿದ್ದೆ ಹಾಗೇ ನಾನು ಖಾಲಿಯಾಗಿ
ಅರ್ಥ ತೊರೆದ ಪದದಂತೆ
ನೆರಳು ತೊರೆದ ದೇಹದಂತೆ.
ಒಂದು ಕ್ಷಣದ ಹಿಂದೆ ಇರದಿದ್ದುದು
ರಪ್ಪಂಥ ಬಡಿದಿತ್ತು ವಿರಹ
ಬಿರುಗಾಳಿಯಂತೆ.

mussanje-maathu-10

ಒಮ್ಮೆ ನೀನು ತಿರುಗಿ ನನ್ನತ್ತ ನೋಡಿದ್ದರೆ ಕಾಣಸಿಗುತ್ತಿತ್ತು
ನನ್ನ ಒಡೆದ ಲೋಕ
ತುಂಬಿದ ಕಂಗಳು ಮತ್ತು ಅದರಲ್ಲಿ ಮುರಿದು ಬಿದ್ದ ಆಗಸ.
ಬದುಕು ತರಗಲೆಯೂ ಅಲುಗದ
ಸ್ತಬ್ಧ ಚಿತ್ರ.
ಮನಸ್ಸು ನಿಷ್ಫಲ ಮರ
ಕನಸಿನ ಹೂವರಳದ ಕೊಂಬೆ

ಯಾವುದೋ ಸಿಟ್ಟಿನ
ಋಷಿಯೊಬ್ಬ ಇವತ್ತಿನ ರಾತ್ರಿಗೆ ಎಂದೆಂದೂ
ಮುಗಿಯಬಾರದೆಂದು ನೀಡಿದ ಶಾಪವಿದೆ
ಬೆಳಕಿನ ತುದಿ ಸಿಗದ ಟನೆಲಿನ ಪಯಣವಿದು
ಕನಸು ಹುಟ್ಟದ ಬಂಜೆ ನಿದಿರೆ.

ವಿರಹವೆಂಬುದು ಸಾಯಿಸದ ವಿಷ
ಬದುಕಿಸದ ಅಮೃತ
ಕೊಲ್ಲದ ನೇಣು
ವಾಸಿ ಮಾಡದ ಮದ್ದು.

the-breakup_0

ಉಸಿರಾಡುವುದನ್ನು ಬದುಕುವುದು
ಅನ್ನಬಹುದಾದರೆ
ಬದುಕಿದ್ದೇನೆ ಇನ್ನೂ!

 

ಟಿಪ್ಪಣಿಗಳು
  1. Kishore Chadga ಹೇಳುತ್ತಾರೆ:

    bahala sogasaide !

  2. ರಂಜಿತ್ ಹೇಳುತ್ತಾರೆ:

    ಥ್ಯಾಂಕ್ಯೂ

ನಿಮ್ಮ ಟಿಪ್ಪಣಿ ಬರೆಯಿರಿ