
ಆ ಒಂದು ಕರೆ ಬರುತ್ತಿದ್ದಂತೆ ಮನೆಯಲ್ಲಿ ಪುಟ್ಟ ಸಡಗರವೊಂದು ಮೈತಳೆದಿತ್ತು.
ಅಮ್ಮ ಆಗಲೇ ಮೈದಾ ಕಲಸುತ್ತಿದ್ದಳು. ಹೊರಗೆ ರಂಗೋಲಿಗೆ ನೀರು ಚಿಮುಕಿಸುವಂತೆ ಸಣ್ಣ ಮಳೆ. ಅಣ್ಣನಿಗೆ ಅಮ್ಮ ಅದೇನೋ ತರಲು ಹೇಳುತ್ತಿದ್ದಂತೆ ಅವ ಸೈಕಲ್ ಹತ್ತಿ ಮೊಗದಲ್ಲಿ ಸಂಭ್ರಮ ಹೊತ್ತು ಹೊರಟ. ಗುಲಾಬ್ ಜಾಮೂನ್ ಮಿಕ್ಸ್ ತರಲು ಹೇಳಿದ್ದಿರಬಹುದಾ? ಆದರೆ ನನಗೆ ಅದಕ್ಕಿಂತಲೂ ಮಹತ್ವವಾದ್ದು ಅಡುಗೆಮನೆಯಲ್ಲಿ ಸಿದ್ಧವಾಗ್ತಿತ್ತು. ಗೋಳಿಬಜೆ. ಅಮ್ಮ ಅದ್ಭುತವಾಗಿ ಮಾಡುತ್ತಿದ್ದಳು. ಬಾಯಿ ಚಪ್ಪರಿಸಿಕೊಂಡು ತುಂಬು ಖುಶಿಯಿಂದ ತಿನ್ನುತ್ತಿದ್ದೆವು. ಒಂದು – ಎರಡು – ಮೂರು….. ಉಹುಂ… ತಿಂದಷ್ಟೂ ಹೊಟ್ಟೆ ಖಾಲಿಯಾದಂತನ್ನಿಸುತ್ತಿತ್ತು. ಒಂಚೂರು ಇಂಗು, ಮತ್ತು ಅವಳಿಗಷ್ಟೇ ಗೊತ್ತಿದ್ದ ಗುಟ್ಟಿನಷ್ಟು ಉಪ್ಪು ಹಾಕಿದರೆ ಗೋಳಿಬಜೆ ಗೆ ಪ್ರಚಂಡವಾದ ರುಚಿ ಬರುತ್ತಿತ್ತು. ಮಧ್ಯೆ ಮಧ್ಯೆ ತೆಂಗಿನಕಾಯಿಯ ಚೂರು ಬಾಯಿಗೆ ಸಿಕ್ಕರಂತೂ ಕಣ್ಣು ಮುಚ್ಚಿ ತಿನ್ನಬೇಕೆಂಬ ತನ್ಮಯತೆ ರೂಢಿಯಾಗುತ್ತೆ. ಒಂದು ಗೋಳಿಬಜೆ ಎಣ್ಣೆಯೊಳಗೆ ಬಿಡುತ್ತಿದ್ದಂತೆ ಅಂಗಳದ ಯಾವ ಮೂಲೆಯಲ್ಲಿದ್ದರೂ ನನ್ನನ್ನು ಆ ಪರಿಮಳ ಮಂತ್ರಮುಗ್ಧನಂತೆ ಮಾಡಿ ಅಡುಗೆಮನೆಗೆ ಕರೆತರುತ್ತಿತ್ತು.
ಇವತ್ತೂ ಅಂಥದ್ದೇ ಒಂದು ಸಂಭ್ರಮ ತಯಾರಾಗುವಂತಿತ್ತು.
ಇಷ್ಟಕ್ಕೂ ಬರುತ್ತಿದ್ದುದು ರಾಘಣ್ಣ. ಅವ ಹಾಗೆಯೇ. ಯಾವಾಗಲೋ ಒಮ್ಮೆ ಮನಸ್ಸು ಮಾಡಿದರೆ ಕೂಡಲೇ ಕೊಲ್ಲೂರು ದೇವರ ದರುಶನವಾಗಬೇಕು. ಒಂದು ಒಳ್ಳೆಯ ಕೆಲಸ ಶುರುವಾಗಬೇಕೆಂದರೆ ಸಾಕು, ಒಂದು ದರುಶನ. ಅದೇ ಇಲ್ಲಿಯವರೆಗೂ ಅವನ ಬದುಕನ್ನು ನಡೆಸಿಕೊಂಡು ಬಂದಿದೆಯೇನೋ ಎಂಬ ನಂಬಿಕೆ. ಹಾಗೆ ಕೊಲ್ಲೂರಿಗೆ ಹೋಗುವಾಗಲೆಲ್ಲ ದರ್ಶನ ಮುಗಿಸಿ ವಪಸ್ಸು ಬರುವಾಗ ಅಮ್ಮನ ಅಡುಗೆ ಉಣ್ಣದೇ ಹೋಗುವುದು ಎಂದರೆ ದರ್ಶನವೇ ಅಪೂರ್ಣವಾದಂತೆ ಭಾವಿಸುತ್ತಿದ್ದ. ಶಿರ್ವದಲ್ಲಿನ ತನ್ನ ಮನೆಗೆ ಹೋಗುವಾಗ ಅತ್ತಿಗೆ ಅವನಿಗಾಗಿ ಅಡುಗೆ ಮಾಡಿರುವುದಿಲ್ಲ. ನಂಗೊತ್ತು ಕುಂದಾಪುರದ ದೊಡ್ಡನ ಮನೆಯಲ್ಲಿ ಉಂಡಿರುತ್ತಿ ಎಂಬುದು ಅವಳಿಗೆ ಮನವರಿಕೆಯಾಗಿರುವ ಸತ್ಯ.
ಇವತ್ತು ರಾಘಣ್ಣನ ಕರೆ ಬಂದಿತ್ತು. ಕೊಲ್ಲೂರು ದೇವಸ್ಥಾನಕ್ಕೆ ಹೋಗುವವನಿದ್ದ.
********
ಅಮ್ಮ ಯಾವತ್ತೂ ಹೇಳುತ್ತಿರುತ್ತಾಳೆ. ಊಟ, ನಿದ್ದೆ ಬ್ರಹ್ಮಾಂಡವಾಗಿರಬೇಕು ಆಗಲೇ ಚೆನ್ನಾಗಿ ಕೆಲಸ ಮಾಡಬಲ್ಲೆವು, ಆಗಲೇ ಬದುಕು ಸುಲಲಿತವಾಗಿರುತ್ತೆ ಅಂತ. ಉದಾಹರಣೆ ನನ್ನಜ್ಜನ ಕತೆ ಶುರುಮಾಡುತ್ತಿದ್ದಳು. ನನ್ನದು ತಿಂದು ಮುಗಿದಿದ್ದರೆ ಕೇಳದೇ ಓಡಿಹೋಗುತ್ತಿದ್ದೆ. ತಿಂದಾಗಿರದಿದ್ದರೆ ಸುಮ್ಮನೆ ಕೇಳುತ್ತಿದ್ದೆ.
ಊಟದ ಬಗ್ಗೆ ಅಂಥದ್ದೊಂದು ಭಾವನೆಯಿದ್ದುದರಿಂದಲೆಯೋ ಏನೋ ನೆಂಟರು ಬಂದರೆ ನಮ್ಮ ಮನೆ ಅಡುಗೆಮನೆಯಲ್ಲಿ ವಿಶೇಷ ಕಳೆ. ಮಧ್ಯಾಹ್ನವಾದರೆ ಕರಿಬೇವು ಒಗ್ಗರಣೆ ಘಮ್ಮೆನ್ನುವ ಸಾರು, ಹಪ್ಪಳ ಸಂಡಿಗೆ, ಗೋಳಿಬಜೆ, ಕ್ಯಾರೆಟ್ಟಿನದೊಂದು ಪಲ್ಯ ಇದು ಅನ್ನ ಮಾಡುವಷ್ಟೇ ಮಾಮೂಲು. ಇದನ್ನು ಹೊರತುಪಡಿಸಿ ಮಾವಿನ ಸೀಸನ್ನಾದರೆ ಮಾವಿನ ರಸಾಯನ ಇಲ್ಲವಾದರೆ ಸೀಕರಣೆ ಇಂತದ್ದೇನಾದರೂ ಒಂದು.
ಅಂತೂ ಊಟ ತುಂಬಾ ಗ್ರ್ಯಾಂಡು.
ನೆಂಟರು ಬಂದಾಗ ಇಂಥ ಲಾಭದ ಸದುಪಯೋಗ ನನಗಾಗುತ್ತಿತ್ತು. ಅದಕ್ಕೇನೆ ಯಾವುದಾದರೂ ಫಂಕ್ಷನ್ನಿಗೆ ಹೋದಾಗ ಸಿಕ್ಕವರನ್ನೆಲ್ಲಾ ನಮ್ಮನೆಗೆ ಬನ್ನಿ ಅಂತ ಪ್ರೀತಿಯಿಂದ ಕರೆಯುತ್ತಿದ್ದೆ. ಅರೇ ಇಷ್ಟು ಚಿಕ್ಕ ವಯಸ್ಸಲ್ಲಿ ಒಳ್ಳೆ ಬುದ್ಧಿ ಕಲಿತುಬಿಟ್ಟಿದಾನೆ ಅಂತ ಅವರಿಗೆಲ್ಲಾ ಅನ್ನಿಸುತ್ತಿತ್ತು. ಅಪ್ಪ ಅಮ್ಮನೂ ಒಳಗೊಳಗೇ ಹೆಮ್ಮೆ ಪಡುತ್ತಿದ್ದರೂ ನನ್ನ ಲಾಭದ ಚಿಂತನೆಯ ಕುರುಹು ಕೂಡ ಸಿಕ್ಕಿರಲಿಲ್ಲ.
ಇಂದು ಗೋಳಿಬಜೆ ಮಾಡುವ ಸೂಚನೆ ತೋರಿದ್ದರಿಂದ ಅಡುಗೆಮನೆಯ ಹತ್ತಿರ ಅಡ್ಡಾಡುತ್ತಿದ್ದೆ. ಸುಮ್ಮ ಸುಮ್ಮನೆ ಬರುತ್ತಿದ್ದನು ನೋಡಿ.. “ಹೋಗಿ ಆಡ್ಕೋಳಾ ಮಾಣಿ.. ಇವತ್ ಗೋಳಿಬಜೆ ಮಾಡುದಿಲ್ಲ” ಅಂದಳು ಅಮ್ಮ. ಬಿಸಿನೀರೊಲೆಗೆ ಚಂಬು ನೀರು ಸುರಿದಂತಾಯ್ತು. ನನ್ನ ನಿರಾಸೆ ಕಂಡ ಅವಳು “ಬಪ್ಪು ಸಂಕಷ್ಟಿ ಆದ್ಮೆಲೆ ಮಾಡ್ತೆ ಅಕಾ? ಇವತ್ ಬ್ಯಾಡ. ರಾಘಣ್ಣ ಬತ್ತ ಅಲ್ದಾ? ಅವ್ನಿಗೆ ಗೋಳಿಬಜೆ ತಿಂಬುಕಾಗ.”
ಅಚ್ಚರಿಯಾಯ್ತು. ರಾಘಣ್ಣನಿಗೆ ಗೋಳಿಬಜೆಯೆಂದರೆ ಪ್ರಾಣ. ಯಾವಾಗಲೂ ಹೇಳಿಯಾದರೂ ಮಾಡಿಸಿಕೊಂಡು ತಿಂದು ಹೋಗ್ತಾನೆ. “ಎಂತಕಮ್ಮ? ಅವ ಎಂತ ಕಾಶಿಗ್ ಹೋಯ್ನಾ? ಅಂತ ಕೇಳಿದೆ.
“ಇಲ್ದಾ.. ಕಾಶೀಲ್ ಬಿಟ್ ಬಂದದ್ದಲ್ಲ. ಅದೊಂದ್ ದೊಡ್ ಕತಿ..”
*******
ರಾಘಣ್ಣ ಸ್ಪುರದ್ರೂಪಿ. ದಪ್ಪ ಮೀಸೆ, ದೂರದಿಂದ ಕಂಡರೆ ಅನಿಲ್ ಕಪೂರನ ನೆನಪಾಗುವುದು. ಕಬಡ್ಡಿ ಆಟದಲ್ಲಿ ಪ್ರವೀಣ. ಅದಕ್ಕೇ ಏನೋ ದೈಹಿಕವಾಗಿಯೂ ಕಟ್ಟುಮಸ್ತು ಜೀವ. ಆಟದ ಖೋಟಾದಲ್ಲೇ ಬ್ಯಾಂಕೊಂದರಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದ ಅಂತ ಕೇಳಿದ್ದ ನೆನಪು. ಪುಟ್ಟ ವಯಸ್ಸಲ್ಲೇ ತಂದೆ ತೀರಿಹೋದ್ದರಿಂದ ಅಮ್ಮನ ಜತೆಗೆ ತುಂಬ ಮುದ್ದು ಮಾಡಿಸಿಕೊಂಡು ಬೆಳೆದವನು. ಅವನ ಅಮ್ಮ ಅಂದರೆ ನನ್ನ ದೊಡ್ಡಮ್ಮ ಹಪ್ಪಳ ಸಂಡಿಗೆ ಉಪ್ಪಿನಕಾಯಿ ಮಾಡಿ ಮಾರಿ ಬಂದ ಹಣದಿಂದ, ತೋಟದ ಹಣ್ಣುಗಳನ್ನು ಮಾರಿದ್ದರಿಂದ ಸ್ವಲ್ಪ ಪೆನ್ಶನ್ ನಿಂದ ಬಂದ ಹಣದಿಂದ ಹೀಗೆ ಕಷ್ಟಪಟ್ಟು ಓದಿಸಿದ್ದಳು. ತುಂಬಾ ಬುದ್ಧಿವಂತನಲ್ಲವಾದರೂ ಫಸ್ಟ್ ಕ್ಲಾಸ್ ನಲ್ಲೆ ಪಾಸಾಗಿ ಎಲ್ಲರಿಗೂ ಖುಷಿಕೊಡುತ್ತಿದ್ದ. ಸಣ್ಣ ವಯಸ್ಸಿನಲ್ಲೇ ಕಬಡ್ಡಿಯ ಬಗ್ಗೆ ಕುತೂಹಲವಿದ್ದುದರಿಂದ ಆಟದ ಮಾನಸಿಕ ವಿನ್ಯಾಸ ಕರಗತ ಮಾಡಿಕೊಂಡಿದ್ದ. ದೊಡ್ಡವನಾಗುವ ಹೊತ್ತಿಗೆ ಜಿಲ್ಲಾ ಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದ. ಬಿ ಕಾಮ್ ಮುಗಿಸಿ ಕೆಲಸಕ್ಕೆ ಹುಡುಕುತ್ತಿದ್ದಾಗ ಕಬಡ್ಡಿಯಿಂದಾಗಲೇ ಕೆಲಸ ಸುಲಭವಾಗಿ ಸಿಕ್ಕಿದ್ದು ಅಂತ ಸಂಬಂಧಿಕರಲ್ಲಿ ಗಾಳಿಮಾತಿತ್ತು.
ಒಂದು ದಿನ ರಾತ್ರಿ ದೊಡ್ಡಮ್ಮ ರಾಘಣ್ಣನನ್ನು ಊಟಕ್ಕೆ ಕರೆಯಲು ಅವನಿದ್ದ ಕೋಣೆಗೆ ಹೋದಾಗ ಅವನಲ್ಲಿರಲಿಲ್ಲ. ರಾಘೂ ರಾಘೂ ಅಂತ ಕೂಗುತ್ತ ಅಲ್ಲಿ ಇಲ್ಲಿ ಮನೆತುಂಬಾ ಅಲೆದಾಡಿ ಹುಡುಕಿದರೂ ಕಾಣ್ತಿಲ್ಲ. ಮುಂಬಾಗಿಲ ಬಳಿ ಸಣ್ಣ ದನಿಯಲ್ಲಿ ಗುಸು ಗುಸು ಕೇಳುತ್ತಿದ್ದರಿಂದ ಅಲ್ಲಿಗೆ ಹೋದಳು ದೊಡ್ಡಮ್ಮ. ಚೂರು ಸರಿದಿದ್ದ ಬಾಗಿಲನ್ನು ಪೂರ್ತಿ ತೆಗೆದು ನೋಡಿದರೆ ಅಲ್ಲಿ ರಾಘಣ್ಣ ತನ್ನ ಗೆಳೆಯರೊಂದಿಗೆ ಮಾತಾಡುತ್ತಿದ್ದ. ಬಾಗಿಲು ಸದ್ದಾಗಿದ್ದು ನೋಡಿ ತಿರುಗಿ, “ಅಶನೊಂಕು ಬರ್ಪೆಯಾ.. ಸಲ್ಪ ಸೈರ್ಲಾ..” ಅಂತ ತುಳುವಲ್ಲಿ ಸ್ವಲ್ಪ ಒರಟಾಗಿಯೇ ಅಂದಿದ್ದ.
ಮರುಮಾತಾಡದೇ ದೊಡ್ಡಮ್ಮ ವರಾಂಡಾ ದಲ್ಲೆ ಕೂತಳು. ಸ್ವಲ್ಪ ಹೊತ್ತಿನಲ್ಲೇ ಗುಸುಗುಸು ಮಾತು ಜೋರಾಗತೊಡಗಿತು. ಕ್ಷಣಗಳುರುಳುತ್ತಾ ಹೋದಂತೆ ದನಿಯೂ ಏರತೊಡಗಿತ್ತು. ಯಾವುದೋ ಅನಿಷ್ಟದ ಮುನ್ಸೂಚನೆ ಸಿಕ್ಕಂತಾಗಿ ದೊಡ್ಡಮ್ಮ ಬಾಗಿಲಬಳಿ ಬಂದು ನೋಡಿದಾಗ ಬಂದವರಿಬ್ಬರ ಜತೆ ರಾಘಣ್ಣ ಜಗಳಾಡುತ್ತಿದ್ದ. ಮೂವರೂ ಒಬ್ಬರಮೇಲೊಬ್ಬರು ಕೈಮಿಲಾಯಿಸುತ್ತಿದ್ದರು. ದೊಡ್ಡಮ್ಮ ಹೋ ಅಂತ ಕೂಗಿ ರಾಘಣ್ಣನ ಬಳಿ ಹೋಗುತ್ತಿದ್ದಂತೆ ಅವನ ಗೆಳೆಯರು ಇನ್ನು ಜನರೆಲ್ಲಾ ಸೇರುವರು ಎಂಬ ಭಯದಿಂದ ಕತ್ತಲಿಲ್ಲಿ ಸರಿದು ಮರೆಯಾದರು.
ಆಗಲೇ ರಾಘಣ್ಣನ ಮೂಗಿನಲ್ಲಿ ರಕ್ತ ಸೋರುತ್ತಿತ್ತು. ದೊಡ್ಡಮ್ಮ ಕೂಡಲೇ ಅವನನ್ನು ಒಳಕರೆತಂದು ಒದ್ದೆಬಟ್ಟೆಯಿಂದ ರಕ್ತ ಒರೆಸಿದಳು. ರಾಘಣ್ಣ ಇನ್ನೂ ಕುದಿಯುತ್ತಿದ್ದ. ಅವ ಶಾಂತವಾದ ಮೇಲೆ ವಿಷಯವೇನೆಂದು ಕೇಳಿದಾಗ ಕಬಡ್ಡಿ ಪಂದ್ಯದ ವಿಚಾರವಾಗಿತ್ತು. ರಾಘಣ್ಣನಿಗೆ ಹಾಯ್ ಬಾಯ್ ಪರಿಚಯವಿದ್ದ ಪುಡಿ ರೌಡಿಯೊಬ್ಬ ಅವನ ತಮ್ಮನನ್ನು ರಾಘಣ್ಣ ಕೆಲಸ ಮಾಡುವ ಬ್ಯಾಂಕಿನ ತಂಡಕ್ಕೆ ಸೇರಿಸಿಕೊಳ್ಳಬೇಕು ಅನ್ನುವ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳಕ್ಕೇರಿತ್ತು.
ಅಂದು ರಾತ್ರಿಯಿಡೀ ದೊಡ್ಡಮ್ಮ ಅತ್ತಿದ್ದೇ. ಒಬ್ಬನೇ ಮಗ. ನೀ ಕೆಲಸಕ್ಕೆ ಹೋಗದಿದ್ದರೂ ಪರವಾಗಿಲ್ಲ, ಈ ಜಗಳಗಳೆಲ್ಲ ಬೇಡ ಅಂತ ಕಣ್ಣೀರು ಸುರಿಸಿದಳು. ಮೊದಮೊದಲು ಹಠಮಾಡಿ ಒಪ್ಪದಿದ್ದರೂ ಕೊನೆಗೆ ಕರಗಿ, ಅದ್ಯಾವುದೋ ಒಂದು ಪರೀಕ್ಷೆ ಬರೀಬೇಕು ಅದಾದ ಮೇಲೆ ಆಡುವುದನ್ನು ಬಿಡುತ್ತೇನೆ ಅಂತ ರಾಘಣ್ಣ ಅಂದ ಮೇಲೆಯೇ ದೊಡ್ಡಮ್ಮನಿಗೆ ಸಮಾಧಾನ.
****
ಬದುಕು ಕಾಲಿಗೆ ಚಕ್ರಹಾಕಿಕೊಂಡು ಓಡುತ್ತಿತ್ತು. ರಾಘಣ್ಣ ಪರೀಕ್ಷೆ ಬರೆದ. ಪ್ರಮೋಶನ್ ಸಿಕ್ಕಿತು. ಮದುವೆಯೂ ಆಯಿತು. ದೊಡ್ಡಮ್ಮನಿಗೆ ಈಗಲೂ ಸಂಡಿಗೆ, ಉಪ್ಪಿನಕಾಯಿ ಮಾಡದೇ ಹೋದರೆ ಹುಚ್ಚು ಹಿಡಿದಂತಾಗುತ್ತಿತ್ತು. ಅಂಗಳಕ್ಕಿಳಿದು ಸಗಣಿ ಸಾರಿಸದಿದ್ದರೆ ಒಳಗೇ ಉಳಿದು ಹಿಂಸಿಸುವ ಕ್ಯಾನ್ಸರಿನಂತ ಅಸಮಾಧಾನ. ಮನೆಯ ದನ ಲಕ್ಷ್ಮೀಯನ್ನು ಮಾರಿಬಿಡೋಣ ನಿಂಗೆ ನೋಡಿಕೊಳ್ಳೊಕೆ ಕಷ್ಟ ಆಗ್ತದಲ್ವಾ ಅಂತ ರಾಘಣ್ಣ ಹೇಳಿದರೆ ಕೆಂಡದಂತ ಕೋಪಮಾಡುತ್ತಿದ್ದಳು. ಅದನ್ನು ನೋಡಿಕೊಳ್ಳೊಕೇನು ಕಷ್ಟ? ನಂಗೆ ನೀನೂ ಬೇರೆಯಲ್ಲ ಲಕ್ಷ್ಮೀ ಬೇರೆಯಲ್ಲ. ಇನ್ನು ಹೀಗಂದ್ರೆ ಸರಿಯಿರಲ್ಲ ಅಂತ ತುಳುವಿನಲ್ಲಿ ರೇಗುತ್ತಿದ್ದಳು.
ಸೊಸೆ ಸಹಾಯಕ್ಕೆ ಬಂದರೂ ತಡೆದು, ಬೇಕಿದ್ದರೆ ಅಡುಗೆ ಮನೆಯಲ್ಲಿ ಸಹಾಯ ಮಾಡು ಇಲ್ಲಿ ಬೇಡ ಅನ್ನುವಂತೆ ಸೌಮ್ಯವಾಗಿ ಹೇಳ್ತಾ ಇದ್ದಳು.
ಹೀಗೆ ಅಂದರೂ ಕೆಲವೊಮ್ಮೆ ಹಾಳುಕಾಲುನೋವು ಅವಳನ್ನು ಬಾಧಿಸುತ್ತಿತ್ತು. ಲಕ್ಷ್ಮೀಯೂ ಮೊದಲೆಲ್ಲ ದೊಡ್ಡಮ್ಮ ನನ್ನು ಆಟ ಆಡಿಸುತ್ತಿತ್ತು. ಅಂದರೆ ದೊಡ್ಡಮ್ಮ ಲಕ್ಷ್ಮೀಯನ್ನು ಗದ್ದೆಗೆ ಕರೆದೊಯ್ಯುವಾಗ ಬೇಕಂತಲೇ ಓಡಿ ದೊಡ್ಡಮ್ಮನನ್ನು ಸಿಟ್ಟಿಗೇರಿಸುತ್ತಿತ್ತು. ಒಮ್ಮೆ ದೊಡ್ಡಮ್ಮ ಎಷ್ಟು ಗಟ್ಟಿಯಾಗಿ ಹಿಡಿದಿದ್ದರೂ ಲಕ್ಷ್ಮೀ ಓಡುವಾಗ ಹಿಡಿತ ತಪ್ಪಿ ದೊಡ್ಡಮ್ಮ ಧೊಪ್ಪನೆ ಬಿದ್ದಳು. ಲಕ್ಷ್ಮೀ ಆತಂಕಕ್ಕೊಳಗಾಗಿ ಅಂಬಾ ಅಂಬಾ ಅಂತ ಕೂಗಿತ್ತು. ಪುಣ್ಯವಶಾತ್ ದೊಡ್ಡಮ್ಮನಿಗೇನೂ ಆಗಿರಲಿಲ್ಲ. ಮೊದಲಿನಿಂದಲೂ ಪ್ರೀತಿಯಿದ್ದಿದ್ದರೂ ಈ ಘಟನೆ ನಂತರ ದೊಡ್ಡಮ್ಮನಿಗೆ ಲಕ್ಷ್ಮೀ ಎಂದರೆ ವಿಶೇಷ ಮಮತೆ.
ಈಗೆಲ್ಲಾ ಕಾಲುನೋವಿನಿಂದ ಮೆಲ್ಲಗೆ ಚೂರು ಕುಂಟುಕೊಂಡು ನಡೆವ ದೊಡ್ಡಮ್ಮನನ್ನು ಅರಿತೋ ಏನೋ, ಲಕ್ಷ್ಮೀ ಹಾಗೆಲ್ಲ ತುಂಟತನ ಮಾಡೊಲ್ಲ. ಆದರೂ ಸೊಸೆಯೇನಾದರೂ ಹಾಲು ಕರೆಯಲು, ಗೋಮಯ ಸಾಫ್ ಮಾಡಲು ಬಂದರೆ ಲಕ್ಷ್ಮೀ ಎಂದಿಗೂ ಸಹಕರಿಸುವುದಿಲ್ಲ.
ಒಮ್ಮೆ ನನಗೆ ಸರಿಯಾಗಿ ನೆನಪು. ದೊಡ್ಡಮ್ಮನಿಗೆ ಅವತ್ತು ವಿಪರೀತ ಜ್ವರ. ಎದ್ದು ನಡೆದಾಡಲೂ ಆಗದಷ್ಟು ವೀಕ್ ನೆಸ್. ಅಂಥ ಸಮಯದಲ್ಲಿ ಲಕ್ಷ್ಮೀಯ ಆರೈಕೆ ಸಾಧ್ಯವೆ? ಹೀಗಾಗಿ ಸೊಸೆ ಕೊಟ್ಟಿಗೆ ಕ್ಲೀನ್ ಮಾಡಲು ಹಿಡಿಸುಡಿ ಹಿಡಿದು ತಯಾರಾದಾಗ ಲಕ್ಷ್ಮೀ ಕೊಟ್ಟಿಗೆಯಿಂದ ಹೊರಹೋಗಲು ಕೇಳಳು. ದೊಡ್ಡಮ್ಮನ ಜ್ವರದಷ್ಟೇ ವಿಪರೀತ ಲಕ್ಷ್ಮೀಯ ಹಠ. ಸೊಸೆಯ ಬೈಗುಳ, ಲಕ್ಷ್ಮೀಯ ಕೂಗು ಕೇಳಿ ದೊಡ್ಡಮ್ಮ ಹೇಗೋ ಕಷ್ಟಪಟ್ಟು ಕೊಟ್ಟಿಗೆ ಬಳಿ ಬಂದಿದ್ದಳು. ದೊಡ್ಡಮ್ಮ ಬಂದು ಲಕ್ಷ್ಮೀಯನ್ನು ಮಾತಾಡಿಸಿದಾಗಲೇ ಅದಕ್ಕೆ ಸಮಾಧಾನ.
ಮತ್ತೊಮ್ಮೆ ಮಗ ಸೊಸೆ ಇಲ್ಲದಾಗ ದೊಡ್ಡಮ್ಮ ಲಕ್ಷ್ಮೀಯ ಹತ್ತಿರ ತುಳುವಿನಲ್ಲಿ ಮಾತಾಡುತ್ತಿದ್ದಳು. ನೀ ಯಾಕೆ ಹೀಗೆ ಹಠ ಮಾಡ್ತೀ? ನನ್ನ ಸೊಸೆ ಹತ್ರ ನೀ ಹೀಗೆ ನಡ್ಕೊಂಡ್ರೆ ನಾನು ಸತ್ತುಹೋದ ಮೇಲೆ ನಿನ್ನನ್ನ ಯಾರ್ ನೋಡ್ಕೋತಾರೆ? ನನ್ ಮೇಲೆ ಎಷ್ಟ್ ಪ್ರೀತಿ ಇಟ್ಟಿದೀಯೋ ಅವಳಿಗೂ ತೋರ್ಸು.. ಎಷ್ಟಂದ್ರೂ ನನ್ ಸೊಸೆ ಅಲ್ವಾ?
ಲಕ್ಷ್ಮೀಗೆಷ್ಟು ಅರ್ಥವಾಯ್ತೊ?
****
ದೊಡ್ಡಮ್ಮನಿಗೆ ಕಾಲುನೋವು ಜಾಸ್ತಿಯಾಗ್ತಾ ಇದ್ದಂತೆ ರಾಘಣ್ಣ ಉಡುಪಿಯಲ್ಲಿರೋ ಡಾಕ್ಟರುಗಳ ಹತ್ತಿರವೆಲ್ಲಾ ಸುತ್ತಾಡಿದ. ಆಯುರ್ವೇದಿಕ್, ಅಲೋಪತಿ ಎಲ್ಲಾ ಮಾರ್ಗಗಳನ್ನೂ ಜಾಲಾಡಿದ್ದಯಿತು. ದೊಡ್ಡಮ್ಮನ ಕಾಲುನೋವು ವಾಸಿಯಾಗಲಿಲ್ಲ. ಕೆಲವೊಮ್ಮೆ ಡಾಕ್ಟರ್ ಬಳಿ ಹೋಗುವುದಕ್ಕೂ ಆಗದಂಥ ಪೀಡಿಸುತ್ತಿತ್ತು. ಕಾಲು ನೋವಿಂದ ದಿನೇ ದಿನೇ ದೊಡ್ಡಮ್ಮ ಹೈರಾಣಾಗುತ್ತಿದ್ದ ಸಮಯದಲ್ಲಿ ರಾಘಣ್ಣ ಒಂದು ಕಾರು ಕೊಂಡ. ಬಿಳೀ ಬಣ್ಣದ ಮಾರುತಿ ಒಮಿನಿ. ದೊಡ್ಡಮ್ಮ ಪಕ್ಕದ ಮನೆಯವರ ಬಳಿ ” ಎನ್ನ ಈ ಕಾರ್ ನಂಬೆರೆಗಾಪುರಿ.. ಐಕೆ ಮಗೆ ಎಂಕು ಆ ಕಾರ್ ಕೊಣತಿನಿ” (ನನ್ನ ಈ ಕಾಲು ನಂಬಲಾಗದು, ಅದಕ್ಕೆ ಮಗ ಆ ಕಾರ್ ತಂದಿದ್ದು) ಅಂತಾ ಇದ್ಲು.
ರಾಘಣ್ಣ ರಜೆ ಇದ್ದಾಗಲೆಲ್ಲ ದೊಡ್ಡಮ್ಮನನ್ನು ದೇವಸ್ಥಾನಗಳಿಗೆ ಸುತ್ತಾಡಿಸುತ್ತಿದ್ದ. ಕರಾವಳಿಯಲ್ಲಿ ತಿಂಗಳಿಡೀ ತಿರುಗಿದರೂ ಒಂದಿಷ್ಟು ದೇವಸ್ಥಾನಗಳು ನೋಡಲು ಬಾಕಿಯಿರುವಷ್ಟಿವೆ. ಭಾನುವಾರ ಬಂದರೆ ಸಾಕು, ಬೆಳಿಗ್ಗೆಯೇ ಕಾರು ಹತ್ತುತ್ತಿದ್ದರು. ದೊಡ್ಡಮ್ಮ ಕಾರಿನಲ್ಲಿ ರಾಘಣ್ಣನಿಗೆ ಹೇಳುತ್ತಿದ್ದರು.. ದೇವಸ್ಥಾನಗಳನ್ನೆಲ್ಲಾ ನಿಮ್ ವಯಸ್ಸಲ್ಲೇ ನೋಡಬೇಕಿತ್ತು, ಈಗ ನೋಡು ತುಂಬಾ ಕಷ್ಟ ಅದಕ್ಕೇ ಎಲ್ಲಾ ದೇವಸ್ಥಾನಗಳು ಬೆಟ್ಟದ ಮೇಲಿವೆ.. ಸುಲಭವಾಗಿ ನೋಡಬೇಕೆಂದರೆ ಚಿಕ್ಕ ವಯಸ್ಸಲ್ಲೇ ನೋಡಬೇಕು, ಇಲ್ಲಾಂದರೆ ನೋಡು ನನಗಾದಂಥ ಪಜೀತಿಗಳು.. ಅನ್ನುತ್ತಿದ್ದಳು. ದೇವಸ್ಥಾನಗಳಿಗೆ ಸ್ವಲ್ಪ ಮೆಟ್ಟಿಲುಗಳಿದ್ದರೂ ದೊಡ್ಡಮ್ಮನಿಗೆ ತ್ರಾಸವಾಗುತ್ತಿತ್ತು.
ಹೀಗೆ ತಿಂಗಳುಗಳುರುಳಿದವು. ಅದೊಮ್ಮೆ ದೊಡ್ಡಮ್ಮ ಇನ್ನು ಎಲ್ಲಿಗೂ ಬರಲಾಗುವುದಿಲ್ಲ ಎಂಬಂತೆ ಕೂತುಬಿಟ್ಟಳು. ರಾಘಣ್ಣನಿಗೂ ಆತಂಕವಾಯ್ತು. ಸಂಜೆ ಕೆಲಸದಿಂದ ಬರುತ್ತಲೇ ಕಾರ್ ನವರೆಗಾದರೂ ಬಾ ಡಾಕ್ಟರ್ ಬಳಿ ಕರ್ಕೊಂಡು ಹೋಗ್ತೀನಿ ಅಂತ ಒತ್ತಾಯಿಸಿದ. ಒಂದು ಬಗಲನ್ನು ಸೊಸೆ ಕೈಗಿತ್ತು ಇನ್ನೊಂದನ್ನು ಮಗನ ಕೈಗಿತ್ತು ಹೇಗೋ ಕಾರ್ ಹತ್ತಿ ಕೂತಳು.
***
ಆಸ್ಪತ್ರೆಯಲ್ಲಿ ಎರಡು ದಿನ ಇದ್ದ ನಂತರ ದೊಡ್ಡಮ್ಮ ಸ್ವಲ್ಪ ಗೆಲುವಾದಳು. ರಾಘಣ್ಣನಿಗೂ ನಿರಾಳವಾಯ್ತು. ತುಂಬಾ ಕಟ್ಟುನಿಟ್ಟಾಗಿ ಮನೆಗೆ ಹೋಗಿ ರೆಸ್ಟ್ ತಗೋಬೇಕು ಕೆಲ್ಸ ಮಾಡಿದರೆ ನೋಡು ಅಂತ ಪ್ರೀತಿಯಿಂದ ಬೈದ. ಆಸ್ಪತ್ರೆಯಿಂದ ಬರುತ್ತಾ ಇರುವಾಗ ಸೊಸೆ ತರಕಾರಿ ತಗೆದುಕೊಳ್ಳಬೇಕಿತ್ತು ಅನ್ನುವುದನ್ನು ನೆನಪಿಸಿಕೊಂಡಳು. ದೊಡ್ಡಮ್ಮನನ್ನು ಕಾರಿನಲ್ಲೇ ಇರಿಸಿ ರಾಘಣ್ಣ ಮತ್ತವನ ಹೆಂಡತಿ ತರಕಾರಿ ಕೊಂಡುಕೊಳ್ಳಲು ಹೋದರು. ಅದು ರಥಬೀದಿ. ಕಾರನ್ನು ರಥಬೀದಿಯ ಆವರಣದ ಹೊರಗೇ ನಿಲ್ಲಿಸಬೇಕಿತ್ತು.

ದೊಡ್ಡಮ್ಮ ಕಾರಿಂದ ಹೊರ ನೋಡುತ್ತಿದ್ದರೆ ಬಾಲ್ಯದ, ಯೌವ್ವನದ ದಿನಗಳೆಲ್ಲ ನೆನಪಾದವು. ತುಂಬಾ ಹಳೇಯ ರಥಬೀದಿ, ಅಂಥ ಬದಲಾವಣೆಗಳೇನೂ ಆಗಿದ್ದಿಲ್ಲ. ಅಲ್ಲಿ ಇಲ್ಲಿ ಎಟಿಎಮ್ಮುಗಳಾದವು ಅನ್ನೋದು ಬಿಟ್ಟರೆ ಮತ್ತೆಲ್ಲಾ ಹಾಗೆ ಇದೆ. ಮನಸ್ಸು ಹೊರ ಹೋಗಬೇಕು ರಥಬೀದಿಯ ಆ ತಿರುವಲ್ಲೇನಿದೆ ಅಂತ ನೋಡಬೇಕು ಅಂತೆಲ್ಲಾ ಅನ್ನಿಸಿದರೂ ದೇಹ ಸಹಾಯಮಾಡದು. ಕೊಂಚ ಮುಂದೆ ಹೋಗಿ ಬಲಕ್ಕೆ ತಿರುಗಿದರೆ ಅಲ್ಲೊಂದು ಹೋಟೆಲು.. ಹಾಂ.. ಹೋಟೆಲ್ ಜನತಾ… ಆ ಹೋಟೆಲ್ಲಿನ ಗೋಳಿಬಜೆ ನೆನಪಾಯಿತು. ಆ ಹೋಟೆಲ್ಲು ಈಗಲೂ ಇದ್ದಿರಬಹುದಾ? ಗೋಳಿಬಜೆ ಈಗಲೂ ಅಲ್ಲಿ ಫೇಮಸ್ಸಾ? ಮೆಲ್ಲ ಹನಿವ ಮಳೆಯಲ್ಲಿ ಹೋಟೆಲು ಹೊಕ್ಕು ಚಿನ್ನದ ಬಣ್ಣದ ಬಿಸಿ ಬಿಸಿ ಗೋಳಿಬಜೆಯನ್ನು ಚಟ್ನಿಯಲ್ಲಿ ಮೆಲ್ಲಿದರೆ… ಒಂದೊಂದೇ ತುಂಡು ಬಾಯಲ್ಲಿರಿಸಿಕೊಂಡು ಕಣ್ಮುಚ್ಚಿದರೆ.. ಗೋಳಿಬಜೆಯ ಹದ ಬಿಸಿ, ಅದು ಚಟ್ನಿಯ ಜೊತೆ ಸೇರಿ ನಾಲಿಗೆಗೆ ತಾಕಿದೊಡನೆ ಆಗುವ ಉನ್ಮಾದ.. ಅಗಿಯುವಾಗ ಮಧ್ಯೆ ಕಾಯಿಯ ತುಂಡು ಬಾಯಿಗೆ ಸಿಕ್ಕಾಗ ಆಗುವ ಪರಮಾನಂದ… ಜತೆಗೆ ಚೂರು ಬಿಸೀ ಫಿಲ್ಟರ್ ಕಾಫಿಯಿದ್ದಿದ್ದರೆ…
ದೊಡ್ಡಮ್ಮನ ಬಾಯಲ್ಲಿ ನೀರೂರಿತು.
*****
ರಾಘಣ್ಣ ಹೆಂಡತಿ ಬರುವ ಹೊತ್ತಿಗೆ ದೊಡ್ಡಮ್ಮ ನಿದ್ದೆ ಹೋಗಿದ್ದರು. ಬಾಯಲ್ಲಿ ಜೊಲ್ಲು ಸುರಿದಿತ್ತು. ರಾಘಣ್ಣ ತನ್ನ ಅಮ್ಮನ ಮುಖದಲ್ಲಿನ ಭಾವ ನೋಡಿದೊಡನೆಯೆ ಒಂಥರಾ ಆಯಿತು. ಎದೆಯ ಮೂಲೆಯಲ್ಲೆಲ್ಲೋ ಮುಳ್ಳೊಂದು ಚುಚ್ಚಿದ ಭಾವ. ದೊಡ್ಡಮ್ಮನ ಹತ್ತಿರ ಬಂದು ಜೊಲ್ಲು ಒರೆಸಿದ.
ದೊಡ್ದಮ್ಮನಿಗೆ ಎಚ್ಚರವಾಗದಂತೆ ಕಾರು ಮೆಲ್ಲಗೇ ಓಡಿಸಿದರೂ ರಸ್ತೆಯಲ್ಲಿ ವಿಪರೀತ ಜನಸಂದಣಿಯಿದ್ದಿದ್ದರಿಂದ ಮಧ್ಯೆ ಅವಳಿಗೆ ಎಚ್ಚರವಾಯಿತು. ಅದೇ ಸಮಯದಲ್ಲಿ ತನ್ನ ಕಾರಿಗೆ ಸ್ಕೂಟರೊಂದು ತಾಕಿದ್ದರಿಂದ ಡೆಂಟ್ ಆಗಿತ್ತು. ರಾಘಣ್ಣ ಕಾರಿಳಿದು ಸ್ಕೂಟರಿನವನೊಂದಿಗೆ ಜಗಳಾಡಿದ. ಸ್ಕೂಟರಿನವನು ರಾಘಣ್ಣನಿಗೇ ಬೈದು, ತಪ್ಪೆಲ್ಲಾ ರಾಘಣ್ಣನದೇ ಎಂದು ವಾದಿಸಿದ. ಜನ ಸೇರಿದರು. ಟ್ರಾಫಿಕ್ಕು ಜಾಮ್ ಆಯಿತು. ಟ್ರಾಫಿಕ್ ಪೋಲಿಸ್ ಬಂದು ಎರಡೂ ವಾಹನದ ನಂಬರ್ ಬರೆದುಕೊಂಡ. ಜನರಲ್ಲೇ ಒಬ್ಬ ಯಾಕೆ ಸುಮ್ಮನೆ ಜಗಳ ಸಾರ್ ಬಿಟ್ಬಿಡಿ ಎಂದ. ಟ್ರಾಫಿಕ್ ಪೋಲಿಸ್ ಕೂಡ ಹತ್ತಿರ ಇದ್ದುದರಿಂದ ಇಬ್ಬರೂ ಸುಮ್ಮನೆ ವಿವಾದ ಯಾಕೆ ಅಂತ ಬರೀ ಫೋನ್ ನಂಬರ್ ಇಸ್ಕೊಂಡು ನಂತರ ಮಾತಾಡೋಣ ಅಂತ ಜಗಳ ಬಿಟ್ಟರು.
ದೊಡ್ಡಮ್ಮನಿಗೆ ಎಚ್ಚರಾದ ಕೂಡಲೇ ರಾಘಣ್ಣ ಕಾರಿಳಿದು ಸ್ಕೂಟರಿನವನ ಹತ್ತಿರ ಜಗಳಕ್ಕಿಳಿದಿದ್ದ. ಸುತ್ತಲೂ ಅಯೋಮಯವಾಗಿ ನೋಡಿದ ದೊಡ್ಡಮ್ಮ ಅಂದಿದ್ದು ’ರಥಬೀದಿ ಬುಡ್ತಾನಾ” (ರಥಬೀದಿ ಬಿಟ್ಟಾಯ್ತಾ?).
ಜಗಳ ಮುಗಿಸಿ ಮತ್ತೆ ಡ್ರೈವ್ ಮಾಡಲು ಕುಳಿತ ರಾಘಣ್ಣ ನ ಸಿಟ್ಟಿನ್ನೂ ಇಳಿದಿರಲಿಲ್ಲ. ತನ್ನ ಹೆಂಡತಿ ಬಳಿ ನೋಡು ಹೇಗಿದ್ದಾನೆ, ತಪ್ಪೆಲ್ಲಾ ನನ್ ಮೇಲೆ ಹಾಕುವಷ್ಟು ಕೊಬ್ಬು.. ಅನ್ನುತ್ತಿರಬೇಕಾದರೆ ತಾಲ್ಲೂಕಾಫೀಸು ತಿರುವು ಬಂದಿತ್ತು. ದೊಡ್ಡಮ್ಮ, “ರಾಘೂ, ಜನತೊಂಕ್ ಪೋವೊಳಿ ಇತ್ತ್ಂಡ್.. ಗೋಳಿಬಜೆ ತಿನರೆಗ್ ಮನಸಾನ್…” (ರಾಘೂ, ಜನತಾಕ್ಕೆ ಹೋಗ್ಬಹುದಿತ್ತು, ಗೋಳಿಬಜೆ ತಿನ್ನೋಕೆ ಮನಸ್ಸಾಗ್ತಿದೆ)
ರಾಘಣ್ಣ ಸಿಟ್ಟಿಂದ ಇಲ್ಲಿಗ್ ಬಂದಾದ್ಮೇಲೆ ಹೇಳ್ಬೇಕಾ? ಈ ಟ್ರಾಫಿಕ್ಕ್ ನಲ್ಲಿ ಮತ್ತೆ ನನ್ಗೆ ವಾಪಸ್ ಹೋಗೋಕ್ಕಾಗಲ್ಲ ಅಂತ ಬೈದ.
ದೊಡ್ಡಮ್ಮ ಮರುಮಾತಾಡಲಿಲ್ಲ.
*****
ಮತ್ತೆ ಆ ದಿನ ರಾತ್ರಿ ದೊಡ್ಡಮ್ಮನಿಗೆ ಜ್ವರ ಜಾಸ್ತಿಯಾಯ್ತು. ಕಾಲುನೋವಿನ ಜತೆಗೆ ಬೆನ್ನೂ ನೋಯುತ್ತಿದೆ ಅಂತ ತ್ರಾಸಪಡುತ್ತಾ ಹೇಳುತ್ತಿದ್ದಳು. ಸೊಸೆಗೆ ಏನು ಮಾಡಲೂ ತೋಚದಂಥ ಭಯ. ಡಾಕ್ಟರನ್ನು ಕರ್ಕೊಂಡು ಬರ್ತೀನಿ ಅಂತ ಹೋದ ರಾಘಣ್ಣ ವಾಪಸ್ಸ್ ಬರುವುದರೊಳಗೆ ದೊಡ್ಡಮ್ಮ ಪ್ರಾಣ ಬಿಟ್ಟಳು.
****
ರಾಘಣ್ಣ ಗೋಳಿಬಜೆ ಕೊಡಿಸಲಾಗದ ಗಿಲ್ಟ್ ನಿಂದ ನಲುಗಿಹೋದ. ಹೆಂಡತಿ ಹತ್ತಿರ ಸುಮ್ಮ ಸುಮ್ಮನೆ, ಅಮ್ಮನನ್ನು ಮತ್ತೊಂದು ದಿನ ಕರ್ಕೊಂಡು ಹೋಗ್ತೇನೆ ಅಂದುಕೊಂಡಿದ್ದೆ ಅನ್ನೋದನ್ನ ನೀನಾದ್ರೂ ನಂಬ್ತೀಯಲ್ವಾ ಅಂತ ಕೇಳ್ತಿದ್ದ. ಮತ್ತೆ ಈ ಜನ್ಮದಲ್ಲಿ ಗೋಳಿಬಜೆ ತಿನ್ನಲ್ಲ ಅಂತ ಶಪಥ ಮಾಡಿದ.
****
ಹೊರಗೆ ಕೀಂ ಕೀಂ ಕಾರು ಹಾರ್ನ್ ಕೇಳಿಸಿತು. ರಾಘಣ್ಣ. ಬಿಳೀ ಮಾರುತಿ ಒಮಿನಿ. ಹೇಗಿದ್ದೀಯೋ ಅಂತ ತಲೆ ನೇವರಿಸಿ ಕೇಳಿದ. ನನ್ನಮ್ಮನಿಗೆ ಕಾಲುನೋವು ಹೇಗಿದೆ ಅಂತ ವಿಚಾರಿಸಿದ. ಎಲ್ಲೋ ಮಲೆನಾಡಿನಿಂದ ತಂದ ನೋವಿನೆಣ್ಣೆ ಹಾಕಿಕೊ ಅಂತ ಕೊಟ್ಟ. ಖುಷಿಯಿಂದ ಊಟ ಮಾಡಿದ. ಅಡುಗೆ ಸೂಪರ್ರಾಗಿದೆ ಅಂದ.
ಎಲ್ಲಿಗಾದರೂ ಹೋಗಬೇಕಿದೆ, ಯಾವುದಾದರೂ ಸ್ಥಳ ನೋಡಬೇಕಾಗಿದೆ ಅನ್ನಿಸಿದರೆ ಹೇಳು ಕರ್ಕೊಂಡು ಹೋಗ್ತೀನಿ ಅಂದ.
ರಾಘಣ್ಣ ಹೊರಟು ನಿಂತಾಗ ನನ್ನಮ್ಮನನ್ನು ನೋಡಿದ. ಅದು ಥೇಟ್ ರಾಘಣ್ಣ ದೊಡ್ಡಮ್ಮನನ್ನು ನೋಡಿದ ಹಾಗೆಯೇ ಅನ್ನಿಸಿತು. “ಅಮ್ಮ, ರಾಘಣ್ಣನನ್ನು ಇಲ್ಲೇ ಇಪ್ಪುಕೆ ಹೇಳಮ್ಮ” ಅಂದೆ. ಅಮ್ಮ ನಸುನಕ್ಕು, “ಈಗ ಅವ ಹೋಯಾಯ್ತಲ್ಲ.. ಇನ್ನೊಂದ್ಸಲ ಬರ್ಲಿ.. ಹೋಪುಕ್ ಬಿಡೂದೇ ಬ್ಯಾಡ’ ಅಂದಳು.
~END~
(“ಸಖಿ” ವಾರಪತ್ರಿಕೆಯಲ್ಲಿ ಪ್ರಕಟಿತ)