Archive for the ‘ಲಹರಿ’ Category

ಡಿಯರ್ ಗುಂಗರಮಳೆಯ ಗೊಂಬೆ

ಈಗಲೂ ಅನ್ಸೋದು; ನಿನ್ನನ್ನು ಸರಿಯಾಗಿ ನಾನಿನ್ನೂ ನೋಡೇ ಇಲ್ಲ. ಹೌದು; ತುಂಬಾ ಸಲ ಕದ್ದು ನೋಡೋಕೆ ಪ್ರಯತ್ನ ಪಟ್ಟಿದೀನಿ. ಆದರೆ, ಆ ಆಯಸ್ಕಾಂತ ಕಣ್ಣುಗಳ ಸೆಳೆತದಿಂದ ಹೊರಬಂದು ನಿನ್ನನ್ನು ಕಣ್ತುಂಬಾ ನೋಡಬೇಕು ಎಂಬ ಆಸೆ ಮರೀಚಿಕೆಯಾಗೇ ಉಳಿದಿದೆ. ನಿಜ್ಜಾ ಹೇಳ್ತೀನಿ; ನಿನ್ನ ಕಿವಿಯ ಲೋಲಾಕನ್ನು ಫೇಸ್ ಬುಕ್ ನ ಪ್ರೊಫೈಲ್ ಫೊಟೋದಲ್ಲಿ ನೋಡಿದ್ದೇನೆಯೇ ವಿನಾ ನಿಜವಾಗಿ ಅದರ ಅಂದವನ್ನು ಇನ್ನೂ ನಾ ಸವಿದೇ ಇಲ್ಲ! ನಿನ್ನ ಕಂಗಳಿಗೆ ಅದೆಂಥಾ ಶಕ್ತಿಯಿದೆಯೇ ಮಾರಾಯ್ತೀ. ದೇವರನ್ನೇ ನಂಬಬೇಕು ಅನ್ನುವಷ್ಟು! ನಿಂಗೇ ಗೊತ್ತಿರೋ ಹಾಗೆ ನಾನು ಅದೆಷ್ಟು ಸಲ ಆ ಸೆಳೆತವನ್ನು ಭರಿಸಲಾಗದೇ ಮುಖ ತಗ್ಗಿಸಿದ್ದಿದೆ. ಆ ಹೋರು ಬೆಳಕಿಗೆ ಕಣ್ಣೊಡ್ಡಲಾಗದೇ ಸೋತಿದ್ದೇನೆ. ನೀನು ನನ್ನತ್ತ ನೋಡಿದ ಒಂದು ಸೆಕೆಂಡನ್ನು ತುಂಬಿಕೊಳ್ಳಲು ಈ ಮನಸ್ಸಿಗೆ ಏದುಸಿರು. ಆ ಬೆಳಕು ಮೈಯೆಲ್ಲಾ ವ್ಯಾಪಿಸಿ, ಆತ್ಮ ಒಮ್ಮೆ ಕಂಪಿಸಿ, ಬೆಳಕಿನ ಸ್ನಾನವಾದಷ್ಟೇ ಮನಸ್ಸು ಶುದ್ಧ ಶುದ್ಧ!

images1_thumb.jpg

ನೀ ಬಂದು.. ಬಳಿ ನೀ ಬಂದು..
ಈ ಸ್ವಪ್ನದ ಗಾಯ ನೋಡು…

ನೀನು ಎ.ಆರ್.ರೆಹಮಾನ್ ಸಂಗೀತದ ಹಾಗೆ; ಗುಟುಕು ಬಿಯರಿನ ಹಾಗೆ. ಮೊದಲಿಗೆ ಇಷ್ಟ ಅನ್ನಿಸಲ್ಲ. ಆದರೆ ಒಮ್ಮೆ ಗುಂಗು ಹತ್ತಿಬಿಟ್ಟರೆ ಮತ್ತೆ ಮತ್ತೆ ನೋಡುವ ಆಸೆ. ನೀನು ಜೀವನ ಪೂರ್ತಿ ಗುನುಗುವ ಗಾನ, ಸದಾ ಎದೆಯೊಳಗೇ ಉಳಿಯುವ ರಾಗ. ನೀನು ನನ್ನ ಹೃದಯದಲ್ಲಿರುವ ಮಚ್ಚೆ. ತಿರುಮಲೇಶರ ಅಕ್ಷಯ ಕಾವ್ಯದಂತೆ – ಯಾವ ಪುಟದಿಂದಾದರೂ ಶುರು ಮಾಡಿ- ಯಾವ ಪುಟದಲ್ಲಾದರೂ ನಿಲ್ಲಿಸಿ – ಎದೆ ತುಂಬಿಕೊಳ್ಳಬಹುದಾದಂತ ಅನನ್ಯ ಕಾವ್ಯ. ಚಂದದ ಸಾಲೊಂದನ್ನು ಬರೆಯುವಾಗ ಕಾಯ್ಕಿಣಿಯ ಭಾವವಿನ್ಯಾಸದಲ್ಲಿ ಮೂಡಿದ ಪಲುಕು. ನಿನ್ನಲ್ಲೇ ಕೆ.ಎಸ್.ನ. ಕವಿತೆಯ ಎಲ್ಲಾ ನಯ ನಾಜೂಕು ಮನೆ ಮಾಡಿದೆ. ನಿನ್ನ ಕಂಗಳು ಮಣಿಕಾಂತ್ ಪುಸ್ತಕದ ಶೀರ್ಷಿಕೆಯಂತಿರುತ್ತದೆ, ಒಮ್ಮೆ ಒಳ ಹೊಕ್ಕು ನೋಡಬೇಕೆಂಬ ಆಸೆ ಹುಟ್ಟಿಸುತ್ತದೆ. ಹೊಕ್ಕರೆ ನೆನಪುಗಳ ಜೋಳಿಗೆಯಿಂದ ಮನಸ್ಸು ಭಾರ. ನಿನ್ನ ಕೂದಲಿನ ಕಪ್ಪು ಜಲಪಾತದಲ್ಲಿ ಕುವೆಂಪು ಕವಿತೆಗಳ ಗಾಢತೆ, ನವಿರುತನ ಇದೆ. ಒಂದು ಅದ್ಭುತ ಕಥೆ ಬರೆದ ಬಳಿಕ ರವಿ ಬೆಳೆಗೆರೆ ಇಡುವ ಕೊನೆಯ ಫುಲ್ ಸ್ಟಾಪ್ ನಿನ್ನ ಬಿಂದಿ ಅನ್ನಿಸುತ್ತದೆ. ನಿನ್ನ ಕೊರಳಿನ ಪದಕ ನನ್ನ ಹೃದಯ – ಎಂಬಂಥ ಸಾಲು ಬರೆದಾಗ ಎಚ್ಚೆಸ್ವಿಯಲ್ಲಿ ಮೂಡಿದ ಭಾವನೆ ನಿನ್ನ ಕಂಗಳಲ್ಲಿ ಜಿನುಗುತ್ತಿರುತ್ತದೆ. ನಂಗನ್ಸುತ್ತೆ, ನೀನ್ಯಾರನ್ನೆಲ್ಲಾ ನೋಡಿ ನಗುತ್ತೀಯೋ ಅವರೆಲ್ಲಾ ಜೋಗಿಯಂತೆ ಇಪ್ಪತ್ತೈದು ದಿನಕ್ಕೊಂದು ಕಾದಂಬರಿ ಬರೆಯಬಲ್ಲರು. ನಿನ್ನ ಕಿರುಬೆರಳ ಕರೆಗೆ ವಿಶ್ವೇಶ್ವರ ಭಟ್ಟರ ಪುಸ್ತಕದಲ್ಲಿದ್ದಂತೆ ಪ್ರಪಂಚವನ್ನೇ ಗೆಲ್ಲಬಲ್ಲಂಥ ಹುಮ್ಮಸ್ಸನ್ನು ಕೊಡಬಲ್ಲಂಥ ಶಕ್ತಿಯಿದೆ. ಒಂದೊಳ್ಳೆ ಕಥೆ ಬರೆದ ನಂತರ ಚಿತ್ತಾಲರ ಮೈ ಮುರಿಯುವಿಕೆಯ ಸುಖ ನಿನ್ನ ಆಕಳಿಕೆಯಲ್ಲಿದೆ. ನಿನ್ನ ನಗೆಯನ್ನು ಪೋಸ್ಟ್ ಮಾರ್ಟಮ್ ಮಾಡಿ ವಿಶ್ಲೇಷಿಸಿದರೆ ಅದರಲ್ಲಿ ಪೂಚಂತೇ ಬರಹದ ಸವಿಯಿದೆ. ಗಾಳಿಯೊಡನೆ ಆಟವಾಡುವ ನಿನ್ನ ಮುಂಗುರಳಲ್ಲಿ ಬೇಂದ್ರೆ ಕವಿತೆಯ ಅರ್ಥಬದ್ಧ ಪ್ರಾಸ ಇದೆ. ನಿನ್ನ ನಡೆ ನುಡಿಯಲ್ಲಿ ಭೈರಪ್ಪನವರ ಡೀಟೈಲಿಂಗ್ ಇದೆ. ನಿನ್ನ ಮನಸ್ಸು ಮಾತ್ರ – ಅಡಿಗರ ಕವಿತೆಯಂತೆ. ತಿಳಿದುಕೊಂಡಷ್ಟು ಹೊಸ ಅರ್ಥಗಳು, ಒಳಹೊಕ್ಕಷ್ಟೂ ಮತ್ತಷ್ಟು ವಿವರಗಳು.
ಒಟ್ಟಾರೆ ಹೇಳಬೇಕೆಂದರೆ- ನೀನೊಂದು ನಡೆಯುವ ಕವಿತೆ.

images

ನೀನೆಂದರೆ ನನ್ನೊಳಗೆ… ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ… ನೀನೇ ಒಂದು ಸಂಕಲನ

ನಿಂಗೆ ಎಲ್ಲಾ ಅರ್ಥ ಆಗೋದು ಲೇಟು. ಮೆಸ್ಸೇಜಿಗೆ ಉತ್ತರ ಕೊಡುವುದೂ ಅದೆಷ್ಟು ತಡ. ತುಂಬಾ ಸಲ ನಿನ್ನ ಮೆಸ್ಸೇಜಿನ ಬಾಕ್ಸ್ ನ್ನು ತೆರೆದೇ ಇಟ್ಟು ಹಸಿದ ಮನ ವೀಣಾ ಸ್ಟೋರ್ಸ್ ಮುಂದೆ ಇಡ್ಲಿಗಾಗಿ ಕಾಯುತ್ತಿರುವಂತೆ ನಿನ್ನ ಮೆಸ್ಸೇಜಿಗಾಗಿ ಕಾಯುತ್ತಿರುತ್ತೇನೆ. ಇದೀಗ ಟಣ್ ಅನ್ನುವ ಸದ್ದಿನೊಂದಿಗೆ ನಿನ್ನ ಉತ್ತರ ಬರುತ್ತದೆ ಭರವಸೆಯ ಆಶ್ವಾಸನೆಯೊಂದಿಗೆ ಅದೆಷ್ಟು ಕ್ಷಣಗಳಿಗೆ ನಾನು ಮೋಸ ಮಾಡಿಲ್ಲ? ನನ್ನ ಕಂಗಳ ಬೇಡಿಕೆ ನಿಂಗರ್ಥ ಆಗಿದ್ದಿದ್ದರೆ ಇಷ್ಟೊತ್ತಿಗೆ ಒಂದು ಸುಂದರ ಸ್ನೇಹವೊಂದು ರೂಪುಗೊಂಡಿರುತ್ತಿತ್ತು. ನಿನ್ನ ಉತ್ತರ ಮತ್ತು ನನ್ನ ಮರು ಉತ್ತರದ ನಡುವಿನ ಸಮಯದ ಲಯವೇ ಹೇಳುತ್ತದೆ; ಬಹುಷಃ ಬೆಳಗಾಗುತ್ತಲೇ ನಾನು ಗುಡ್ ಮಾರ್ನಿಂಗ್ ಹೇಳುವುದು ನಿನ್ನ ಉತ್ತರದ ನಿರೀಕ್ಷೆಗೇ. ಪ್ರತೀ ಕ್ಷಣದ ರುಚಿ ನೋಡಿ ನಿನಗಾಗಿ ಕಾಯ್ದಿರಿಸುವ ಶಬರಿ ನಾನು, ಅಂತಲೇ ನನ್ನ ಬಗ್ಗೆ ನನಗಿರುವ ಗುಮಾನಿ. ಇಷ್ಟಕ್ಕೂ ನನಗೆ ಬೇಕಿರುವುದು ಒಂದು ಸುಂದರ ಸ್ನೇಹ. ನಿನ್ನನ್ನು ಅರಿಯುವ ಸುಖ. ಬದುಕು ಪೂರ್ತಿ ಖುಷಿಯಿಂದ ಕಳೆಯಲು- ನಿನ್ನ ಜೊತೆ ಕಳೆದ ಸಮಯಗಳ ಒಂದು ಜೋಳಿಗೆಯಷ್ಟು ನೆನಪುಗಳು. ಮತ್ತು ಕೊಂಚೇ ಕೊಂಚ ಪ್ರೀತಿ.
ಜೊತೆಗೆ ನೀನು ಸದಾ ಖುಷಿಯಾಗಿರುವುದು.
ಇಷ್ಟು ಪುಟ್ಟ ಬೇಡಿಕೆಯಿಟ್ಟುಕೊಂಡು ನಿನ್ನ ಉತ್ತರಕ್ಕಾಗಿ ಪ್ರತಿದಿನ ಕಾಯುತ್ತಿರುತ್ತೇನೆ; ಎಂದಿನಂತೆ.
ಇದೇ ನನ್ನ ನಾಳೆಗಳನ್ನು ರುಚಿಕಟ್ಟಾಗಿರಿಸುತ್ತಿದೆ. ಇದೇ ಭರವಸೆಯ ನೊಗ ಹೊತ್ತು ದಿನದ ಹೊಲವನ್ನು ಉಳುತ್ತಿರುತ್ತೇನೆ.

–  ನಿನ್ನ ಕಣ್ಣುಗಳ ಫ್ಯಾನ್

ಲೈಬ್ರೆರಿಯ ಕಪಾಟಿನಲ್ಲಿ ಜೋಡಿಸಲ್ಪಟ್ಟಿರುವ ಪುಸ್ತಕಕ್ಕೆ ತನ್ನದೇ ಅಪ್ಯಾಯವಾದ ವಲಯವೊಂದಿದೆ. ಅದು ತನ್ನದೇ ಆದ ವಿಶಿಷ್ಟ ಪ್ರಪಂಚ ಹೊಂದಿದೆ. ಯಾರಾದರೂ ಒಮ್ಮೆ ಅದರೆಡೆಗೆ ಹೋಗಿ ಇಸ್ಪೀಟೆಲೆಯೊಂದನ್ನು ಎತ್ತುವಂತೆ ಪುಸ್ತಕವೊಂದನ್ನು ತೆರೆದರೆ ಸಾಕು, ಆತನನ್ನು ತನ್ನ ಪ್ರಪಂಚಕ್ಕೆ ಕೈ ಹಿಡಿದು ಎಳೆದೊಯ್ಯುತ್ತದೆ. ಪುಸ್ತಕದ ಮುಖಪುಟದಲ್ಲಿರುವ ಹೆಸರಿನ ಜೊತೆಗೆ, ಅದರ ಅಕ್ಷರದ ವಿನ್ಯಾಸ ಕೂಡ ಆ ಪ್ರಪಂಚದ ಬಾಗಿಲಿನ ಕೀಲಿಕೈ. ಒಳಪುಟಗಳ ಕಲೆ, ಚಿತ್ರಗಳು ಆ ಪ್ರಪಂಚದ ಕಿಟಕಿಯಾದೀತು. ಮತ್ತು ಅಲ್ಲಿಂದ ಒಳಬರುವ ಬೆಳಕಲ್ಲಿ ಓದುಗನ ಪ್ರಪಂಚ ಇನ್ನಷ್ಟು ಸ್ಪಷ್ಟ, ಇಷ್ಟವಾದೀತು.

ಪುಟ ತೆರೆದಾಗ ಅಲ್ಲಿ ಅರಳುವ ಗಂಧ ಬೇರೆಲ್ಲಿಯೂ ಸಿಗದು, ಆ ಪರಿಮಳಕ್ಕಾಗಿ ನೀವು ಲೈಬ್ರೆರಿಯ ತೋಟಕ್ಕೇ ಹೋಗಬೇಕಾಗುತ್ತದೆ. ಈ ವಿಶಿಷ್ಟ ಪರಿಮಳದ ಜೊತೆಗೆ ಯಾವುದಾದರೂ ಪುಸ್ತಕ ಓದಿ ಅದರ ಭಾವಗಳನ್ನು ಮನಸ್ಸಿಗೆ ಉದ್ದೀಪ್ತಗೊಳಿಸಿದರೋ ಅದೊಂದು ಮುದ್ರೆಯಂತೆ ಮನಸ್ಸಿನಲ್ಲೇ ಉಳಿದುಬಿಡುತ್ತದೆ. ಮೆದುಳ ಪದರದೊಳಗೆ ಪರಿಮಳದ ಜೊತೆಗೆ ಓದಿದ ಭಾವವೂ ಲಾಕ್ ಆಗಿರುತ್ತದೆ. ಎಷ್ಟೋ ವರ್ಷಗಳ ನಂತರ ನೀವು ಆ ಪುಸ್ತಕ ಓದಬೇಕಿಲ್ಲ, ಸುಮ್ಮನೆ ಆ ಪರಿಮಳವನ್ನು ಮತ್ತೆ ಹಾಯ್ದರೂ ಸಾಕು, ಫಕ್ಕನೆ ಮಾಯಾದೀವಿಗೆಯಿಂದ ಹೊರಬಂದ ಜೀನಿಯಂತೆ ಯಾವತ್ತೋ ಓದಿದ ಭಾವ ಎದುರು ಬಂದು ನಿಲ್ಲುತ್ತದೆ. ಭಾವನೆಗೂ ಸುಗಂಧಕ್ಕೂ ಸಂಬಂಧವಿರುವುದು ಅರಿವಾಗುವುದು ನವಿರು ಪುಟವನ್ನು ಬೆರಳು ಪ್ರೀತಿಯಿಂದ ಸವರಿದಾಗಲೇ.

ಲೈಬ್ರೆರಿಯ ಮೌನದಲ್ಲಿ ಜ್ಞಾನದ ಅಲೆಗಳು ಓಡಾಡುತ್ತಿರುತ್ತದೆ. ಅಲ್ಲಿನ ಮೌನಕ್ಕೆ ದೇವಸ್ಥಾನದ ಭಕ್ತಿಯ ಲೇಪವಿದೆ. ಅದಕ್ಕೆ ಅದರದ್ದೇ ಆದ ಆಲಾಪವಿದೆ. ಕಿಟಕಿಯಾಚೆ ಹೆಸರಿಲ್ಲದ ಹಕ್ಕಿಯೊಂದು ಎಸೆದು ಹೋದ ಶಬ್ದಕೆ ಲೈಬ್ರೆರಿಯ ಮೌನ ವಿಚಲಿತವಾಗುವುದಿಲ್ಲ. ಒಂದು ವೇಳೆ ಈ ಲೋಕದ ಮೌನದ ಫ್ಲವರ್ ವಾಸ್ ಫಳ್ಳಂತ ಒಡೆಯುವುದು ನೋಡಲೇಬೇಕಾದರೆ ನಿರ್ವಾಹಕನನ್ನು ಗಮನಿಸಬೇಕಾಗುತ್ತದೆ. ಮೆತ್ತನೆ ಹತ್ತಿಯಂಥ ಧ್ವನಿಯಲ್ಲಿ ಮಾತಾಡಿಸಿದರೂ ಆತ ಮಾತ್ರ ತನ್ನ ಉತ್ತರವನ್ನು ಎತ್ತರದ ದನಿಯ ಗತ್ತಿನಲ್ಲೇ ನೀಡುತ್ತಾನೆ. ಸದ್ದಿಲ್ಲದ ಲೋಕದಲ್ಲಿ ಮುಳುಗಿದ ಓದುಗರು ಒಮ್ಮೆ ತಲೆಯೆತ್ತಿ ತನ್ನ ನೋಡುವರು ಅನ್ನುವ ಹೆಮ್ಮೆಯೊಂದು ಆತನ ಓರೆನೋಟದ ಎಡೆಯಲ್ಲಿರುತ್ತದೆ. ಇನ್ನು ರಸ್ತೆಯ ವಾಹನಗಳ ಹಾರ್ನಿನ ಸದ್ದು, ಕಾಲೇಜು ಯುವಕನ ಗಾಡಿಯ ಹೈ ವೀಲಿಂಗ್ ನ ಸದ್ದು, ಪಕ್ಕದಲ್ಲಿರುವ ಮೈದಾನದ ಕ್ರಿಕೆಟ್ಟಿನಲ್ಲಿ ವಿಕೆಟ್ಟು ಬಿದ್ದುದಕ್ಕೆ ಮೂಡುವ ಉದ್ಘೋಷದ ಸದ್ದುಗಳೆಲ್ಲವು ಲೈಬ್ರೆಯ ಸರಹದ್ದಿನಲ್ಲಿರುವ ಲಕ್ಷ್ಮಣ ರೇಖೆ ದಾಟಿಬಂದರೂ ಅದು ಮಹತ್ವವಿಲ್ಲದೇ ಹೋಗುವ ಮಾಯಾಲೋಕ ಇಲ್ಲಿ ಸೃಷ್ಟಿಯಾಗಿರುತ್ತದೆ. ಇನ್ನು, ಎಲ್ಲೋ ಲೇಖಕನ ಪೆನ್ ಡ್ರಾಪ್ ಸೈಲೆನ್ಸ್ ನಿಂದ ಮೂಡಿದ ಅರ್ಥದ ಸದ್ದು, ಇಲ್ಲಿನ ಪಿನ್ ಡ್ರಾಪ್ ಸಿಲೆನ್ಸಿನಲ್ಲಿ ಸ್ಪಷ್ಟವಾಗಿ ಕೇಳಬಹುದು. ಲೈಬ್ರೆರಿಯ ನಿರ್ವಾಹಕ, ಸೈಲೆನ್ಸ್ ಪ್ಲೀಸ್ ಎಂದು ಬರೆದು ಹಾಕಿದ ಬೋರ್ಡು ಗಾಳಿಗೆ ಅಲುಗಿ ಮಾಡುವ ಸದ್ದು ಸಹಿಸಿದರೂ, ಪುಟ್ಟ ಪಿಸುಗುಟ್ಟುವಿಕೆಗೆ ಭುಸುಗುಟ್ಟಬಲ್ಲ.

ಬಹುತೇಕ ಎಲ್ಲಾ ಲೈಬ್ರೆರಿಯ ಓದುಗರಲ್ಲೂ ಒಬ್ಬ ಒಂದು ಸಾಲಿನ ವಿಮರ್ಶಕ ಇದ್ದೇ ಇರುತ್ತಾನೆ. ಅವನು ಯಾವುದೋ ಗಲ್ಲಿಯ, ಯಾವುದೋ ಮನೆಯ, ಯಾವುದೋ ಕೋಣೆಯಲ್ಲಿ ಕುಳಿತೇ ಇಲ್ಲಿ ಲೈಬ್ರೆರಿಯ ಪುಸ್ತಕಗಳ ಕಪಾಟಿನ ಸಾಲುಗಳ ಮಧ್ಯೆ ಕಳೆದುಹೋದ, ಕನ್ ಫ್ಯೂಸ್ ಆದ ವ್ಯಕ್ತಿಗೆ ದಾರಿ ತೋರಬಲ್ಲ. ಇಷ್ಟಕ್ಕೂ ಅವನು ಮಾಡುವುದಿಷ್ಟೇ; ಓದಿದ ಪುಸ್ತಕಗಳಲ್ಲಿ this is a very good book ಅಂತ ಕುತ್ತಿಗೆ ಒತ್ತಿ ಬರೆಸಿರುವಂತಿರುವ ಕೈಬರಹದಲ್ಲಿ ಬರೆಯುತ್ತಾನೆ. ಹೀಗೆ ಯಾವ ಪುಸ್ತಕ ಆರಿಸಲಿ ಅಂತ ಲೈಬ್ರೆರಿಯ ಕಪಾಟಿನ ಸಾಲುಗಳ ಮಧ್ಯೆ ಕಳೆದುಹೋದ ಅಭಿಮನ್ಯುವಿಗೆ ದಾರಿ ತೋರಿಸಬಲ್ಲ.

ಇನ್ನೂ ಪುಸ್ತಕದ ಒಳದಾರಿಗಳಲ್ಲಿ ಹೋಗಿ ಇಂಥ ಒನ್ ಲೈನ್ ವಿಮರ್ಶೆಯನ್ನು ಓದುವ ವ್ಯವಧಾನವಿಲ್ಲದವರು ಮತ್ತೊಂದು ಮಾರ್ಗೋಪಾಯ ಕಂಡು ಹಿಡಿದಿದ್ದಾರೆ. ಅದು ಪುಸ್ತಕದ ಹಿಂಭಾಗದಲ್ಲಿ ಅಂಟಿಸಿರುವ ಚೀಟಿಯನ್ನು ಗಮನಿಸುವುದು. ಕೊನೆಯ ದಿನಾಂಕಗಳಿಂದಲೇ ಅರಳಿರುವ ಕೊನೆಯ ಪುಟವದು. ಒಂದು ಪುಸ್ತಕ ಊರಿನ ಒಂದು ಮೂಲೆಯ ಮನೆಯಲ್ಲಿನ ಕೋಣೆಯಿಂದ ಮುಕ್ತಿ ಪಡೆವ, ಮತ್ತೊಂದ್ಯಾವುದೋ ಕೋಣೆಯೊಳಗೆ ಹೋಗಲು ಅವಕಾಶಕ್ಕೆ ಅನುಮತಿ ಸಿಗುವ ದಿನಾಂಕಗಳವು. ಅವೇ ಪುಸ್ತಕದ ಪಾಲಿನ ಸ್ವಾತಂತ್ರ್ಯದಿನಗಳು. ಆ ಪುಟ ಪೂರ್ತಿ ದಿನಾಂಕಗಳೇ ತುಂಬಿದ್ದರೆ ಅಂಥ ಪುಸ್ತಕವನ್ನು ಹೆಚ್ಚು ಓದುಗರು ಕೊಂಡೊಯ್ದಿದ್ದಾರೆ ಹಾಗಿದ್ದಾಗ ಇದು ಬಹುಶಃ ಚೆನ್ನಾಗಿರುವ ಪುಸ್ತಕ ಅಂತಲೇ ಆತ ಭಾವಿಸುತ್ತಾನೆ. ಕೋಟ್ಯಾಧಿಪತಿಯಲ್ಲಿನ ಆಡಿಯೆನ್ಸ್ ವೋಟಿಂಗ್ ಮಾದರಿಯಲ್ಲಿ ಆ ಪುಸ್ತಕವನ್ನೇ ಆರಿಸಿ ಒಯ್ಯುತ್ತಾನೆ.ಇಂಥದ್ದೊಂದು ಉಪಾಯವನ್ನು ಕಂಡುಹಿಡಿದ ಅಂಥ ಓದುಗರನ್ನು ಲೈಬ್ರೆರಿಯೆಂಬ ಭೋಧನ ವೃಕ್ಷದ ಕೆಳಗೆ ಜ್ಞಾನೋದಯಗೊಂಡ ಬುದ್ಧರೆನ್ನಬಹುದು.

ಯಾವುದೋ ಒಂದು ಬೆಡ್ರೂಮಿನಲ್ಲಿ ಓದುತ್ತಾ ಓದುತ್ತಾ ಓದುಗ ಇನ್ನೇನು ಪುಸ್ತಕದ ಮೇಲೆಯೇ ಬಿದ್ದು ಬಿಡುತ್ತಾನೆ ಅನ್ನುವಾಗ ಪುಸ್ತಕಗಳಲ್ಲಿನ ಅಂಡರ್ ಲೈನ್ ಆಗಿರುವ ಸಾಲುಗಳು ಎಚ್ಚರಿಸುತ್ತದೆ. ಓದುತ್ತಿದ್ದೇನೆಂಬ ಭಾವದಲ್ಲಿದ್ದುಕೊಂಡು ಓದುವ ಭರದಲ್ಲಿ ಅರ್ಥದ ಹಳಿತಪ್ಪಿ ಸಾಗುವ ಓದುಗನನ್ನೂ ಇಂಥ ಅಡಿಗೆರೆಗಳು ಎಬ್ಬಿಸುತ್ತಿರುತ್ತದೆ. ಮತ್ತೆ ರಸದ ಹಳಿ ಮೇಲೆ ಯಾರದೋ ಅನುಭವವು ನಮ್ಮ ಅನುಭೂತಿಯಾಗಬಲ್ಲಂಥ ಗಮ್ಯದೆಡೆಗೆ ಸಾಗುವ ಉಮೇದು ಕೊಡುತ್ತದೆ.

ಹಾಗೇನೆ ಕೊನೆ ಪುಟದಲ್ಲಿನ ಸಸ್ಪೆನ್ಸ್ ಒಂದನ್ನು ಮೊದಲನೇ ಪುಟದಲ್ಲೇ ಬರೆವ ಚಾಳಿಗೂ ಓದುಗ ಸಿಲುಕಬೇಕಾಗುತ್ತದೆ. ಸಸ್ಪೆನ್ಸ್ ಸಿಕ್ಕಿದ ಸಿಟ್ಟಿನಲ್ಲೂ (ಏನಾದರೂ ಸಿಕ್ಕಿದರೂ ಸಿಟ್ಟಾಗುವ ಸಂಗತಿ ಬಹುಶಃ ಇದು ಒಂದರಲ್ಲೇ ಇರಬೇಕು!) ಓದುಗನಿಗೆ ಒಳಸುಳಿಯಲ್ಲಿ ಗಮ್ಯಕ್ಕಿಂತ ಗಮ್ಯದೆಡೆಗೆ ಸಾಗುವ ದಾರಿ ಕೂಡ ಮಹತ್ವದ್ದು ಎಂಬ ಪಾಠವೂ ಸಿಗುತ್ತದೆ. ಚೋಮನ ದುಡಿ, ಮಲೆಗಳಲ್ಲಿ ಮದುಮಗಳು ಪುಸ್ತಕದಲ್ಲಿ ಎಂಥ ಸಸ್ಪೆನ್ಸ್ ಇರುತ್ತದೆ, ಆದರೂ ಮತ್ತೆ ಮತ್ತೆ ಓದಿಸಿಕೊಳ್ಳಲು ಕಾರಣ ಅದು ಸೃಷ್ಟಿಸಿದ ಮಾಯಾಲೋಕ ಮತ್ತು ಅದು ವಿವರಿಸುವ ಜೀವನಕ್ರಮ, ನಿರೂಪಣೆಯ ವಿನ್ಯಾಸದಲ್ಲೇ ಇದೆ.

ಪುಸ್ತಕ ಸೃಷ್ಟಿಸಿದ ಮಾಯಾಲೋಕದೊಳಗೆ ಸಿಕ್ಕಿ ದಾರಿತಪ್ಪಿದವರ ಮತ್ತೆ ಕೆಲವುಸಲ ಓದಿನ ಹಾದಿಯಲ್ಲಿ ಸುಸ್ತಾದವರ ತಂಪಿನ ನೆಳಲಿನ ನೆನಪಿಗೆಂದೆ ಕೆಲವು ಪುಸ್ತಕಗಳಲ್ಲಿ ಕಿವಿಹಿಂಡಿದ ಪುಟಗಳಿರುತ್ತದೆ. ಆ ಪುಟಗಳು ಓದುಗರ ಪಾಲಿನ ಇಂಟರ್ ವಲ್. ಕೆಲವರು ಹತ್ತಿರದಲ್ಲಿ ಪೆನ್ಸಿಲ್ ಇಟ್ಟುಕೊಂಡಿರದ ತಮ್ಮ ತಪ್ಪಿಗೆ ಚಂದದ ಕೊಟೇಶನ್ ಇರುವ ಪುಟದದ ಕಿವಿ ಹಿಂಡಿ ಬಿಟ್ಟಿರುತ್ತಾರೆ.

ಹೊಸಾ ಲೇಖಕನೊಬ್ಬ ವಿಶಾಲ ಲೈಬ್ರೆರಿಯ ಕಪಾಟಿನ ಮಧ್ಯೆಯಲ್ಲಿ ತನ್ನ ಪುಸ್ತಕವೊಂದನ್ನು ತುಂಬು ಸಂಕೋಚದಿಂದ ಹಿಡಿದು, ಎಸ್ಸೆಲ್ಸಿ ಹುಡುಗನೊಬ್ಬ ರಿಸಲ್ಟ್ ನೋಡುವಾಗಿನಂಥಹ ಹಿಂಜರಿಕೆಯಿಂದ ಕೊನೆಭಾಗದಲ್ಲಿರುವ ಕೊನೆದಿನಾಂಕಗಳ ಪಟ್ಟಿ ಮೇಲೆ ಕಣ್ಣಾಡಿಸುವಾಗ ಆತನ ಕಣ್ಣುಗಳು ಖುಷಿಯಿಂದ ಪ್ರದೀಪ್ತವಾಗಲಿ. ಮನದ ನಾಲಿಗೆಗೆ ಓದಿನ (ಅಭಿ)ರುಚಿ ಹತ್ತಿಸಿದ ಅಡುಗೆಭಟ್ಟನ ಖುಷಿ ಅವನದಾಗಲಿ. ಸಾಲು ಕಪಾಟಿನಲ್ಲಿರುವ ಯಾವುದೇ ಲೇಖಕನ ಯಾವುದೇ ಪುಸ್ತಕಗಳಿಗೆ ಓದಿಲ್ಲದ ಗುರುತಿನಂತಹ ಧೂಳು ಅಂಟದಿರಲಿ.

ಯಾಕೆಂದರೆ,

ಮುಂಬೈನ ಬಾಂದ್ರಾದಲ್ಲೋ, ಮಂಗಳೂರಿನ ಬಂದರಲ್ಲೋ, ಮನೆಮೂಲೆಯ ಟೇಬಲಿನಲ್ಲೋ ಕುಳಿತು ಬರೆವ ಲೇಖಕನ ಹೊಳಹು, ಭಾವವಿನ್ಯಾಸ, ಜೀವನದ್ರವ್ಯವೊಂದು ಇನ್ಯಾವುದೋ ಹಳ್ಳಿಯಲ್ಲಿ, ವಿಶಾಲ ಹಜಾರದಲ್ಲಿ, ಟೀವಿಯ ಸೆಳೆತವನ್ನೂ ಹತ್ತಿಕ್ಕಿ, ಪಕ್ಕಕ್ಕಿರಿಸಿ, ತನ್ನೊಳಗಿನ ಮೌನದಲ್ಲಿ ಕುಳಿತು ಓದುವ ಓದುಗನ ಮನದಲ್ಲಿ ಮೂಡಿಸುವ ಬೆಳಕಿದೆಯಲ್ಲ, ಅದು ವಿಶಿಷ್ಟ ಮತ್ತು ವಿಶೇಷವಾದ್ದು.

 

(‘ಸಖಿ’ ಪಾಕ್ಷಿಕದಲ್ಲಿ ಪ್ರಕಟವಾಗಿದೆ.)

ಮಹಾನಗರವೆಂದರೆ ಸುಮ್ಮನೆ ಅಲ್ಲ. ಬಟ್ಟೆಯನ್ನು ಶಿಲೆಗಲ್ಲಿಗೆ ಕುಟ್ಟಿ, ಬ್ರಷ್ ನಲ್ಲಿ ಉಜ್ಜಿ, ನೀರಲ್ಲಿ ಮುಳುಗಿಸಿ, ಅಡಿಮೇಲೆ ಮಾಡಿ ಸುಡುಬಿಸಿಲಿಗೆ ನೇತು ಹಾಕುತ್ತೇವಲ್ಲ, ಹಾಗೆ ನಮ್ಮೊಳಗೆ ಹೊಳಪು ತರಲು ಅದು ಮಾಡದಿರುವ ಕಸರತ್ತೇ ಇಲ್ಲ.

ಅವನೋ ಹಳ್ಳಿಯಿಂದ ಬಂದವನು. ಮಹಾನಗರದಲ್ಲಿ ಹೆಜ್ಜೆಯಿಟ್ಟ ಮೊದಲ ದಿನವೇ ಕಂಡಕ್ಟರು ಚೇಂಜ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಬೈದ. ಕಾಲೇಜ್ ಹುಡುಗಿಯೊಬ್ಬಳು ಸಿಗ್ನಲ್ ಕ್ರಾಸ್ ಮಾಡಿ ಟ್ರಾಫಿಕ್ ಪೋಲಿಸ್ ಕೈಲಿ ಸಿಕ್ಕಿ ಹಾಕಿಕೊಂಡಾಗ ಸಾರ್, ಎಕ್ಸಾಮ್ ಗೆ ಹೊರ್ಟಿದೀನಿ ಈಗ್ಲೇ ತಡಾ ಆಯ್ತು ಅಂತ ಹಸೀ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದನ್ನು ನೋಡಿದ. ರಸ್ತೆಯಲ್ಲಿ ನಡೆವ ಚಿಕ್ಕ ಪುಟ್ಟ ಆಕ್ಸಿಡೆಂಟುಗಳಲ್ಲಿ ಬಾಯ್ಮಾತು ಚೆನ್ನಾಗಿದ್ದವನದೇನೂ ತಪ್ಪಿರಲ್ಲ ಎಂಬುದನ್ನು ಅರಿತ. ಥಿಯೇಟರ್ ನಲ್ಲಿ ಟಿಕೇಟ್ ಸಿಗದೇ ಒದ್ದಾಡುತ್ತಿದ್ದ ಸಮಯದಲ್ಲಿ ಪಕ್ಕದಲ್ಲಿ ನಿಂತಿದ್ದ ಮಿನಿಸ್ಟ್ರ ಮಗನಿಗೆ ಒಂದು ಫೋನ್ ಕಾಲ್ ಮೂಲಕ ಟಿಕೇಟ್ ಹೇಗೆ ಸಿಕ್ಕಿತು ಎಂದು ಅಚ್ಚರಿ ಪಟ್ಟ. ಟ್ರಾಫಿಕ್ಕಿನಿಂದಾಗಿ ಗಂಟೆಗಟ್ಟಲೆ ಬಸ್ಸೊಳಗೇ ಇರಬೇಕಿದ್ದರೂ ಇದು ಸಾಮಾನ್ಯವೇ ಅಂತ ಸುಮ್ಮನೆ ತಾಳ್ಮೆಯಿಂದ ಕುಳಿತ ಜನರನ್ನು ಕಂಡ. ಒಂದು ಕಾಫಿಗೂ ಹನ್ನೆರಡು ರೂಪಾಯಿ ಕೊಡಬೇಕಾದ, ರೂಮು ರೆಂಟಿಗೇ ಮೂರು ಸಾವಿರ ನೀಡಬೇಕಿರುವ ಈ ಊರಿಗೆ ದೂರದ ಬೀದರಿನಿಂದ ಆರು ಸಾವಿರ ಪಗಾರದ ಸಪ್ಲಾಯರ್ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿಯ ಜೊತೆ ಕುಶಲೋಪರಿ ಮಾತಾಡಿದ. ನಿನ್ನೆಯಷ್ಟೇ ಪರಿಚಯವಾದ ಒಬ್ಬ ನೇರವಾಗಿ ಲಜ್ಜೆಯಿಲ್ಲದೇ ಒಂದೈದು ಸಾವ್ರ ಸಾಲ ಇದ್ರೆ ಕೊಡ್ತೀಯಾ ಗುರೂ, ನಾಳೆ ವಾಪಸ್ ಮಾಡ್ಬಿಡ್ತೀನಿ ಅಂತ ಆತ್ಮವಿಶ್ವಾಸದಿಂದ ಹೇಳುವುದನ್ನು ಸಾಲ ಕೊಡಲಾಗದ ಗಿಲ್ಟಿನಿಂದ ಕೇಳಿದ. ಇಸ್ತ್ರಿ ಅಂಗಡಿಯಲ್ಲಿ ಎಂಟು ರೂಪಾಯಿ ಬಿಲ್ಲಾದಾಗ ನೀಡಿದ ಹತ್ತು ರೂಪಾಯಿಗೆ ಎರಡು ರೂಪಾಯಿ ವಾಪಸ್ಸು ಬರುವುದೇ ಇಲ್ಲ. ಚೇಂಜಿಲ್ಲ ಎಂಬ ಎರಳ್ಡು ರೂಪಾಯಿ ಬೆಲೆಬಾಳದ ಉತ್ತರ ಸಿಗುತ್ತದೆ. ಚೀಟಿಯಲ್ಲಿ ಕಂಡೆಕ್ಟರು ಬರೆದುಕೊಡುವ ಬಾಕಿ, ತಾನು ಇಳಿವ ಸ್ಟಾಪ್ ಬಂದಾಗ ಕಂಡಕ್ಟರು ಬಸ್ಸಿನ ಮುಂತುದಿಯಲ್ಲಿರುತ್ತಾನೆ. ಆ ರಶ್ಶಿನಲ್ಲಿ ಇಂಥ ಅನೇಕ ಘಟನೆಗಳೇ ಕಂಡಕ್ಟರನ ‘ಗಳಿಕೆ’ಗಳು.

ಇಲ್ಲಿ ಮಾಡಿದ ತಪ್ಪನ್ನೂ ಆತ್ಮವಿಶ್ವಾಸದಿಂದ ಹೇಳುವುದನ್ನು, ಸುಳ್ಳನ್ನು ಸತ್ಯದ ಮೇಲೆ ಪ್ರಮಾಣ ಮಾಡಿ ಹೇಳೋದನ್ನು ಕಲೀಬೇಕು ಬಾಸೂ… ಮೊದಲೆಲ್ಲ ಸಿಗ್ನಲ್ ಎಗರಿಸಿ ಗಾಡಿ ಓಡಿಸಿದರೆ ಟ್ರಾಫಿಕ್ ಪೋಲಿಸ್ ಗಮನಿಸದೇ ಇದ್ದರೂ ತಾನೇ ಹೋಗಿ ಫೈನ್ ಕಟ್ಟಿದ್ದೆ ಅನ್ನುವುದು ಹೀರೋಯಿಸ್ಮ್ ಆಗಿತ್ತು. ಈಗ ಅದನ್ನು ದಡ್ಡತನ ಅಂತಾರೆ. ಹಾಗೆ ಮಾಡಿದವನನ್ನು ಎಲ್ಲರೂ ಅನುಕಂಪದಿಂದ ನೋಡ್ತಾರೆ. ಈಗ ಸಿಗ್ನಲ್ ಜಂಪ್ ಮಾಡಿ ಅದನ್ನ ಯಾವ ರೀತಿ ಸುಳ್ಳು ಹೇಳಿ ಫೈನ್ ನಿಂದ ಬಚಾವಾದೆ ಅಂತ ಯಾರಿಗಾದ್ರೂ ವಿವರಿಸಿ ನೋಡು. ಜಗತ್ತಿನಲಿ ನೀನೇ ದೊಡ್ಡ ಬುದ್ಧಿವಂತ ಅನ್ನೋ ಧಾಟಿಯಲಿ ನೋಡ್ತಾರೆ. ಇದು ಈಗಿನ ಬದುಕು ಬಾಸೂ.. ಬೇಗ ಅಪ್ಡೇಟ್ ಆಗಬೇಕು.. ಅಂತ ರೂಂಮೇಟ್ ಅನ್ನುವುದನ್ನು ವಿಪರೀತ ಮುಗ್ದತನದಲ್ಲಿ ಕೊನೆಯ ಸಾಲಿಗೆ ಬರುವಷ್ಟರಲ್ಲಿ ಒಂದಿಷ್ಟು ಆತಂಕವನ್ನೂ ಬೆರೆಸಿ ನೋಡುತ್ತಾನೆ.

ಅಪ್ಪಾ, ನೀ ಆರಾಮಿದ್ದಿ ಅಲ್ಲ. ಬೀಪಿ ಟ್ಯಾಬ್ಲೆಟ್ಟು ತಗೊಳ್ಳೊದನ್ನ ಮರೀಬೇಡ. ನಾ ಚೆನ್ನಾಗಿದ್ದ ಹಾಗೆ ಇದ್ದೇನೆ. ಈ ಊರಲ್ಲಿ ಯಾರೂ ನನ್ನವರು ಅನ್ನಿಸುವುದಿಲ್ಲ. ಈ ಊರ ಜನರ ಮುಂದೆ ನಾನು ಹದಿನೈದು ವರ್ಷ ಹಿಂದಿನವನಂತೆ ಅನ್ನಿಸುತ್ತಿದ್ದೇವೆ. ನನ್ನ ನಡಿಗೆ ಈ ಊರಿನ ಓಟದ ಮುಂದೆ ಏನೂ ಅಲ್ಲ ಅನಿಸ್ತಿದೆ. ಇಲ್ಲಿ ಬದುಕಲಿಕ್ಕೆ ಸುಳ್ಳು ಹೇಳೋದು ಮಾತ್ರ ಅಲ್ಲ, ಸುಳ್ಳು ಹೇಳುವವರನ್ನು ಗುರುತಿಸುವ ಕಲೇನೂ ತಿಳಿದಿರ್ಬೇಕು. ಮುಖದ ಯಾವ ನೆರಿಗೆಯಲ್ಲೂ ಗಿಲ್ಟಿನ ಲವಲೇಷವೂ ಸುಳಿಯದಂತೆ ಸುಳ್ಳು ಹೇಳೋದಕ್ಕೆ ಬರಬೇಕು.

ಬೆಳಿಗ್ಗೆ ಆಗ್ತಾ ಇದ್ದ ಹಾಗೆ ಎದುರಾಗೋ ಮಂದಿಯಲ್ಲಿ ನನ್ನ ನಾನು ರಕ್ಷಿಸಿಕೊಳ್ತಾ ಬದುಕಬೇಕು. ಒಂಚೂರು ಮೈಮರೆತರೂ ಮೋಸಹೋಗ್ತೀನಿ. ತುಂಬಾ ಕಷ್ಟವಾಗುತ್ತಿದೆ ಅಪ್ಪಾ, ನಾನು ಊರಿಗೆ ಬಂದುಬಿಡುತ್ತೇನೆ. ನೀನು ನನ್ನ ಮೇಲೆ ಜೋಡಿಸಿಟ್ಟ ಅಪಾರ ಕನಸುಗಳ ತೀರಿಸಲಾದದೇ ಹೋದುದಕ್ಕೆ ಇದೊಂದು ಸಲ ಕ್ಷಮಿಸಿಬಿಡು. ನನ್ನನ್ನೂ ನಿನ್ನ ಜೊತೆಯಲೇ ಇರಲು ಬಿಡು.

ಹೀಗೆ ಬರೆದ ಪತ್ರವೊಂದನ್ನು ಅಂಚೆಪೆಟ್ಟಿಗೆ ಹಾಕಲು ಹೋದಾಗ ತಂದೆಯ ಸೋತ ಮುಖ ಎದುರಿಗೆ ಬಂದಂತಾಗಿ ಭಯದಿಂದ ಹರಿದು ಹಾಕುತ್ತಾನೆ.

ಪಾರ್ಕಿನ ಮೂಲೆಯೊಂದರಲ್ಲಿ ಕೂತು ಈ ಊರಲ್ಲಿ ಪಳಗಬೇಕೆಂದರೆ ಒಂದೋ, ಒಬ್ಬೊಬ್ಬರಿಂದಲೂ ಇಂಥ ಅನೇಕ ಕಲೆಗಳನ್ನು ಕಲಿತು ಅವರಲ್ಲೊಬ್ಬರಾಗಬೇಕು. ಇಲ್ಲವೇ, ವ್ಯವಸ್ಥೆಯನ್ನು ದೂರಿಕೊಂಡು ಮೋಸಹೋಗುತ್ತಾ ಬದುಕಬೇಕು. ಈ ಎರಡು ರಸ್ತೆ ಸೇರುವ ಕಾರ್ನರಿನಲ್ಲಿ ಅರ್ಧ ಟೀ ಕುಡಿಯುತ್ತಾ ಆಲೋಚಿಸುತ್ತಿದ್ದ ಅವನು.

ಮಹಾನಗರ, ಬಟ್ಟೆಯನ್ನು ತಿರುವಿಹಾಕಿ ಸುಡುಬಿಸಿಲಲಿ ಒಣಗಿಸಲನುವಾಯ್ತು.

ಅಪ್ಪನ ಬೈಗುಳ ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಕಾರಣ ಚಿಕ್ಕದು, ಅಕ್ಕನಿಂದ ಪತ್ರ ಬಂದಿತ್ತು ಅಕ್ಕನೆಂದರೆ ನನ್ನ ಪಾಲಿಗಂತೂ ದೊಡ್ಡ ಧೈರ್ಯಸ್ಥೆ! ಅಷ್ಟುವರ್ಷ ಪ್ರೀತಿಯಿಂದ ಸಾಕಿದ ಅಪ್ಪನನ್ನು ಧಿಕ್ಕರಿಸಿ ಯಾವುದೋ ಹುಡುಗನ ಪ್ರೀತಿಯ ಮಾಯಾಮೃಗಕ್ಕೆ ಆಸೆಪಟ್ಟು, ಕಟ್ಟು ಪಾಡಿನ ಲಕ್ಷಣ ರೇಖೆಯನ್ನು ದಾಟಿದವಳು. ಸದಾ ಮುಗುದೆಯಂತೆ ಮಾಡುತ್ತಿದ್ದ ಅಕ್ಕನಿಗೆ ಅಂತಹ ಮಾನಸಿಕ ಶಕ್ತಿಯನ್ನು ನೀಡಿದ ಮಹಾನ್ ಶಕ್ತಿ ಪ್ರೇಮವೆಂದು ಅಚ್ಚರಿಪಟ್ಟಿದ್ದೆ!

ಅಪ್ಪನ ಕೋಪಕ್ಕೆ ತಲೆಕೆಡಿಸಿಕೊಳ್ಳದೆ ’ಆದದ್ದು ಆಗಿ ಹೋಯಿತು, ಇನ್ನಾದರು ಒಟ್ಟಿಗೆ ಇರೋಣ….’ ಎಂಬ ಸಂಧಾನ ಪತ್ರ ಆಗಾಗ್ಗೆ ಕಳುಹಿಸುತ್ತಲೇ ಇರುತ್ತಾಳೆ. ಈ ಪತ್ರಗಳ ಬಿಸಿಗೆ ಅಪ್ಪನ ಕೋಪದ ಮಂಜುಗಡ್ಡೆ ಇನ್ನು ಕರಗಲೇ ಇಲ್ಲ. ಮತ್ತೆ ಇನ್ನೊಂದು ಪತ್ರ ಹಾಕಿದ್ದಳು.

ಅವಳಿಗಾಗಲೇ ಈ ಬೈಗುಳ. ನನಗೆ ಯಾಕೋ ಕಸಿವಿಸಿ, ಅವರು ಬೈದ ಮಾತುಗಳು ನನಗೂ ತಾಗುತ್ತಿದ್ದವು. ಪ್ರೇಮವೆಂದೊಡನೆ ಎಲ್ಲರ ಮನೆಗಳಲ್ಲಿಯೂ ತಂದೆ ತಾಯಿಗಳ ಮಾಮೂಲಿ ಮಾತುಗಳಿರಬಹುದು ಆದರೆ ನಿಜವಾದ ಪ್ರೀತಿಯಲ್ಲಿ ತೋಯ್ದಿರುವ ನನ್ನಂತವಳಿಗೆ ಇದು ಚುಚ್ಚುವ ಈಟಿಯಂತದ್ದು. ಅಸಲು ದೊಡ್ಡವರಿಗೆ ಪ್ರೀತಿಯ ಮೇಲಿಷ್ಟು ದ್ವೇಷ ಯಾಕೆ ಅಂತ ಅರ್ಥವಾಗುವುದಿಲ್ಲ. ಹರೆಯದ ವಯಸ್ಸಿನಲ್ಲಿ ಅವರೂ ಪ್ರೇಮಿಸಿರಲಿಲ್ಲವೇ? ಪ್ರೇಮದ ಗಾಢತೆ, ಅದರ ಸವಿಸ್ಪರ್ಶ ಅವರೂ ಅನುಭವಿಸಿರಲಿಲ್ಲವೇ? ಆದರೂ ಇದನ್ನೆಲ್ಲ ಧೈರ್ಯವಾಗಿ ನಿರ್ಭಯತೆಯಿಂದ ತಂದೆಯೆದುರು ಹೇಳುವಂತಹ ಅಕ್ಕನ ಧೈರ್ಯ ಧಿಮಾಕು ನನ್ನ ಬಳಿ ಇಲ್ಲ. ಆ ಭಯ ನಿಜಕ್ಕೂ ಧೈರ್ಯವಿಲ್ಲದೆಯಷ್ಟೇ ಅಲ್ಲ, ಇಷ್ಟು ದಿನ ತಂದೆ ತೋರಿದ ಪ್ರೀತಿಯೆ ಅಂತಹ ಮಾತಾಡದಂತೆ ಕಟ್ಟಿಹಾಕಿರುವುದು.

ಹೌದು…. ತಂದೆಗೆ ನನ್ನ ಮೇಲೆ ಅಗಾಧ ಪ್ರೀತಿ. ಅಕ್ಕ ಹೋದ ಮೇಲಂತೂ ಅವರಿಗೆ ನನ್ನ ಮೇಲೆ ಪ್ರೀತಿ ಇಮ್ಮಡಿಯಾಗಿದೆ. ಯಾವ ವಿಷಯಕ್ಕೂ ನನ್ನ ನಿರ್ಧಾರಕ್ಕೆ ಅಡ್ಡಿ ಬರುವವರಲ್ಲ ಅಲ್ಲದೇ ಜಬ್ದಾರಿಯಿಂದ ಬೆಳೆಸಿದ್ದರು. ಆದರೆ ಮದುವೆ ವಿಷಯಕ್ಕೆ ಬಂದರೆ
ಮಾತ್ರ ನನಗೆ ನಿರ್ಣಯದ ಸ್ವಾತಂತ್ರ್ಯ ನೀಡುವುದು ಅನುಮಾನವೇ! ಅದಕ್ಕೆ ಕಾರಣವನ್ನೂ ಆಗಾಗ್ಗೆ ಹೇಳುತ್ತಿರುತ್ತಾರೆ. ‘ಹರೆಯಕ್ಕೆ ಬಂದವರ ಕಣ್ಣು ಕುರುಡಂತೆ’. ಆದರೆ ನನಗೆ ಈ ಅಭಿಪ್ರಾಯದ ಬಗ್ಗೆ ಕೊಂಚವೂ ನಂಬಿಕೆ, ಒಪ್ಪಿಗೆಯಿಲ್ಲ.

ಪಕ್ಕದಲ್ಲೇ ಬಿದ್ದಿದ್ದ ಎಕನಾಮಿಕ್ಸ್ ಪುಸ್ತಕದ ಮಧ್ಯಭಾಗದಲ್ಲಿ ಬಚ್ಚಿಟ್ಟಿದ್ದ ಅವನ ಫೋಟೊ ಕೈಗೆತ್ತಿಕೊಂಡೆ. ಅವನ ತುಟಿಯಂಚಿನ ಮುಗ್ಧ ನಗು ಸೂಜಿಗಲ್ಲಂತೆ ಸೆಳೆಯುತ್ತಿತ್ತು. ಕಣ್ಣ ಹೊಳಪು, ಆಕರ್ಷಣೆಗೆ ಮನ ತಲೆಬಾಗಿತ್ತು. ನಿಜವಾಗಿಯೂ ಹೇಳೆಬೇಕೆಂದರೆ ಆತನ ಸೌಂದರ್ಯವನ್ನು ಇಷ್ಟಪಟ್ಟು ಪ್ರೇಮಿಸಿದ್ದಲ್ಲ. ಸೌಂದರ್ಯಕ್ಕೆ ಮೀರಿದ ರಹಸ್ಯವೇನೋ ಆತನಲ್ಲಿದೆ. ಅದು ಆತನ ನಡೆ, ಮಾತು, ನಗು, ದಿರಿಸು ಏನೂ ಆಗಿರಬಹುದು. ಒಟ್ಟಿನಲ್ಲಿ ಆತನೆಂದರೆ ನಂಗಿಷ್ಟ.

ಆದರೆ ಇವತ್ತಿಗೂ ಚಿಕ್ಕ ಅನುಮಾನದ ಮೊಳಕೆ ಎದೆಯ ಭೂಮಿಯಲ್ಲಿ ಇದ್ದೇ ಇದೆ. ಅದೇನೆಂದರೆ, ಆತನೊಳಗೆ ನನ್ನ ಬಗ್ಗೆ ಪ್ರೇಮದ ಭಾವನೆ ಇದೆಯಾ ಎಂದು. ಯಾಕೆಂದರೆ ಯಾವತ್ತೂ ಅದನ್ನು ಅವನ ಬಳಿ ಕೇಳಿಲ್ಲ. ನನ್ನ ಇಂಟ್ರಾವರ್ಟ್ ಮನಸತ್ವಕ್ಕೆ ಅದು ಸಾಧ್ಯವಾಗುತ್ತದಾ ಇಲ್ಲವಾ ಎಂಬ ಭಯ ನನ್ನಲ್ಲಿದೆ. ಅವನು ಮೊದಲು ಭೇಟಿಯಾದಾಗಿನಿಂದ ಇಲ್ಲಿಯವರೆಗೂ ಒಮ್ಮೆ ಅದೂ ಕಾಲೇಜ್ ಡೇ ದಿನದ ಫೋಟೊ ಆಲ್ಬಮ್‌ನಿಂದ ಆತನ ಫೋಟೊ ಕದ್ದಿದ್ದನ್ನು ಬಿಟ್ಟರೆ, ಪ್ರೇಮ ನಿವೇದನೆಯ ಪ್ರಯತ್ನವಾಗಲೀ, ಲೆಟರ್ ಮೂಲಕ ಹೇಳುವ ಧೈರ್ಯವಂತ ನಿರ್ಧಾರವಾಗಲೀ ಮಾಡಿದ ನೆನಪಿಲ್ಲ. ಆದರೆ ಆತ ನನ್ನೆಡೆಗೆ ನೋಡುವ ನೋಟದಲ್ಲಿನ ಚಿಲುಮೆ, ನೀಡುವ ಗೌರವ, ಯಾವತ್ತೂ ನನ್ನ ಹೃದಯದಲ್ಲಿ ‘ಅವನೂ ಪ್ರೀತಿಸುತ್ತಿದ್ದಾನೆ’ ಎಂಬ ಮಾತು ಮಾರ್ದವಗೊಳ್ಳುವಂತೆ ಮಾಡುತ್ತಿರುತ್ತದೆ.

ಕ್ಲಾಸಿನಲ್ಲಿ ಕೆಲವೊಮ್ಮೆ ಆತನನ್ನು ಗಮನಿಸುತ್ತಿರುತ್ತೇನೆ. ಯಾರ ಬಳಿಯೂ ಹೆಚ್ಚು ಮಾತಿಲ್ಲ. ಅವನಾಯಿತು. ಓದಾಯಿತು ಎಂಬಂತಿರುತ್ತಾನೆ. ನನ್ನಂತೆಯೇ ಶುದ್ಧ ಇಂಟ್ರಾವರ್ಟ್ ಇರಬೇಕು. ಅವನೊಳಗಿರುವ ನನ್ನ ಬಗೆಗಿನ ಪ್ರೇಮವನ್ನು ತೋಡಿಕೊಳ್ಳಲು ಅದೇ ಅಡ್ಡಿ ಬರುತ್ತದೆ ಅಂದುಕೊಂಡು ವಿಲಪಿಸುವ ಹೃದಯಕ್ಕೆ ಸಮಾಧಾನ ಹೇಳುತ್ತಿರುತ್ತದೆ.

ಅವನನ್ನು ಭೇಟಿ ಮಾಡಿದ ಕ್ಷಣಗಳೆಲ್ಲ ಅವಿಸ್ಮರಣೀಯ. ನನ್ನೆಡೆಗೆ ಆತ ನೋಡಿದ ಚಿಕ್ಕ ನೋಟವನ್ನೂ ಕೂಡ ಮನಸ್ಸು ರೆಕಾರ್ಡ್ ಮಾಡಿಟ್ಟುಕೊಂಡಿರುತ್ತದೆ. ಅದನ್ನು ಮನಸ್ಸು ಮೆಲುಕು ಹಾಕಿದಾಗಲೆಲ್ಲ ಹೃದಯ ನವಿಲುಗರಿಬಿಚ್ಚಿ ಕುಣಿದಾಡುತ್ತದೆ. ಅಬ್ಬ! ಪ್ರೇಮವೇ, ನಿನ್ನ ಒಂದು ಚಿಕ್ಕಲಹರಿ ಇಷ್ಟು ಗಾಢವಾಗಿ ಮನ ತಟ್ಟುತ್ತಾ ಎಂದು ಚಿಕ್ಕ ಮಗುವಿನಂತೆ ಅಚ್ಚರಿ ಪಡುತ್ತೇನೆ! ಅಂತಹ ಅನುಭವ ಪಡೆಯದ ಜೀವಗಳನ್ನು ನೋಡಿ ಗೆಲುವಿನ ನಗೆ ಮೂಡುತ್ತದೆ ನನ್ನೊಳಗೆ.

ಸದ್ಯಕ್ಕೆ ಅವನ ಸ್ನಿಗ್ಧ ನಗುವಿನ ಚಿಕ್ಕ ಫೋಟೋನೇ ನನ್ನ ಆಸ್ತಿ. ಅವನ ನಗುವಿನೊಳಗೆ ಮುಳುಗಿ ಒದ್ದೆ ತಂಪಿನ ಸುಲ್ಹ ಅನುಭವಿಸುತ್ತೇನೆ. ಖುಷಿಯಾದಾಗ ದುಃಖವಾದಾಗ ಏನೂ ಭಾವನೆ ಮೂಡದಿರುವಾಗ – ಯಾವಾಗಲೂ ಅವನೊಳಗೇ ಇರುವಾಸೆ ಮನಸ ಬಸಿರಿಗೆ. ಈ ಆಸೆಯ ಬಸಿರಿಗೆ ಹೆರಿಗೆ ಯಾವಾಗ?

ಸ್ವಲ್ಪ ದಿನ ಕಳೆಯಿತು. ಒಮ್ಮೆ ತಂದೆ ಮನೆಗೆ ಬರುವಾಗ ಎಂದಿನಂತಲ್ಲದೆ ಬಹಳ ಉತ್ಸಾಹದಿಂದ ಬಂದರು. ಅವರು ತಂದ ಸುದ್ದಿಗೆ ನನ್ನ ಮನಕ್ಕೆ ಬುದ್ಧಿ ಭ್ರಮಣೆಯಾದಂತಾಯಿತು. ನನ್ನ ಮದುವೆಗೆ ಯಾವುದೋ ಹುಡುಗನನ್ನು ಹುಡುಕಿದ್ದು ನನ್ನ ನೋಡಲು ಒಂದೆರಡು ದಿನಗಳಲ್ಲಿ ಬರುತ್ತಾನಂತೆ. ಒಂದೇ ಉಸಿರಿಗೆ ರೂಮಿಗೆ ಓಡಿದೆ. ಅವರು ನಾಚಿಕೆ ಅಂದುಕೊಂಡರು. ಬಾಗಿಲು ಹಾಕಿಕೊಂಡು ಹಾಸಿಗೆಯಲ್ಲಿ ಬಿದ್ದು ಮನಸಾರೆ ಅತ್ತೆ. ಮನದ ರೋದನ ಮುಸಲ ಧಾರೆಯಾಗಿ ದಿಂಬನ್ನೆಲ್ಲ ಒದ್ದೆಯಾಗಿಸಿತು. ಮೌನ ಎಷ್ಟು ಅಸಹನೀಯ! ಪ್ರೀತಿ ಅವನಲ್ಲೂ ಇದೆ. ಆದರೆ ಅವರ ಮಧ್ಯೆ ಹಾಳು ಭಯವಿದೆಯಲ್ಲ! ಭಯದ ಮಗುವಾದ ಮೌನದ ಹೊರೆಯಿದೆಯಲ್ಲ ಅದನ್ನು ಸರಿಸುವವರು ಯಾರು? ಅವನಾ..? ನಾನಾ..?

ಗಂಡಸರಿಗೇನಾಗಬೇಕು? ಮರೆತೂ ಸುಖವಾಗಿರಬಲ್ಲರು. ಆದರೆ ಹೆಂಗಸಿನ ಪ್ರಥಮ ಪ್ರೇಮವಿದೆಯಲ್ಲ, ಅಂಟಿಕೊಂಡರೆ ಬಿಡದು. ಬದುಕಿನುದ್ದಕ್ಕೂ ಹೃದಯದ ಹೊಟ್ಟೆಯಲ್ಲಿಟ್ಟುಕೊಂಡೇ ಬಾಳಬೇಕು. ಆ ಹಾಳು ಹಾದರ ಯಾರಿಗೆ ಬೇಕು?

ಇಷ್ಟಕ್ಕೂ ಒಂದು ವಿಷಯ ಮಾತ್ರ ಖಂಡಿತ. ಹೃದಯಕ್ಕೆ ಬೇರಾರೂ ಬೇಡ. ಅವನಿಗೇ ಮೀಸಲಾಗಿದೆ ಈ ಬದುಕು. ಬೇರೆ ಯಾರನ್ನೂ ಪ್ರೀತಿಸಲಾರೆ. ಬೇರಾರಿಗೂ ಒಲವಧಾರೆ ಎರೆಯಲಾರೆ.

ಆದರೆ ಇದನ್ನೆಲ್ಲ ತಂದೆಗೆ ಹೇಗೆ ಹೇಳಲಿ? ಹತ್ತೊಂಭತ್ತು ವರ್ಷ ಪೋಷಿಸಿದವರವರು. ತಿದ್ದಿ ತೀಡಿದವರು… ಹೇಗೆ ಎದುರಾಡಲಿ ಅಕ್ಕನಂತೆ.

ಸ್ವಲ್ಪ ಹೊತ್ತು ಕುಳಿತು ಆಲೋಚಿಸಿದೆ. ಇಬ್ಬರ ಪ್ರೀತಿ ನಡುವೆ ಮೌನ ಭಾರ, ಅಸಹನೀಯ. ಅವನ ಬಳಿಯೇ ಹೋಗಬೇಕು. ಭಯ, ಸಂಕೋಚ ಎಲ್ಲದಕ್ಕೂ ತಿಲಾಂಜಲಿ ಕೊಟ್ಟು ಬಿಡಬೇಕು. ನನ್ನೊಳಗಿನೊಲವು ತಿಳಿಸಿಬಿಡಬೇಕು. ನಾಳೆ ಹೇಳುವೆನೆಂದರೆ ಬಾಳೆ ಕೂಪದಲ್ಲಿ ಬಿದ್ದೀತು. ಇವತ್ತೇ ಏನಾದರಾಗಲೀ ಹೇಳಿ ಬಿಡಬೇಕೆಂದು ನಿರ್ಧರಿಸಿದೆ.

ಒಂದುವೇಳೆ ಆತ ಒಲ್ಲೆ ಎಂದರೆ? ದಡ ಕಾಣದ ಹಡಗಿನಂತಾದೀತು ಮನಸು. ಅಂತಹ ಪರಿಸ್ಥಿತಿ ಊಹಿಸಲೂ ನಿರಾಕರಿಸಿತು ಮನ.
……………….

ಪ್ರಿಯ ಸಖನಿಗೆ,
ಭರಿಸಲಾಗದಷ್ಟು ಹೊರೆಯಾಗಿದೆ ಈ ಪ್ರೀತಿ. ಹಂಚಿಕೊಳ್ಳದೇ ವಿಧಿಯಿಲ್ಲ ಎಂಬಂತಾಗಿದೆ. ಕಣ್ಣ ಕುಡಿಯಂಚಿನ ಪ್ರೇಮದಾಟ ಸಾಕು. ಹೃದಯದ ‘ನೀನೇ ಬೇಕೆಂಬ’ ಹಠ ಹೆಚ್ಚಾಗಿದೆ. ನಿನ್ನೊಳಗೂ ನನ್ನ ಬಗ್ಗೆ ಪ್ರೇಮವಿದೆಯಾ? ಇದೆಯಾದರೆ ಹಂಚಿಕೋ. ಇಲ್ಲವಾದರೆ ಈ ಪತ್ರ ಹರಿದು ಚೂರು ಮಾಡು.
ನಿನ್ನ
ಶರ್ಮಿಳ

ಹೀಗೆ ಬರೆದು ಮಡಚಿ ಪುಸ್ತಕದೊಳಗಿಟ್ಟುಕೊಂಡಳು. ಕಾಲೇಜು ಬಿಡುವ ಸಮಯಕ್ಕಾಗಿ ಕಾಯತೊಡಗಿದೆ. ಕ್ಲಾಸಿನಲ್ಲಿ ಅನ್ಯಮನಸ್ಕತೆ ಬದುಕು ಏನಾದೀತೋ ಎಂಬ ಭೀತಿ. ಆತನ ಉತ್ತರವೇನೋ ಎಂಬ ಆತಂಕ. ಏನಾದರಾಗಲಿ ಇಂದೇ ನಿರ್ಧಾರವಾಗಿ ಹೋಗುವುದೆಂಬ ನಿರುಮ್ಮಳತೆ ಮತ್ತೊಂದು ಕಡೆ.

ಸಂಜೆ ಕಾಲೇಜು ಬೀಡುವ ಸಮಯದಲ್ಲಿ ಆಗಸದ ತುಂಬ ಮೋಡ. ಸಣ್ಣ ಮಬ್ಬುಗತ್ತಲೆ. ಉಸಿರು ಬಿಗಿ ಹಿಡಿದು ಕಾಲೇಜು ಗೇಟ ಬಳಿ ನಿಂತೆ. ತುಂಬು ಜನಸಂದಣಿ ಮಧ್ಯೆ ಜಾಗ ಮಾಡಿಕೊಂಡು ಆತ ಬರುತ್ತಿದ್ದ. ಹತ್ತಿರ. ಇನ್ನೂ ಹತ್ತಿರ ಬಂದ. ಹತ್ತಿರ ಬಂದಷ್ಟೂ ಹೆಚ್ಚುವ ಭಯ, ನಡುಕ.

“ಒಂದ್ನಿಮಿಷ ನನ್ನ ಜೊತೆ ಬರ್ತೀರಾ?” ಕೇಳಿದೆ. ಆಶ್ಚರ್ಯಕರ ಮುಖಭಾವದೊಂದಿಗೆ ‘ಸರಿ’ ಎಂದನಾತ.

ಮೈದಾನದೆಡೆಗೆ ಏಕಾಂತವನ್ನರಸಿ ಹೋಗುತ್ತಿದ್ದರೆ ನನ್ನ ಹಿಂದೆಯೇ ಬರುತ್ತಿದ್ದ, ಚಿಕ್ಕದಾಗಿ ಊಟದೆಲೆಗೆ ನೀರು ಚಿಮುಕಿಸಿದಂತೆ ಹೊಯ್ಯುತ್ತಿತ್ತು ಮಳೆ.

ಮೈದಾನದ ಮೂಲೆಗೆ ಕರೆದೊಯ್ದು ನೀಡಿದ ಪತ್ರ, ಆತನ ಕೈಗಿಟ್ಟು ಆತನನ್ನು ಎದುರಿಸಲಾಗದೆ ಈ ಕಡೆ ಬಂದು ಬಿಟ್ಟೆ. ಮರದ ಕೆಳಗೆ ಮರೆಯಲ್ಲಿ ನಿಂತು ಆತನನ್ನು ಗಮನಿಸುತ್ತಿದ್ದೆ.

ಮಳೆ ಸಣ್ಣಗೆ ಬರುತ್ತಿದ್ದುದು ಹೆಚ್ಚುತ್ತಾ ಹೋಯಿತು. ಅಂತೆಯೇ ನನ್ನ ಆತಂಕವೂ! ಆತ ಓದುವುದ ಮುಗಿಸಿ ಕಣ್ಣು ಮುಚ್ಚಿ ನಿಂತಿದ್ದ. ಮೊಗದ ತುಂಬ ಮಳೆನೀರು. ಅಳುತ್ತಿರುವನಾ? ಗೊತ್ತಾಗಲಿಲ್ಲ.

ಸ್ವಲ್ಪಹೊತ್ತು ಕಾದೆ. ಬರಲಿಲ್ಲ. ತಿರುಗಿ ನೋಡಲೂ ಇಲ್ಲ. ಭಯವಾಯಿತು. ಆತನ ಬಳಿ ಓಡಿದೆ. ಆತನಿನ್ನೂ ತೊಯ್ಯುತ್ತಲೇ ಇದ್ದ; ಬಯಲ ಮಧ್ಯದ ಮರದಂತೆ. ಅವನ ಶರಟು ಹಿಡಿದೆ. “ಏನಾಯ್ತು” ಕೇಳಿದೆ. ನಿರ್ಭಾವುಕ ನೋಟ ನನ್ನತ್ತ ಎಸೆದ. “ಸಾರಿ ಶರ್ಮಿಳ ಶರ್ಮಿಳ ಇಷ್ಟು ದಿನ ನಿನ್ನನ್ನು ಕಾಡಿದ್ದಕ್ಕೆ ಪ್ರೀತಿ ನನ್ನಲ್ಲೂ ಇದೆ” ಅಂದ. ನನ್ನ ಮೇಲೆ ಬೀಳುತ್ತಿರುವುದು ನೀರಹನಿಯಲ್ಲ ಪನ್ನೀರ ಸುರಿಮಳೆ ಅನ್ನಿಸಿತು. ಆನಂದದಿಂದ ತಬ್ಬಿಕೊಂಡೆ ಮತ್ತೆ ಹೇಳಿದೆ, “ನಾನೇ ನಿನ್ನ ಬಳಿ ಬಂದು ಕೇಳಬೇಕಿತ್ತು. ಕ್ಷಮಿಸು ಇಷ್ಟು ದಿನ ಹೇಳದಿದುದಕ್ಕೆ ಕಾರಣ ನನಗಿದ್ದ ಭಯವೇ. ನಿನ್ನ ನಿರಾಕರಣೆಯ ಭಯ. ನೀನೇ ಒಪ್ಪಿಕೊಂಡ ಮೇಲೆ ಇನ್ನು ಯಾವ ಭಯವೂ ಇಲ್ಲ.”

“ಆದರೆ ನನ್ನ ತಂದೆ ನನಗೆ ಬೇರೆ ಹುಡುಗನನ್ನು ನೋಡುತ್ತಿದ್ದಾರೆ…” ಅಂದೆ.

“ಇವತ್ತೇ ಹೋಗಿ ಮಾತಾಡುತ್ತೇನೆ. ಪ್ರೀತಿ ಮಾಡಿದರೆ ಭಯ ಪಡಬಾರದು. ಇದೇ ನಾನು ಕಲಿತ ಪಾಠ.”

“ನನ್ನ ತಂದೆ ಒಪ್ಪದಿದ್ದರೆ…?”

“ಒಪ್ಪಿಸುವೆ ಎಂಬ ನಂಬಿಕೆ ನನಗಿದೆ.” ಅಂದ.

ಜಡಿ ಮಳೆಯಲ್ಲಿ ಇಬ್ಬರೂ ಒಟ್ಟಾಗಿ ಒದ್ದೆಯಾದೆವು. ಇನ್ನು ಯಾವ ಬೆದರು ಮಳೇಗೂ ಬಗ್ಗುವವಳಲ್ಲ ನಾನು, ಸಂಗಾತಿಯಾಗಿ ಅವನಿರುವ ತನಕ…

ಬೆಂಗಳೂರಿನಲ್ಲಿ ಆಟೋದಲ್ಲಿ ತಿರುಗಲು ಶುರುಮಾಡಿದ ಮೇಲೆ ಈ ಕೆಳಗೆ ಪಟ್ಟಿಮಾಡಿರುವುದನ್ನೆಲ್ಲಾ ಪರಿಸ್ಥಿತಿ ಕಲಿಸುತ್ತದೆ.

೧. ಸ್ಟಾಂಡ್ ನಲ್ಲಿರೋ ಆಟೋಗಿಂತ ರಸ್ತೆಯಲ್ಲಿ ಖಾಲಿ ಹೋಗುತ್ತಿರುವ ಆಟೋ ದಿಂದ ಮೋಸ ಹೋಗುವ ಅಪಾಯ ಕಡಿಮೆ

೨. ಒಮ್ಮೆ ಅಡ್ರೆಸ್ ಸರಿಯಾಗಿ ಹೇಳಿದ ಮೇಲೆಯೂ ’ಎಲ್ಲಿ ಆ ಶಾಪ್ ನ ಹತ್ತಿರವಾ? ಅಂತ ಆಟೋದವ ಪ್ರಶ್ನೆ ಮಾಡುತ್ತಿದ್ದರೆ, ಜಾಸ್ತಿ ಎಷ್ಟು ಕೇಳಲಿ ಅಂತ ಅಲೋಚಿಸಲು ಆತ ಸಮಯ ತೆಗೆದುಕೊಳ್ತಾ ಇದಾನೆ ಅಂತ ಅರ್ಥ.

೩. ಯಾವಾಗಲೂ ಮೀಟರ್ ದರದ ಮೂಲಕವೇ ಮಾತಾಡಿ. ಸುಮ್ಮನೆ ಇಲ್ಲಿಗೆ ಇಂತಿಷ್ಟು ಅಂತ ನಿಜವಾಗಿಯೂ ನೀವು ವಾದ ಮಾಡೋದಿದ್ದರೆ ನಿಮಗೆ ನೀವಿರುವ ಸ್ಥಳದಿಂದ ಹೋಗಬೇಕಾದ ಸ್ಥಳಕ್ಕಿರುವ ದೂರ ಕರೆಕ್ಟಾಗಿ ತಿಳಿದಿರಬೇಕಾಗುತ್ತದೆ.

೪. ಆಟೋ ಹತ್ತಿರ ಡ್ರೈವರ್ ಗೆಳೆಯರೂ ಇದ್ದರೆ ನೀವು ಮೋಸಹೋಗಬಹುದಾದ ಪ್ರಮಾಣ ಡಬಲ್ ಆಗಿರುತ್ತದೆ.

೫. ಮೀಟರ್ ದರಕ್ಕಿಂತ ಚೂರೂ ಜಾಸ್ತಿ ನೀಡೋಲ್ಲ ಅಂತ ಅನ್ನಿ. ನಿಜ, ನಿಮಗೆ ಅರ್ಜೆಂಟಿದೆ, ನೀವು ಕೊಡಬಲ್ಲಿರಿ.. ಆದರೆ ಆ ಆಟೋದವನು ಅದನ್ನೇ ತನ್ನ ಅಡ್ವಾಂಟೇಜ್ ರೀತಿ ತೆಗೆದುಕೊಳ್ತಾನೆ. ಕೊಡಲಾಗದವರ ಹತ್ತಿರವೂ ಅದೇ ಪಾಲಸಿ ಉಪಯೋಗಿಸುತ್ತಾನೆ.

 

ಆಟೋದವರಿಂದ ಮೋಸ ಹೋಗದಂತಿರಲು ಈ ಕೆಳಗಿನ ಪಾಲಸಿಯನ್ನು ಪಾಲಿಸಿ:-

ಆಟೋದವರು ಈ ರೀತಿಯಾಗೆಲ್ಲಾ ಮಾಡಬಲ್ಲರು :- ಒಂದು ಸ್ಥಳಕ್ಕೆ ಬರುವುದನು ನಿರಾಕರಿಸುವುದು, ಮೀಟರ್ ಗಿಂತ ಜಾಸ್ತಿ ಹಣ ಕೇಳುವುದು, ಮೀಟರ್ ಹಾಳಾಗಿರುವುದು, ಹೋಗಬೇಕಾಗಿರುವ ಸ್ಥಳ ತಲುಪಿಸದಿರುವುದು, ವೇಗವಾಗಿ ಓಡಿಸುವುದು, ಆಟೋ ನಂಬರ್ ನ್ನು ಒಳಗೆ ಪ್ರಯಾಣಿಕ ಕೂತಾಗ ಕಾಣುವ ಜಾಗದಲ್ಲಿ ಹಾಕದಿರುವುದು.

ಮೊದಲೆರಡು ಅಂದರೆ ಪ್ರಯಾಣಿಕರು ಇಂಥ ಸ್ಥಳಕ್ಕೆ ಹೋಗಬೇಕಾಗಿದೆ ಅಂದಾಗ ಅಲ್ಲಿಗೆ ಬರಲ್ಲ ಎನ್ನುವುದು, ಮತ್ತು ಮೀಟರ್ ಗಿಂತ ಜಾಸ್ತಿ ಹಣ ಕೇಳುವುದು ಇವೆರಡನ್ನೂ ಕೇವಲ ಒಂದು ಎಸ್ ಎಮ್ ಎಸ್ ಮೂಲಕ ಕಂಪ್ಲೈಂಟ್ ಮಾಡಬಹುದು.

ಇಂಥ ಸ್ಥಳಕ್ಕೆ ಬರುವುದಿಲ್ಲ ಅಂದಾಗ ಕೂಡಲೇ, “Auto ref ಆಟೋನಂಬರ್ ಎಲ್ಲಿಂದಎಲ್ಲಿಗೆ ಸಮಯ” ಅನ್ನುವುದನು ಟೈಪಿಸಿ ೫೨೨೨೫ನ್ ಕ್ಕೆ ಎಸ್ ಎಂ ಎಸ್ ಕಳಿಸಿದರೆ ಸಾಕು. ಉದಾಹರಣೆಗೆ Auto ref KA02YY0123 KR Puram to Indiranagar 6PM ಅಂತ ಟೈಪಿಸಿ ೫೨೨೨೫ ಗೆ ಕಳುಹಿಸಿ.

ಒಂದು ವೇಳೆ ಜಾಸ್ತಿ ಹಣ ಕೇಳುತ್ತಾರಾದರೆ, “Auto ovr ಆಟೋನಂಬರ್ ಎಲ್ಲಿಂದಎಲ್ಲಿಗೆ ಸಮಯ” ಅಂತ ಟೈಪಿಸಿ ೫೨೨೨೫ ಗೆ ಎಸ್ ಎಮ್ ಎಸ್ ಕಳುಹಿಸಿ. ಉದಾಹರಣೆಗೆ Auto ref KA02YY0123 KR Puram to Indiranagar 6PM ಅಂತ ಟೈಪಿಸಿ ೫೨೨೨೫ ಗೆ ಎಸ್ ಎಂ ಎಸ್ ಕಳುಹಿಸಿ.

ನೆನಪಿಡಿ ನೀವು ಹೇಗೆ ಮಾಡುವುದರಿಂದ ನೀವು ಮೋಸಹೋಗುವುದಷ್ಟೇ ತಡೆಗಟ್ಟುವುದಷ್ಟೇ ಅಲ್ಲದೇ ಸ್ವಸ್ಥ ಸಮಾಜ ರೂಪುಗೊಳ್ಳುವುದಕ್ಕೆ ಸಹಾಯವೂ ಆಗುತ್ತದೆ. ಅಲ್ಲದೇ ಹೆಚ್ಚು ಲಂಚ ಕೇಳುವುದರಲ್ಲಿ ಜನಸಾಮಾನ್ಯ ಹೆಚ್ಚು ತೊಂದರೆ ಗೀಡು ಮಾಡುವುದರಲ್ಲಿ ಮೂರನೇ ಸ್ಥಾನದಲ್ಲಿರುವ ಆಟೋ ಮೋಸವನ್ನು ನಿಯಂತ್ರಣದಲ್ಲಿಡಬಲ್ಲುದು.

-೧-

ಒಂದು ಬ್ಯಾಂಕಿನ ಬ್ಯೂಸಿ ದಿನ. ಜನ ಗಿಜಿಗುಟ್ಟುತ್ತಿದ್ದರು.

ಅಲ್ಲಿ ಮುಲ್ಲಾ ನಸೀರುದ್ದೀನ್ ಕೂಡ ಇದ್ದಿದ್ದರು. ಕೊಂಚ ಹೊತ್ತಿನ ಬಳಿಕ ಮುಲ್ಲಾ ಒಂದು ಅನೌನ್ಸ್ ಮೆಂಟ್ ನೀಡಿದರು.

ಇಲ್ಲಿ ಯಾರದ್ದಾದರೂ ಲಕ್ಷ ರೂಪಾಯಿಯ ಕಟ್ಟು ಬಿದ್ದು ಹೋಗಿದೆಯಾ?

ಎಲ್ಲರೂ ನನ್ನದು ನನ್ನದು ಅಂತ ಮುಗಿಬೀಳಲು ಅನುವಾದರು.

ಮುಲ್ಲಾ ಶಾಂತವಾಗಿ, "ಅದಕ್ಕೆ ಕಟ್ಟಿದ್ದ ರಬ್ಬರ್ ಬ್ಯಾಂಡ್ ನನಗೆ ಸಿಕ್ಕಿದೆ, ತಗೆದುಕೊಂಡುಹೋಗಬಹುದು" ಅಂದರು!

-೨-

ಒಬ್ಬ ಮನಶ್ಯಾಸ್ತ್ರಜ್ಞ ರಸ್ತೆಯಲ್ಲಿ ಹಾದುಹೋಗುತ್ತಿದ್ದಾಗ ನಾಲ್ವರು ಹುಡುಗರು ಜಗಳ ಆಡುತ್ತಿರುವುದು ಕಾಣಿಸುತ್ತದೆ. ಅದರಲ್ಲಿ ಒಬ್ಬ ಹುಡುಗನ ಕೈಯ್ಯಲ್ಲಿ ಮುದ್ದಾದ ಪುಟಾಣಿ ನಾಯಿಮರಿ ಇದೆ. ’ಯಾಕೆ ಜಗಳ ಆಡ್ತಾ ಇದೀರಿ’ ಅಂತ ಮನಶ್ಯಾಸ್ತ್ರಜ್ಞ ಕೇಳಿದ.

ಈ ನಾಯಿಮರಿ ದಾರೀಲಿ ಸಿಕ್ತು, ಯಾರ್ ತಗೊಡ್ ಹೋಗ್ಬೇಕೋ ಗೊತ್ತಾಗ್ತಿಲ್ಲ. ಎಲ್ರೂ ತಂಗೇ ಬೇಕು ಅಂತ ಹಠ ಹಿಡಿದಿದ್ದಾರೆ. ನಂಗೂನು ಬೇಕು ಅನ್ನಿಸ್ತಿದೆ ಅಂತ ಒಬ್ಬ ಹುಡುಗ ಹೇಳಿದ.

ಮತ್ತೊಬ್ಬ ’ ಅದ್ಕೇ, ನಮ್ಮಲ್ಲಿ ಯಾರ್ ದೊಡ್ಡ ಸುಳ್ಳು ಹೇಳ್ತಾರೋ ಅವ್ರಿಗೇ ಕೊಡೋದು ಅಂತ ನಿರ್ಧರಿಸಿ, ಒಬ್ಬೊಬ್ಬರಾಗಿ ಸುಳ್ಳು ಹೇಳ್ತಾ ಇದೀವಿ ಅಂದ.

ಮನಶ್ಯಾಸ್ತ್ರಜ್ಞನಿಗೆ ಬೇಸರವಾಯಿತು. ಇನ್ನೂ ಶಾಲೆಗೆ ಹೋಗುತ್ತಿರೋ ಹುಡುಗರು, ಅರಳುವ ಮೊಗ್ಗುಗಳು. ಈಗಲೇ ಸುಳ್ಳಿನತ್ತ ವ್ಯಾಮೋಹ, ಸುಳ್ಳು ಹೇಳುವ ಕಲೆ ಕರಗತವಾಗಿಬಿಟ್ಟರೆ ಮುಂದೆ ಏನೆಲ್ಲಾ ಆಗಿ ಇವರು ತಯಾರಾಗುವರೋ ಎಂಬ ಆತಂಕ ಹುಟ್ಟಿತು. ದೊಡ್ಡ ದೊಡ್ಡ ಹೆಸರಿನ ಮಾನಸಿಕ ಖಾಯಿಲೆಗಳ ಹೆಸರೆಲ್ಲಾ ಕಣ್ಮುಂದೆ ಬಂತು.

"ಸುಳ್ಳು ಹೇಳೋದು ತಪ್ಪು ಮಕ್ಕಳೇ, ನೀವೆಲ್ಲಾ ಭವಿಷ್ಯದ ಕುಡಿಗಳು. ಅಬ್ದುಲ್ ಕಲಾಂ ಆಗುವ ಕನಸು ಹುಟ್ಟಿಸಿಕೊಳ್ಳಬೇಕು, ನೋಡಿ ನನ್ನನ್ನು. ನಿಮ್ಮ ವಯಸ್ಸಿನಲ್ಲಿ ಸುಳ್ಳು ಹೇಳಿದ್ದರೆ ಈಗ ನಾನು ಈ ಊರಿನ ದೊಡ್ಡ ಮನಶ್ಯಾಸ್ತ್ರಜ್ಞ ಆಗ್ತಿದ್ದೆನಾ? ಗಾಂಧಿ ಆತ್ಮಕಥೆ ನಾನು ಓದಿದ್ದು ನಿಮ್ಮ ವಯಸ್ಸಿನಲ್ಲೇ, ಆಗಲೇ ನಾನು ಸುಳ್ಳು ಹೇಳಲ್ಲ ಅಂತ ನಿರ್ಧರಿಸಿದ್ದೆ. ಈಗ ನೀವೆಲ್ಲಾ ಈ ಸುಳ್ಳು ಹೇಳೋ ಆಟದ ಬದಲು, ಯಾರು ಬುದ್ಧಿವಂತರೋ ಅವರಿಗೆ ನಾಯಿಮರಿ ಅಂತ ನಿರ್ಧರಿಸಿ" ಅಂದ.

ಅಲ್ಲಿ ಪೂರ್ತಿ ನಿಶ್ಯಬ್ಧ ಆವರಿಸಿತು. ಮಕ್ಕಳು ಒಬ್ಬರನ್ನೊಬ್ಬರು ನೋಡಿಕೊಂಡರು.

ಒಬ್ಬ ಹುಡುಗ "ಲೋ..ಇವ್ರೇ ಹೇಳಿದ್ರಿಂದ.. ನಾಯಿಮರೀನ ಈವಯ್ಯಂಗೇ ಕೊಟ್ ಬಿಡಾಣ ಕಣ್ರೋ!’ ಅಂದ!

-೩-

ಎಂಟು ಜನ ಎಂ ಬಿ ಎ ವಿದ್ಯಾರ್ಥಿಗಳು ಮಾರನೇ ದಿನ ’ಟೀಂ ವರ್ಕ್’ ವಿಷಯದಲ್ಲಿ ಪರೀಕ್ಷೆ ಬರೆಯಬೇಕು. ಆದರೆ ಅವತ್ತು ಫ್ರೆಂಡ್ ಶಿಪ್ ಡೇ ಇದ್ದಿದ್ದರಿಂದ ಪರೀಕ್ಷೆಗೆ ತಯಾರಾಗಲು ಸಾಧ್ಯವಾಗಲಿಲ್ಲ. ಅದಕ್ಕೆ ಅವರೆಲ್ಲಾ ಸೇರಿ ಒಂದುಪಾಯ ಮಾಡಿದರು. ಮರುದಿನ ಒಟ್ಟಾಗಿ ಪ್ರೊಫೆಸರ್ ಬಳಿಗೆ ಹೋಗಿ ರಾತ್ರಿ ಪರೀಕ್ಷೆಗಾಗಿ ಬರುವಾಗ ವಾಹನದ ಟೈರ್ ಪಂಕ್ಚರ್ ಆಯ್ತು, ಸ್ಪೇರ್ ಟೈರ್ ಇಲ್ಲವಾದ್ದರಿಂದ ಬಹಳ ದೂರ ನಡೆದುಕೊಂಡು ಹೋಗಿ ಸರಿ ಮಾಡಿಸಿಕೊಂಡು ಬರಬೇಕಾಯ್ತು, ನಿದ್ದೆಯಿಲ್ಲವಾದ್ದರಿಂದ ಪರೀಕ್ಷೆ ಬರೆಯಲಾಗದು, ದಯವಿಟ್ಟು ಪರೀಕ್ಷೆಯನ್ನ ಐದು ದಿನ ನಂತರ ಇಡಬೇಕು ಅಂತ ಕೋರಿಕೆಯಿಟ್ಟರು.

ಪ್ರೊಫೆಸರ್ ಮರು ಮಾತಾಡದೇ ಒಪ್ಪಿಗೆಯಿತ್ತರು.

ಐದು ದಿನದ ನಂತರ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ತೆಗೆದುನೋಡಿದರೆ ಪ್ರಶ್ನೆಗಳು ಈ ರೀತಿಯಾಗಿವೆ:

೧. ಐದು ದಿನದ ಹಿಂದೆ ನೀವು ಹೋದ ಕಾರಿನ ಯಾವ ಚಕ್ರ ಪಂಕ್ಚರ್ ಆಯಿತು? ಮುಂದಿನದಾ? ಹಿಂದಿನದಾ? ಬಲಗಡೇದ್ದಾ? ಎಡಗಡೇದ್ದಾ? (೯೫ ಅಂಕಗಳು)
೨. ಟೀಂ ವರ್ಕ್ ಗೆ ಬೇಕಾದ ಮುಖ್ಯ ಲಕ್ಷಣಗಳೇನು? (೫ ಅಂಕಗಳು)

ಎಲ್ಲರಿಗೂ ಐದು ಅಂಕಗಳೇ ಬಂದವು. ತಮ್ಮ ತಪ್ಪು ತಿಳಿದುಕೊಂಡ ಎಲ್ಲರೂ ಸರಿಸುಮಾರು ಒಂದೇ ಉತ್ತರ ಬರೆದರು.

"..ಯಾವ ಕೆಲಸ ಮಾಡಿದರೂ, ಯಾವ ಸುಳ್ಳು ಹೇಳಿದರೂ, ಇಡೀ ಟೀಂ ಎಲ್ಲಾ ಕೂಡಿ ಚರ್ಚಿಸಿ, ಪೂರ್ತಿ ಅವಗಾಹನೆಯಿಂದ ಮಾಡಬೇಕು."

***

ಟಿಪ್ಪಣಿ: ಕೊನೆಯೆರಡು ಕಥೆ ಯಂಡಮೂರಿ ಪುಸ್ತಕದಿಂದ ಆರಿಸಿದ್ದು. ಬಹುಶಃ ಅದು ಇಂಟರ್ನೆಟ್ ಮೂಲದ್ದಿರಬಹುದು.

ಬಿರುಬಿಸಿಲಲ್ಲಿ ಹನಿಗಾಗಿ

ಧ್ಯಾನ ಮಾಡುವುದು

ಮುಸಲಧಾರೆಯೊಳಗೂ

ಹೊಂಬಿಸಿಲ ಕನಸು ಕಾಣುವುದು

ನಿನ್ನನಿಷ್ಟಪಡುವಷ್ಟು

ವಿಚಿತ್ರವೇನಲ್ಲ.

****

zen

ತನ್ನ ಕಣ್ಣೊಳಗೇ ಇರುವ ಕವಿತೆಯ ಬಿಟ್ಟು

ಸೀರೆಯ ನೆರಿಗೆಯ

ಲಯದಲ್ಲಿ ಕಾವ್ಯ ಹುಡುಕುವ

ತರುಣರ ಕಂಡರೆ

ಅವಳಿಗೆ

ರೇಜಿಗೆ.

*****

ಮನಬೀದಿಯೊಳಗೆ

ಕಾಮಣ್ಣರು ನಿನ್ನ

ಛೇಡಿಸುತಿರುವಾಗೆಲ್ಲ

ನಾನು ನಿನ್ನ

ಪ್ರೀತಿಸಲು

ಅಯೋಗ್ಯ ಅಂತ ಆಗಾಗ್ಗೆ

ಅನಿಸುತಿರುತ್ತೆ.

 

****

 

ಚಿತ್ರ: ಇಂಟರ್ನೆಟ್ ಕೃಪೆ

ನಿಮ್ಮ ಮನೆಯಲ್ಲಿ ಓದಬಲ್ಲಂಥ ಮಕ್ಕಳಿದ್ದರೆ ಅನುಪಮಾ ನಿರಂಜನ ಬರೆದ ’ದಿನಕ್ಕೊಂದು ಕಥೆಗಳು ಸೀರೀಸ್" ಓದಲು ನೀಡಿ.

ಒಟ್ಟೂ ಹನ್ನೆರಡು ಪುಸ್ತಕಗಳು. ಒಂದು ಪುಸ್ತಕ ಶುರು ಮಾಡಿದರೆ ಮಕ್ಕಳೇ ಪೀಡಿಸಿ ಕೇಳುವಂಥ ಕಥೆಗಳಿವೆ. ಮಜವಾದ ಕಥೆಗಳ ಜತೆಗೆ ನೀತಿಯುಕ್ತವಾಗಿಯೂ ಉಳ್ಳಂಥ ಪುಟ್ಟ ಪುಟ್ಟ ಕಥೆಗಳು. ಮಕ್ಕಳ ಊಹಿಸಬಲ್ಲಂಥ, ಓದಿ ಅರ್ಥಮಾಡಿಕೊಳ್ಳಬಲ್ಲಂಥ, ಗ್ರಹಿಸಿಕೊಳ್ಳುವಂಥ ಕಲೆ ವಿಪರೀತ ಅಭಿವೃದ್ಧಿಯಾಗುತ್ತದೆ. ಮಕ್ಕಳ ಮೆದುಳಿಗೆ ಕಲ್ಪನೆಯ ರೆಕ್ಕೆಗಳು ಮೂಡುವುದು ಇಂಥದ್ದನ್ನು ಓದಿಯೇ. ದೃಶ್ಯಮಾಧ್ಯಮಗಳು ಈ ರೀತಿಯ ಕಲ್ಪನೆಯ ಅಭಿವೃದ್ಧಿಗೆ ಅವಕಾಶ ನೀಡುವುದಿಲ್ಲ ಯಾಕೆಂದರೆ ಕಥೆ ನಡೆವಂಥ ಜಗತ್ತು ಕಾಣ್ತಾವೆ. ಆದರೆ ಕಥೆ ಪುಸ್ತಕ ಹಾಗಲ್ಲ, ಸಾಲುಗಳು ಆ ಕಥಾಜಗತ್ತಿಗೆ ದ್ವಾರವಿದ್ದಂತೆ, ಪದಗಳ ಮೂಲಕ ಹೆಜ್ಜೆಯಿಡುತ್ತ ಮಕ್ಕಳು ಆ ಲೋಕದೊಳಗೆ ಪ್ರವೇಶಿಸುತ್ತವೆ. ಅದೂ ಅಲ್ಲದೇ ನೀತಿ, ನಿಯತ್ತು, ಶ್ರದ್ಧಾ ಪಾಠ, ಸತ್ಯದ ಮಹಿಮೆ ಇವೆಲ್ಲವೂ ಟೀವಿ ಸೀರಿಯಲ್ಲುಗಳಲ್ಲಿ, ಹೊರಜಗತ್ತಿನಲ್ಲಿ ಸಿಗುವುದು ಕಡಿಮೆ. ನಾವು ಹೇಳಿಕೊಡುವುದು ಮಕ್ಕಳಿಗೆ ರಂಜನೀಯವೆನಿಸವು. ಕಥೆಗಳೇ  ಒಳ್ಳೇ ಟೀಚರ್ ನಂತೆ ಇಂಥ ಸಮಯದಲ್ಲಿ ಸಹಾಯ ಮಾಡುತ್ತದೆ. ಮಕ್ಕಳನ್ನು ತನ್ನ ಲೋಕದೊಳಗೇ ಸೆಳೆದು ಅವಕ್ಕೆ  ಕಾನ್ಶಿಯಸ್ ಆಗಿ ಅರಿವಾಗದಂತೆ ಪಾಠ ಹೇಳುತ್ವೆ.

ಅಕ್ಬರ್ ಬೀರ್ ಬಲ್ ಕಥೆಗಳೂ, ಈಸೋಪನ ನೀತಿಕಥೆಗಳೂ, ತೆನಾಲಿ ರಾಮನ ಕಥೆಗಳೂ ಹಾಗೆನೆ ಇದ್ದರೂ ಅವೆಲ್ಲಾ ಟೀವಿಯಲ್ಲಿ ಬರುತ್ತವಾದ್ದರಿಂದ ಕಾರ್ಟೂನ್ ನೆಟ್ ವರ್ಕ್ ನಂತಹ ಚಾನೆಲ್ ಗಳಲ್ಲಿ ಮಕ್ಕಳು ನೋಡಿಯೇ ಇರ್ತಾವೆ.

ನಿಜಕ್ಕೂ ಮಕ್ಕಳ ಭವಿಷ್ಯಕ್ಕೆ ಕಥೆ ಓದುವುದಕ್ಕೆ ಮೀಸಲಿಟ್ಟ ಸಮಯವೂ, ವಿನಿಯೋಗಿಸಿದ ಹಣವೂ ಒಳ್ಳೆಯ ಇನ್ವೆಸ್ಟ್ ಮೆಂಟ್.

ಮುಂದಿನ ತಲೆಮಾರು ಇಂಥ ಒಳ್ಳೆ ಪುಸ್ತಕ ಮಿಸ್ ಮಾಡಿಕೊಳ್ಳುತ್ತೇನೋ ಎಂಬ ಭಯಮಿಶ್ರಿತ ಕಾಳಜಿಯಿಂದ ನನ್ನ ಈ ರೆಕಮೆಂಡೇಶನ್ ಪೋಸ್ಟ್ ಮಾಡ್ತಿದ್ದೇನೆ.

 

*******

 

ನಾನು ಹಾಸ್ಟೆಲ್ ನಲ್ಲಿ ಓದುತ್ತಿದ್ದ ಸಮಯ. ಜತೆಗಾರರೆಲ್ಲರೂ ಕೋಲಾರದಿಂದ ಬಂದವರು. ತೆಲುಗು ಭಾಷೆ ಅವರಿಗೆ ಕರತಲಾಮಲಕ. ಸಿನೆಮಾ ಬಗ್ಗೆ ಮಾತಾಡುವಾಗೆಲ್ಲಾ ರಾಜೇಂದ್ರ ಪ್ರಸಾದ್, ಬ್ರಹ್ಮಾನಂದಂ ರ ಹಾಸ್ಯ ದೃಶ್ಯಗಳನ್ನು ವಿವರಿಸುತ್ತಿದ್ದರೆ ಬಿದ್ದು ಬಿದ್ದು ನಗುವಂತಾಗುತ್ತಿತ್ತು. ಅವರ ಹಾಸ್ಯ ಸಿನೆಮಾಗಳನ್ನು ನೋಡಲಿಕ್ಕಾಗಿಯೇ ನಾನು ತೆಲುಗು ಭಾಷೆ ಕಲಿತಿದ್ದಾಯಿತು. ಸ್ವಲ್ಪ ವರ್ಷಗಳ ಬಳಿಕ ವಡಿವೇಲು, ವಿವೇಕ್ ರ ಹಾಸ್ಯ ದೃಶ್ಯಗಳಿಗಾಗಿ ತಮಿಳೂ ಕಲಿತಿದ್ದಾಯಿತು. ಈಗ ಮಲೆಯಾಳಮ್ ಚಿತ್ರಗಳ ಕತೆಗಳ ಸೊಗಸನ್ನು ಕೇಳಿ ಮಲೆಯಾಳಮ್ ಕೂಡ ಕಲಿಯಬೇಕನ್ನಿಸುತ್ತಿದೆ.

ಒಂದು ವೇಳೆ ಆ ಚಿತ್ರಗಳು ಕನ್ನಡಕ್ಕೆ ಡಬ್ ಆಗಿದ್ದಿದ್ದರೆ ನಾನು ತೆಲುಗು, ತಮಿಳು ಕಲಿವ ಅಗತ್ಯತೆ ಇತ್ತಾ? ಮಲೆಯಾಳಮ್ ಕಲಿವ ಆಸೆ ಹುಟ್ಟುತ್ತಿತ್ತಾ?

ಹಾಗಂತ ನಾನು ಡಬ್ಬಿಂಗ್ ಪರವಾ? ಅಥವ ವಿರೋಧಿಯಾ? ಈಗಲೂ ಡಬ್ಬಿಂಗ್ ಬಂದರೆ ಮಲೆಯಾಳಮ್ ಕಲಿವ ಆಸೆಯನ್ನು ಕೈಬಿಡುತ್ತೇನೆ
ಮತ್ತು ಡಬ್ಬಿಂಗ್ ಬರದಿದ್ದರೆ ಮಲೆಯಾಳಮ್ ಕಲಿಯುತ್ತೇನೆ.

ಮತ್ತು ನನಗೆ ಬರುವ ಹಿಂದಿ ಭಾಷೆಯ, ತಮಿಳಿನ, ತೆಲುಗಿನ, ಇಂಗ್ಲೀಷ್ ನ ಯಾವ ಡಬ್ಬಿಂಗ್ ಆದ ಸಿನೆಮಾವನ್ನೂ ನೋಡಲಾರೆ. ಕನ್ನಡ ಮಾತಾಡುವ ಆರ್ನಾಲ್ಡ್ ಶ್ವಾಜ್ನಗರ್ ಚಿತ್ರ, ಕನ್ನಡ ಮಾತಾಡುವ ವಿಲ್ ಸ್ಮಿತ್ ಚಿತ್ರಗಳು ನನಗೆ ಅಪಹಾಸ್ಯ ಅನ್ನಿಸುತ್ತದೆ. ಹಾಗೇನೆ ಮಮ್ಮುಟ್ಟಿ, ಮೋಹನ್ ಲಾಲ್ ಮಾತಾಡುವ ಕನ್ನಡ ನನಗೆ ವಿಚಿತ್ರ ಅನ್ನಿಸದು, ಕಾರಣ ಮಲೆಯಾಳಿ ಭಾಷೆ ಬರುವುದಿಲ್ಲ. ಮಲೆಯಾಳಮ್ ನ ಸ್ಲಾಂಗ್, ಅದರ ಭಾಷೆಯ ಏರಿಳಿತದ ಪರಿಚಯವಿಲ್ಲವಾದ್ದರಿಂದ.

ನಾನು ಡಬ್ಬಿಂಗ್ ಪರವಾ ವಿರೋಧಿಯಾ? ಗೊತ್ತಿಲ್ಲ.

ಒಂದಂತೂ ನಿಜ. ನಾನು ಚಿತ್ರ ಚೆನ್ನಾಗಿದ್ದರೆ ನೋಡ್ತೇವೆ, ಇಲ್ಲಾಂದರೆ ಇಲ್ಲ. ಡಬ್ಬಿಂಗೇ ಆಗಿರಬಹುದು ಅಥವಾ ಕನ್ನಡ ಚಿತ್ರವೇ ಆಗಿರಬಹುದು- ಹೀಗೆ ಅನ್ನುವವರ ಪರ.

 

****

 

ಒಬ್ಬ ಖ್ಯಾತ ಚಿತ್ರಸಾಹಿತಿ ಇದ್ದಾನೆ ಅಂದುಕೊಳ್ಳೋಣ. ಆತನ ಕೈಗೆ ಕಾಲಿಗೆ ಅಸಿಸ್ಟೆಂಟುಗಳು. ಆತ ಬರೆದರೆ ಮ್ಯೂಸಿಕ್ ಸೀಡಿ ಗೆ ಒಳ್ಳೆ ಸೇಲು. ಚಿತ್ರಕ್ಕೆ ಒಳ್ಳೆ ಜಾಹೀರಾತು. ಕೆಲವೊಮ್ಮೆ ಚಿತ್ರಕ್ಕಿಂತ ಆತನ ಗೀತೆಗಳೇ ಬಲು ಮಜ ಅನ್ನಿಸುತ್ತದೆ ಜನರಿಗೆ. ಹೀಗಿರುವಾಗ ಆತ ತನ್ನ ಸಂಭಾವನೆಯನ್ನು ಹಿಮಾಲಯದ ತುದಿಗೆ ಏರಿಸುತ್ತಾನೆ.  ನಿರ್ಮಾಪಕರೂ ತಲೆ ಕೆರೆದುಕೊಳ್ಳದೇ ಕೈಬಿಚ್ಚಿ ಲಕ್ಷವೆಂದರೂ ನೀಡುತ್ತಾರೆ ಅಂದುಕೊಳ್ಳೋಣ. ಹೀಗೇ ನಡೆಯುತ್ತಿರುತ್ತದೆ.
ಆದರೆ ಈ ಬರವಣಿಗೆ ಕೆಲವೊಮ್ಮೆ ಒಲಿಯುವುದಿಲ್ಲ, ತಲೆಯನ್ನು ಪರಾಪರಾ ಕೆರೆದುಕೊಂಡರೂ ಹೊಳೆಯುವುದಿಲ್ಲ. ಖಾಲಿ ಹಾಳೆಗಿಂತ ಒಳ್ಳೆಯ ಕವನ ಇಲ್ಲ ಅಂತ ಬರೆಯಬಹುದಾದರೂ ಅದಕ್ಕೆ ಸಂಭಾವನೆ ಸಿಗುವುದಿಲ್ಲ.

ಹೀಗಿರುವಾಗ ಆ ಗುರುವಿಗೊಬ್ಬ ಅಸಿಸ್ಟೆಂಟು. ಗುರುವುಗಿಂತ ಅದ್ಭುತವಾಗಿ ಬರೆಯಬಲ್ಲ. ಅದು ಗುರುವಿಗೂ ಗೊತ್ತು. ಆದರೆ ಆತ ಒಂದು ಹಾಡು ಬರೆದರೆ ಆತನಿಗೆ ಸಿಗುವುದು ಗರಿಷ್ಟವೆಂದರೆ ೫ ರಿಂದ ಹತ್ತು ಸಾವಿರ. ಕಾರಣ ಆತನಿನ್ನೂ ಹೊಸಬ. ಹೆಸರಿಲ್ಲ. ಹೀಗಿರುವಾಗ ಗುರುವಿಗೊಮ್ಮೆ ಐಡಿಯಾ ಹೊಳೆಯುತ್ತದೆ. ’ಶಿಷ್ಯಾ, ನೀನು ಬರಿ, ನಿರ್ಮಾಪಕರ ಬಳಿ ನಾನು ಬರೆದಿದ್ದು ಅಂತೇನೆ. ನಿರ್ಮಾಪಕ ಕೊಟ್ಟ ಲಕ್ಷವನ್ನು ನಿನಗೆ ಕೊಡ್ತೇನೆ, ಸರಿಯಾ?’ ಅಷ್ಟು ದೊಡ್ಡ ಅಮೌಂಟು ಕನಸಿನಲ್ಲೂ ಎಣಿಸಿರದ ಶಿಷ್ಯನು ಹಿಂದೆ ಮುಂದೆ ಬರೆದು ಬರೆದು ಕೊಡುತ್ತಾನೆ. ಲಕ್ಷ ಲಕ್ಷ ಎಣಿಸುತ್ತಾನೆ.

ಗುರು ಖುಷ್, ಶಿಷ್ಯ ಖುಷ್, ನಿರ್ಮಾಪಕ ಖುಷ್, ಜನರೂ ಖುಷ್!

ಸರ್ವೇ ಜನಾಃ ಸುಖಿನೋ ಭವಂತಿ!

ಇದು ಕಥೆ.

ಒಂದು ವೇಳೆ ಇದು ಯಾವ ವ್ಯಕ್ತಿ, ಘಟನೆ, ಸ್ಥಳಕ್ಕೆ ಹೋಲಿಕೆಯುಳ್ಳದ್ದಾದರೆ ಅದು ಕೇವಲ ಕಾಕತಾಳೀಯ!

******

ಹಂಬಲವಾಗೇ ಉಳಿಯಲಿ
ನೀ ಸಿಗುವ ಬಯಕೆ
ಕಿಟಕಿಯಾಚೆಗೇ
ಉಳಿಯಲಿ ಚಂದಿರ

ಹಾಗೇ ಉಳಿಯಲಿ ಎದೆಯೊಳಗೆ
ಬರೆದದ್ದು ಕವಿತೆಯಾಗದ ಅಸಹನೆ
ಆಚೆಯ ವರ್ಷಧಾರೆಗೆ ನಿರ್ದಾಕ್ಷಿಣ್ಯವಾಗಿ
ಪುಟಕ್ಕೆಂದು
ಮನದೊಳಗೆ ಭುಗಿಲೆದ್ದ
ಒಲವ ಹಳೆಯ ನೆನಪು.

DSC08654Small

ಅಲೆಯೊಳಗಿಳಿದು ಮುಳುಗಲಿ
ಸುಳಿಯಲಿ ಸಿಲುಕಲಿ
ಅಳಿಯಲಿ ಯಾ ಕೊಳೆಯಲಿ
ತೀರದಲಿ ಗೀಚಿದ್ದ ನಿನ್ನ ಹೆಸರು
ಅದರೊಳಗಿರಿಸಿದ್ದ ನೂರೊಂದು ಕನಸು.

ಊಹೆಯಲಿ ನೀನಿತ್ತ
ಮುತ್ತಿಗೆ ತನ್ನ ಹೆಸರೇ ಇದ್ದುದಕ್ಕೆ
ನಾಚಿ ಕರಗಿತ್ತಲ್ಲ ಸ್ವಾತಿ ಮುತ್ತು
ಅಂಥ ಪ್ರೀತಿಗೂ ಬಿತ್ತಲ್ಲ ಬೆಂಕಿ

ಕೊನೆಗೂ ಹಂಬಲವಾಗೇ ಉಳಿಯಲಿ
ನೀ ಸಿಗುವ ಬಯಕೆ ಮತ್ತು
ಕಿಟಕಿಯಾಚೆಗೇ
ಉರಿಯಲಿ ಚಂದಿರ.

ಮೊಬೈಲು ಬಂದ ನಂತರ ಜನಕ್ಕೊಂದು ಹೊಸ ಐಲು. ಯಾವುದಾದರೂ ಪ್ರವಾಸಕ್ಕೆ ಹೋದಾಗ ಅಲ್ಲಿನ ಪರಿಸರ ಆಸ್ವಾದನೆಗೆ ಕೊಡುವ ಸಮಯಕ್ಕಿಂತ ಅದನ್ನು ರೆಕಾರ್ಡ್ ಮಾಡಿಟ್ಟುಕೊಳ್ಳುವ ಆಸೆಯೇ ಹೆಚ್ಚಾಗಿರುತ್ತದೆ.  ಓಹ್ ಅಲ್ಲಿಯಾ ಹೋಗಿದ್ದೇನೆ, ಬೇಕಿದ್ರೆ ನೋಡು ಅಂತ ಚಂದ ಸ್ಮಾರಕ ದ ಮುಂದೆ ಹಲ್ಲುಗಿಂಜುತ್ತಾ ನಿಂತ ಫೋಟೋವನ್ನು ಸಾಕ್ಷಿಯಂತೆ ತೋರಿಸುತ್ತೇವೆ. ಹೆಸರನ್ನು ಕೆತ್ತಿ ಅಲ್ಲಿನ ಪರಿಸರದ ಚೆಲುವಿಗೆ ಧಕ್ಕೆ ತರುತ್ತೇವೆ. ಬೇರಾರಿಗೋ, ಮುಂದೆಂದೋ ತೋರಿಸಿಕೊಳ್ಳುವ ತವಕದಲ್ಲಿ, ಈ ಕ್ಷಣದ ಅನುಭೂತಿಯೊಂದನ್ನು ತ್ಯಾಗ ಮಾಡುತ್ತೇವೆ. ಅನುಭೂತಿಯೊಂದು ಇಂದೂ ಇಲ್ಲದ ಅಂದೂ ಇಲ್ಲದ ಅಯೋಮಯ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತದೆ. ಯಾರೋ ಒಬ್ಬ ’ಅಲ್ಲಿ ನಿಂತಾಗ ನಿನ್ನೊಳಗೆ ಬಂದ ಅನಿಸಿಕೆಯೇನು?’ ಅಂತ ಕೇಳಿದರೆ ಮೌನವಹಿಸುತ್ತೇವೆ.. ಅಲ್ಲೊಂದು ರೀತಿ ಪರಿಮಳ ಮೈ ಜುಂ ಅನ್ನಿಸುವಂತೆ ಮಾಡಿತ್ತಲ್ಲವಾ? ಅಂತ ಕೇಳಿದರೆ ಪೆದ್ದು ಪೆದ್ದಾಗಿ ಹೌದು ಹೌದು ಅನ್ನುತ್ತೇವೆ.

ಕೆಲವೊಮ್ಮೆ ಮಾನವೀಯತೆಯನ್ನು ಪಕ್ಕಕ್ಕಿರಿಸಿ ಮೋಜು ಅನುಭವಿಸುವಂತೆಯೂ ಮಾಡುತ್ತದೆ, ಈ ಚಿತ್ರದಲ್ಲಿ ತೋರಿಸಿದಂತೆ.  ಸುಮ್ಮನೆ – ಕಡಿಮೆ ಸಮಯವಿತ್ತು, ತಪ್ಪಿಸುವುದು  ಅಸಾಧ್ಯವಿತ್ತು ಅನ್ನುವ ಕಾರಣ ಕೊಟ್ಟರೂ, ಪ್ರಯತ್ನ ಕೂಡ ಮಾಡದ ಗಿಲ್ಟ್ ಮನಸ್ಸಾಕ್ಷಿಯನ್ನು ಬರೆ ಬೀಳುವಂತೆ ಹೊಡೆಯುವುದು ಬಾಧಿಸದೇ ಇರದು.

image

ಈ ಮಾನವೀಯತೆಯ ಕುರಿತು ಹತ್ತು ವರ್ಷದ ಹಿಂದಿನ ನಮ್ಮ ವಿಚಾರಧಾಟಿ ಮತ್ತು ಈಗಿನ ವಿಚಾರಧಾಟಿಯ ವ್ಯತ್ಯಾಸವೇನು?  ಈ ಅವರೋಹಣಕ್ಕೆ ಕಾರಣಗಳಾವುವು? ಈ ಕ್ಷಣದ ಅಗತ್ಯ ಮುಖ್ಯವೋ ಅಥವ ಮುಂದೆಂದೋ ನೋಡಿಕೊಂಡು ಆಸ್ವಾದಿಸುವ ವೀಡಿಯೋ, ಫೋಟೋ ಮುಖ್ಯವೋ?

ಈ ಪ್ರಶ್ನೆಗಳಿಗೆ ಉತ್ತರ ಕೊಡುವುದು ಇಲ್ಲಿನ ಉದ್ದೇಶವಲ್ಲ. ಇಂತಹ ಪ್ರಶ್ನೆ ಮೂಡ್ತಾವಾ ಇಲ್ವಾ ಅನ್ನೋದೇ ಮುಖ್ಯ.

ಉತ್ತರಗಳು ಪ್ರಶ್ನೆಯಲ್ಲಿಯೇ ಇದೆ, ಹುಡುಕಿಕೋ ಅನ್ನುವ ರೂಮಿಯ ಮಾತುಗಳು ನಮ್ಮ ಮಾನವೀಯತೆಯನ್ನು ಆಗಾಗ ಎಚ್ಚರಿಸುತ್ತಲೆ ಇರುತ್ತದೆ, 
ಎಚ್ಚರಿಸುತ್ತಲೇ ಇರಬೇಕು ಕೂಡ.

 

ಚಿತ್ರಕೃಪೆ : ಹರೀಶ್ ಗಂಗಭೈರಯ್ಯ.